ವಿಶೇಷ

Indian Roti bank: 7 ವರ್ಷಗಳ ಹಿಂದೆ ಉತ್ತರ ಪ್ರದೇಶದಲ್ಲಿ ಆರಂಭವಾದ ರೋಟಿ ಬ್ಯಾಂಕ್ ನಿಂದ 14 ರಾಜ್ಯಗಳ ನಿರ್ಗತಿಕರಿಗೆ ಊಟ!

Srinivasamurthy VN

ಲಖನೌ: ಯಾವುದೇ ವ್ಯಕ್ತಿ ಹಸಿದು ಮಲಗಬಾರದು ಎಂಬ ಮಹತ್ವಾಕಾಂಕ್ಷೆಯಿಂದ 7 ವರ್ಷಗಳ ಹಿಂದೆ ಉತ್ತರ ಪ್ರದೇಶದ ಹರ್ದೋಯ್ ನಲ್ಲಿ ಆರಂಭವಾದ ಇಂಡಿಯನ್ ರೋಟಿ ಬ್ಯಾಂಕ್ ಇದೀಗ 14 ರಾಜ್ಯಗಳ ನಿರ್ಗತಿಕರ ಹಸಿವು ನೀಗಿಸುತ್ತಿದೆ.

ಹೌದು.. ಅನೇಕ ಬಾರಿ ಒಂದು ಸಣ್ಣ ಘಟನೆಯೂ ನಮ್ಮ ಜೀವನದ ಮೇಲೆ ದೊಡ್ಡ ಪ್ರಭಾವ ಬೀರುತ್ತದೆ ಮತ್ತು ನಮ್ಮ ಜೀವನದ ದಿಕ್ಕನ್ನೇ ಬದಲಿಸುತ್ತದೆ. ಉತ್ತರ ಪ್ರದೇಶದ ಹರ್ದೋಯ್‌ನ ವಿಕ್ರಮ್ ಪಾಂಡೆಯವರಿಗೂ ಇದೇ ರೀತಿಯ ಘಟನೆ ಸಂಭವಿಸಿದೆ. ಏಳು ವರ್ಷಗಳ ಹಿಂದೆ, ಲಖನೌ ರೈಲು ನಿಲ್ದಾಣದ ಹೊರಗೆ ವಯಸ್ಸಾದ ಮಹಿಳೆಯನ್ನು ಭೇಟಿಯಾಗಿದ್ದರು. ಈ ವೇಳೆ ಅವರ ಹಸಿವಿನ ಕಥೆ ಕೇಳಿ ನೊಂದ ಅವರು ನಿರ್ಗತಿಕರಿಗೆ ಊಟ ನೀಡುವ ವ್ಯವಸ್ಥೆ ಕಲ್ಪಿಸಬೇಕೆಂಬ ಮಹದಾಸೆ ಹೊಂದಿದರು. ಈ ಮಹದಾಸೆಯೇ 'ಇಂಡಿಯನ್ ರೋಟಿ ಬ್ಯಾಂಕ್' (IRB) ಅನ್ನು ಪ್ರಾರಂಭಿಸಲು ಪ್ರೇರೇಪಿಸಿತು.

ಅಂದು ಉತ್ತರ ಪ್ರದೇಶದ ಹರ್ದೋಯ್ ನಲ್ಲಿ ಆರಂಭವಾದ ಇಂಡಿಯನ್ ರೋಟಿ ಬ್ಯಾಂಕ್ ಈಗ 14 ರಾಜ್ಯಗಳಿಗೆ ಹರಡಿದೆ.. ಅಂತೆಯೇ ಅಂತಾರಾಷ್ಟ್ರೀಯ ಗಡಿ ಕೂಡ ದಾಟಿ ಇದೀಗ ನೇಪಾಳ ಮತ್ತು ನೈಜೀರಿಯಾದಂತಹ ದೇಶಗಳಿಗೂ ತಲುಪಿದೆ. ಈ ಉಪಕ್ರಮವನ್ನು ಪ್ರಾರಂಭಿಸಿದ ಹರ್ದೋಯ್‌ನ ವಿಕ್ರಮ್ ಪಾಂಡೆ, ಅವರ ಘೋಷಣೆ ಸ್ಪಷ್ಟವಾಗಿದ್ದು, 'ಭುಖಾ ನಾ ಸೋಯೆ ಕೋಯಿ-ರೋಟಿ ಬ್ಯಾಂಕ್ ಹರ್ದೋಯಿ. ಅಂದರೆ ಹರ್ದೋಯ್ ರೋಟಿ ಬ್ಯಾಂಕ್ ಇರುವಾಗ, ಯಾರೂ ಕೂಡ ಹಸಿವಿನಿಂದ ಮಲಗುವುದಿಲ್ಲ.. ಎಂಬುದಾಗಿದೆ. ಪಾಂಡೆ ಅವರು ಫೆಬ್ರವರಿ 5 ರಂದು ಐಆರ್‌ಬಿಯ ಏಳನೇ ಸಂಸ್ಥಾಪನಾ ದಿನವನ್ನು ಆಚರಿಸಿದ್ದಾರೆ.

