ವಿಶೇಷ

ಬೆಂಗಳೂರು: ಗೊರಗುಂಟೆಪಾಳ್ಯದ ಜಂಕ್ಷನ್ ನಲ್ಲಿ ಮೊಬೈಲ್ ಪಬ್ಲಿಕ್ ಟಾಯ್ಲೆಟ್ ಆರಂಭಿಸಿದ ಪಿಎಸ್ ಐ!

Nagaraja AB

ಬೆಂಗಳೂರು: ಬೆಂಗಳೂರು- ತುಮಕೂರು ಹೆದ್ದಾರಿಯ ಗೊರಗುಂಟೆಪಾಳ್ಯದ ಜಂಕ್ಷನ್ ನಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ಸ್ಪಂದನೆ ದೊರೆಯದಿದ್ದಾಗ 100 ದಿನಗಳ ಹಿಂದೆ ಆನ್ ಲೈನ್ ಅಭಿಯಾನ ಆರಂಭಿಸಿದ್ದ ಸಬ್ ಇನ್ಸ್ ಪೆಕ್ಟರ್ ಶಾಂತಪ್ಪ ಜಡೆಮ್ಮನವರ್, ಬುಧವಾರ ಸಂಚಾರಿ ಶೌಚಾಲಯವನ್ನು ಪ್ರಾರಂಭಿಸಿದ್ದಾರೆ.  

ಮಂಗಳಮುಖಿಯರು ಈ ಶೌಚಾಲಯಗಳನ್ನು ಉದ್ಘಾಟಿಸಿದರು. ಇಲ್ಲಿನ 10 ಶೌಚಾಲಯಗಳ ಪೈಕಿ ಐದು ಪುರುಷರಿಗೆ, ಮೂರು ಮಹಿಳೆಯರಿಗೆ, ಎರಡು ತೃತೀಯ ಲಿಂಗಿಗಳಿಗಾಗಿ ಮೀಸಲಿಡಲಾಗಿದೆ. ಈ ಮೊಬೈಲ್ ಪಬ್ಲಿಕ್ ಟಾಯ್ಲೆಟ್ ನಿರ್ಮಾಣಕ್ಕೆ ಕೆಲವು ಸ್ವಯಂ ಸೇವಕರಿಂದ ನೆರವನ್ನು ಸಬ್ ಇನ್ಸ್ ಪೆಕ್ಟರ್ ಪಡೆದಿದ್ದಾರೆ.

ಯಾವುದು ಕೂಡಾ ಉಚಿತವಾಗಿ ಬರುವುದಿಲ್ಲ ಆದರೆ, ನಾನು ನಿರ್ಮಿಸಿರುವ ಟಾಯ್ಲೆಟ್ ಉಚಿತವಾಗಿರುತ್ತದೆ. ಸುಮಾರು 1 ಲಕ್ಷ ರೂಪಾಯಿ ವೆಚ್ಚದಲ್ಲಿ ಇವುಗಳನ್ನು ನಿರ್ಮಿಸಲಾಗಿದೆ. ಕೆಲವರ ನೆರವಿನೊಂದಿಗೆ ಕೊನೆಗೂ ಮೊಬೈಲ್ ಟಾಯ್ಲೆಟ್ ಗಳು ಸಾರ್ವಜನಿಕರಿಗಾಗಿ ಮುಕ್ತವಾಗಿವೆ ಎಂದು ಪಿಎಸ್ ಐ ತಿಳಿಸಿದರು.

ಒಬ್ಬರು ಈ ಶೌಚಾಲಯಗಳ ಸ್ವಚ್ಛತೆ ಮತ್ತು ನಿರ್ವಹಣೆಯನ್ನು ನೋಡಿಕೊಳ್ಳಲಿದ್ದಾರೆ ಎಂದು ಸೆಂಟ್ರಲ್ ವಿಭಾಗದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶಾಂತಪ್ಪ ಜಡೆಮ್ಮನವರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. 

ಗೊರುಗುಂಟೆಪಾಳ್ಯದ ಜಂಕ್ಷನ್ ನಲ್ಲಿ ಸಾರ್ವಜನಿಕ ಶೌಚಾಲಯವಿಲ್ಲದೆ ತನ್ನ ತಾಯಿ ಪಟ್ಟ ಕಷ್ಟದಿಂದ ಪಿಎಸ್ ಐ ಟ್ವಿಟರ್  ಅಭಿಯಾನ ಆರಂಭಿಸಿ, ಅದನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಟ್ಯಾಗ್ ಮಾಡಿದ್ದರು. ಆದಾಗ್ಯೂ, ಅವರಿಂದ ಯಾವುದೇ ಸ್ಪಂದನೆ ದೊರೆಯಲಿಲ್ಲ. ಇದೀಗ ಕೆಲವು ಸ್ಥಳೀಯರ ವಿರೋಧದ ನಡುವೆಯೂ ಶೌಚಾಲಯವನ್ನು ಪ್ರಾರಂಭಿಸಲಾಗಿದ್ದು, ತೃತೀಯ ಲಿಂಗಿ ಭವಾನಿ ಇವುಗಳಿಗೆ ಚಾಲನೆ ನೀಡಿದರು. ಸ್ಥಳೀಯ ಸಂಚಾರಿ ಪೊಲೀಸರಿಂದ ನೆರವು ಪಡೆದಿರುವುದಾಗಿ ಪಿಎಸ್ ಐ ತಿಳಿಸಿದ್ದಾರೆ.

ಇದೇ ಪೊಲೀಸ್ ಅಧಿಕಾರಿ ಶಾಂತಪ್ಪ ಜಡೆಮ್ಮನವರ್ ನಗರದಲ್ಲಿನ ಸಾರ್ವಜನಿಕ ಶೌಚಾಲಯವೊಂದನ್ನು ಸ್ವಚ್ಛಗೊಳಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು.

SCROLL FOR NEXT