ಒಂದು ಘಟನೆ ಜೀವನವನ್ನೇ ಬದಲಿಸಿತು
ಈ ಕುರಿತು ಮಾತನಾಡಿದ ವಿಕ್ರಮ್ ಪಾಂಡೇ ಅವರು, 'ಸುಮಾರು ಏಳು ವರ್ಷಗಳ ಹಿಂದೆ ಮಹಿಳೆಯೊಬ್ಬರು ಲಕ್ನೋ ರೈಲು ನಿಲ್ದಾಣದ ಹೊರಗೆ ಭಿಕ್ಷೆ ಬೇಡುತ್ತಿದ್ದರು. ಆರಂಭದಲ್ಲಿ ನಾನು ಅವಳತ್ತ ಗಮನ ಹರಿಸಲಿಲ್ಲ, ಆದರೆ ಅವಳು ಹಸಿವಿನಿಂದ ಅಳಲು ಪ್ರಾರಂಭಿಸಿದಳು. ಅದಕ್ಕೇ ಅವಳನ್ನು ಊಟಕ್ಕೆ ಕರೆದುಕೊಂಡು ಹೋದೆ. ಆ ಮಹಿಳೆ ಕೈಗಾಡಿಯಲ್ಲಿ ಆರು-ಏಳು ಪೂರಿಗಳನ್ನು ತಿಂದಳು. ಆಕೆ ನಿಜವಾಗಿಯೂ ತುಂಬಾ ಹಸಿದಿದ್ದಳು. ಆ ದಿನ ಪಾಂಡೆ ದೆಹಲಿಗೆ ಹೋಗುತ್ತಿದ್ದರು ಮತ್ತು ದಾರಿಯಲ್ಲಿ ಅವರು ಆ ಮಹಿಳೆಯ ಬಗ್ಗೆ ಯೋಚಿಸುತ್ತಿದ್ದರು. ದೆಹಲಿಯಿಂದ ಹಿಂತಿರುಗಿದ ಮೇಲೆ ಯಾರದೋ ಸಹಾಯದಿಂದ ಹಸಿದವರಿಗೆ ಊಟ ಹಾಕತೊಡಗಿದೆ. ಇದರ ನಂತರ, ಅವರು ತಮ್ಮ ಕೆಲವು ಸ್ನೇಹಿತರ ಜೊತೆಗೂಡಿ ಫೆಬ್ರವರಿ 6, 2016 ರಂದು ಇಂಡಿಯನ್ ರೋಟಿ ಬ್ಯಾಂಕ್ ಅನ್ನು ಸ್ಥಾಪಿಸಿದರು.

ಪ್ರಚಾರಕ್ಕೆ ಸೇರುವ ಜನರು
ಆರಂಭದಲ್ಲಿ ಕೆಲವು ಸ್ಥಳೀಯ ಅಧಿಕಾರಿಗಳು ಪ್ರೋತ್ಸಾಹಿಸಿದರು ಮತ್ತು ನಂತರ ಅವರ ಸ್ನೇಹಿತರ ಸಹಾಯದಿಂದ ಹಸಿದವರಿಗೆ ರೊಟ್ಟಿ ವಿತರಿಸಲು ಪ್ರಾರಂಭಿಸಿದೆವು ಎಂದು ಪಾಂಡೆ ಹೇಳಿದರು. ಜನರು ಈ ಅಭಿಯಾನಕ್ಕೆ ಸೇರುತ್ತಲೇ ಇದ್ದರು ಮತ್ತು ಸ್ವಲ್ಪ ಸಮಯದ ನಂತರ ರೋಟಿ ಬ್ಯಾಂಕ್ ಫರೂಕಾಬಾದ್ ನಲ್ಲಿ ಪ್ರಾರಂಭವಾಯಿತು. ನಂತರ ಈ ಅಭಿಯಾನ ಮತ್ತಷ್ಟು ಹೆಚ್ಚಾಗತೊಡಗಿತು. ಈ ರೊಟ್ಟಿ ಬ್ಯಾಂಕ್ ಈಗ 14 ರಾಜ್ಯಗಳ 100 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಶಾಖೆಗಳನ್ನು ಹೊಂದಿದೆ ಮತ್ತು ಸುಮಾರು 12 ಲಕ್ಷ ಜನರಿಗೆ ಆಹಾರ ನೀಡುವಲ್ಲಿ ಯಶಸ್ವಿಯಾಗಿದೆ ಎಂದು ಪಾಂಡೆ ಹೇಳಿದರು. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲೂ, ಐಆರ್‌ಬಿಯ ಸ್ವಯಂಸೇವಕರು ಜನರಿಗೆ ಆಹಾರವನ್ನು ಒದಗಿಸಲು ತಮ್ಮ ಬದ್ಧತೆಯನ್ನು ತೋರಿಸಿದ್ದಾರೆ ಮತ್ತು ಇದು ಹೆಚ್ಚು ಮೆಚ್ಚುಗೆ ಪಡೆದಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

ಪ್ರತಿ ಜಿಲ್ಲೆಯಲ್ಲೂ ರೋಟಿ ಬ್ಯಾಂಕ್ ಇರಬೇಕು
ಭಾರತದ ಪ್ರತಿ ಜಿಲ್ಲೆಯಲ್ಲಿ ರೋಟಿ ಬ್ಯಾಂಕ್‌ನ ಘಟಕವನ್ನು ತೆರೆಯುವುದು ನನ್ನ ಕನಸು ಎಂದು ಪಾಂಡೆ ಹೇಳಿದರು. ಪ್ರಸ್ತುತ, ಅವರ 100 ಕ್ಕೂ ಹೆಚ್ಚು ಘಟಕಗಳು ದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ. ಐಆರ್‌ಬಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಮಾತನಾಡಿದ ಅವರು, ಸ್ವಯಂಸೇವಕರು ಕುಟುಂಬಗಳಿಂದ ರೋಟಿಗಳನ್ನು ಸಂಗ್ರಹಿಸಿ ತರಕಾರಿಗಳನ್ನು ಸಂಗ್ರಹಿಸುತ್ತಾರೆ ಮತ್ತು ತರಕಾರಿಗಳು, ಉಪ್ಪಿನಕಾಯಿ ಮತ್ತು ಮೆಣಸಿನಕಾಯಿಯೊಂದಿಗೆ ನಾಲ್ಕು ರೊಟ್ಟಿಗಳನ್ನು ಪ್ಯಾಕ್ ಮಾಡುತ್ತಾರೆ. ಈ ಪ್ಯಾಕೆಟ್‌ಗಳನ್ನು ರೈಲ್ವೆ ನಿಲ್ದಾಣಗಳು, ಬಸ್ ನಿಲ್ದಾಣಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷುಕರು ಮತ್ತು ಹಸಿದವರಿಗೆ ಮತ್ತು ನಿರ್ಗತಿಕರಿಗೆ ವಿತರಿಸಲಾಗುತ್ತದೆ ಎಂದು ಪಾಂಡೆ ಹೇಳಿದರು. 

ಸ್ವಯಂಸೇವಕರು ಈ ರೋಟಿ ಪ್ಯಾಕೆಟ್‌ಗಳನ್ನು ಸೈಕಲ್‌ಗಳು, ಮೋಟಾರ್‌ಸೈಕಲ್‌ಗಳು ಮತ್ತು ವಾಹನಗಳಲ್ಲಿ ವಿತರಿಸುತ್ತಾರೆ ಎಂದು ಜಿಯಾಮೌ ನಿವಾಸಿ ಮತ್ತು ಇಂಡಿಯನ್ ರೋಟಿ ಬ್ಯಾಂಕ್ ಲಕ್ನೋದ ಸಂಯೋಜಕ ಮೋಹಿತ್ ಶರ್ಮಾ ತಿಳಿಸಿದ್ದಾರೆ. ಸ್ವಯಂಸೇವಕರು ಸರಾಸರಿ 50-60 ಕುಟುಂಬಗಳಿಂದ 300 ರೊಟ್ಟಿಗಳನ್ನು ಸಂಗ್ರಹಿಸಿ ಪ್ಯಾಕೆಟ್‌ಗಳಲ್ಲಿ ವಿತರಿಸುತ್ತಾರೆ. ದೇಶಾದ್ಯಂತ ಕೆಲಸ ಮಾಡುವ ಐಆರ್‌ಬಿ ತಂಡಗಳು ಪ್ರತಿ ವಾರ ಸರಾಸರಿ 50,000 ರೊಟ್ಟಿಗಳನ್ನು ಸಂಗ್ರಹಿಸುತ್ತವೆ ಎಂದು ಪಾಂಡೆ ಹೇಳಿದರು.

ಮದುವೆಯಲ್ಲಿ ಉಳಿದ ಆಹಾರ ಕೂಡ ವ್ಯರ್ಥವಾಗುವುದಿಲ್ಲ
ಜನರು ಅಕ್ಕಿ ಮತ್ತು ಇತರ ಆಹಾರ ಪದಾರ್ಥಗಳನ್ನು ಸಹ ನೀಡುತ್ತಾರೆ. ಲಕ್ನೋದ ಐಆರ್‌ಬಿಯ ಮಹಿಳಾ ಕಾರ್ಮಿಕರನ್ನು ಸಂಘಟಿಸುವ ಗರಿಮಾ ರಸ್ತೋಗಿ, ಸ್ವಯಂಸೇವಕರು ತಾವು ಸಂಗ್ರಹಿಸುವ ಆಹಾರವು ತಾಜಾ ಮತ್ತು ತಿನ್ನಲು ಯೋಗ್ಯವಾಗಿರುವಂತೆ ನೋಡಿಕೊಳ್ಳುತ್ತಾರೆ. ಅವರು ಮದುವೆ ಆಚರಣೆಯಲ್ಲಿ ಉಳಿದಿರುವ ಹೆಚ್ಚುವರಿ ಆಹಾರವನ್ನು ಸಂಗ್ರಹಿಸುತ್ತಾರೆ ಮತ್ತು ಅದನ್ನು ಅಗತ್ಯವಿರುವವರಿಗೆ ವಿತರಿಸುತ್ತಾರೆ ಎಂದು ಹೇಳಿದರು.

ವಿಕ್ರಮ್ ಪಾಂಡೆ ಅವರ ತಂದೆ ಶೈಲೇಶ್ ಪಾಂಡೆ ಹರ್ದೋಯ್‌ನಲ್ಲಿ ವಕೀಲರಾಗಿದ್ದು, ಅವರ ತಾಯಿ ಗೃಹಿಣಿ... ಸಾರ್ವಜನಿಕ ಸಹಕಾರದಿಂದಲೇ ಈ ಸಂಸ್ಥೆ ನಡೆಯುತ್ತಿದೆ. ಇಂಡಿಯನ್ ರೋಟಿ ಬ್ಯಾಂಕ್ ತನ್ನ ನೆಟ್‌ವರ್ಕ್ ಅನ್ನು WhatsApp ಮೂಲಕ ನಿರ್ವಹಿಸುತ್ತದೆ ಮತ್ತು ಗುಂಪು ನೈಜೀರಿಯಾ ಮತ್ತು ನೇಪಾಳದಲ್ಲೂ ಆಂದೋಲನವನ್ನು ಪ್ರಾರಂಭಿಸಿದೆ. ಹೀಗಾಗಿ ನೇಪಾಳ ಮತ್ತು ನೈಜಿರಿಯಾದಲ್ಲೂ ರೋಟಿ ಬ್ಯಾಂಕ್ ಘಟಕಗಳಿವೆ ಎಂದು ವಿಕ್ರಮ್ ಪಾಂಡೆ ಹೇಳಿದ್ದಾರೆ.

SCROLL FOR NEXT