ಬೆಂಗಳೂರು: ಕಸದಲ್ಲಿ ಸಂಭವಿಸಿದ ಆಕಸ್ಮಿಕ ಬೆಂಕಿಯಿಂದಾಗಿ ಮೂರು ವರ್ಷದ ಮಗಳನ್ನು ಕಳೆದುಕೊಂಡ ಪೊಲೀಸ್ ಅಧಿಕಾರಿ ಡಿ. ಲೋಕೇಶಪ್ಪ, ನೂರಾರು ಮಕ್ಕಳಿಗೆ ನೆರವಾಗುವ ಮೂಲಕ ತಮ್ಮ ದು:ಖವನ್ನು ಮರೆಯುತ್ತಿದ್ದಾರೆ. ತಮ್ಮ ಮಗಳ ಸ್ಮರಣೆಗಾಗಿ ಪ್ರತಿ ವರ್ಷ ಎರಡು ತಿಂಗಳ ಸಂಬಳವನ್ನು ಮೀಸಲಿಡುತ್ತಿದ್ದು, 1 ರಿಂದ 8 ನೇ ತರಗತಿಯ ಸುಮಾರು 600 ವಿದ್ಯಾರ್ಥಿಗಳಿಗೆ ಅಗತ್ಯ ಶಾಲಾ ಸಾಮಗ್ರಿಗಳನ್ನು ಒದಗಿಸುತ್ತಿದ್ದಾರೆ.
ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಆಗ ಹೆಡ್ ಕಾನ್‌ಸ್ಟೆಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಲೋಕೇಶಪ್ಪ ಅವರಿಗೆ ಮಾರ್ಚ್ 5, 2019 ದುರಂತದ ದಿನವಾಗಿದೆ. ಆ ದಿನ ಸಂಜೆ ಶಿವಾಜಿನಗರದ ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ಆಟವಾಡುತ್ತಿದ್ದಾಗ ಬೆಂಕಿ ಅವಘಡ ಸಂಭವಿಸಿದ್ದು, ತಮ್ಮ ಮಗಳು ಹರ್ಷಾಲಿಗೆ ಗಂಭೀರ ಸುಟ್ಟ ಗಾಯಗಳಾಗಿವೆ ಎಂದು ಪತ್ನಿ ಸುಧಾಮಣಿ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಬಳಿಕ ಆಕೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿ, ಮಾರ್ಚ್ 13 ರವರೆಗೆ ಚಿಕಿತ್ಸೆ ನೀಡಲಾಗಿತ್ತು. ಸುಮಾರು ಎಂಟು ದಿನಗಳ ಕಾಲ ಸಾವು- ಬದುಕಿನ ನಡುವೆ ಹೋರಾಡಿದ ನಂತರ ಸುಟ್ಟ ಗಾಯಗಳಿಂದ ಬಾಲಕಿ ಸಾವನ್ನಪ್ಪಿದಳು.
ಪುಸ್ತಕಗಳಲ್ಲಿ ಬಣ್ಣ ಹಚ್ಚುವುದನ್ನು ಇಷ್ಟಪಡುತ್ತಿದ್ದ ತನ್ನ ಮೊದಲ ಮಗು ಸಾವಿನ ನಷ್ಟ ತಾಳಲಾರದೆ, ಈಗ ಶಿವಾಜಿನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿರುವ ಲೋಕೇಶಪ್ಪ, ಹರ್ಷಾಲಿ ಶಿಕ್ಷಣಕ್ಕೆ ತಗಲುತ್ತಿದ್ದ ವೆಚ್ಚದಷ್ಟೇ ತಮ್ಮ ಸಂಬಳದ ಒಂದು ಭಾಗವನ್ನು, ಸೌಕರ್ಯ ವಂಚಿತ ಪ್ರದೇಶಗಳ ವಿದ್ಯಾರ್ಥಿಗಳಿಗೆ ನೀಡುತ್ತಿದ್ದಾರೆ. ಹಾಸನದಲ್ಲಿ ತಾವು ಬೆಳೆಯುವ ಹಂತದಲ್ಲಿ ಸಂಪನ್ಮೂಲ ಕೊರತೆಯಿಂದಾಗಿ ಪಟ್ಟ ಕಷ್ಟಗಳನ್ನು ನೆನಪಿನಲ್ಲಿಟ್ಟುಕೊಂಡು ಇಂತಹ ಪ್ರದೇಶ ಆಯ್ಕೆ ಮಾಡಿಕೊಂಡಿದ್ದಾರೆ.
ಗ್ರಾಮೀಣ ಭಾಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಬೆಲೆ ಸಿಗುತ್ತಿಲ್ಲ, ಮಕ್ಕಳು ಮಧ್ಯಾಹ್ನದ ಊಟಕ್ಕಾಗಿಯೇ ಶಾಲೆಗೆ ಹೋಗುತ್ತಿದ್ದಾರೆ. ಅನೇಕ ಪೋಷಕರು ತಮ್ಮ ಮಕ್ಕಳ ಶಾಲಾ ಸಾಮಾಗ್ರಿ ಕೊಂಡುಕೊಳ್ಳಲು ಆರ್ಥಿಕವಾಗಿ ಸಮರ್ಥರಾಗಿದ್ದರೂ ನೋಟ್‌ಬುಕ್, ಪೆನ್ಸಿಲ್, ಪೆನ್ ನಂತಹ ಸಾಮಾಗ್ರಿಗಳ ಕೊರತೆಗೆ ಸರ್ಕಾರವನ್ನು ದೂಷಿಸುತ್ತಾರೆ ಎಂದು ಲೋಕೇಶಪ್ಪ ಹೇಳಿದರು.
ಲೋಕೇಶಪ್ಪ ಅವರು ಈಗ ಆರು ಶಾಲೆಗಳನ್ನು ದತ್ತು ಪಡೆದಿದ್ದಾರೆ. ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿ 200 ಮಕ್ಕಳಿಗೆ, ಮೈಸೂರಿನಲ್ಲಿ ಒಂದು, ಹಾಸನ ಜಿಲ್ಲೆಯಲ್ಲಿ ನಾಲ್ಕು ಶಾಲೆಗಳು ಸೇರಿದಂತೆ ಒಟ್ಟು 600 ವಿದ್ಯಾರ್ಥಿಗಳಿಗೆ ನೆರವು ನೀಡುತ್ತಿದ್ದಾರೆ. ಹೆಚ್ಚುವರಿ ಅಧ್ಯಯನ ಸಾಮಗ್ರಿಗಳ ಕೊರತೆಯಿಂದಾಗಿ ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ನಿಲ್ಲಿಸುವ ಅಪಾಯ ಹೆಚ್ಚಿರುವ ದೂರದ ಪ್ರದೇಶಗಳಲ್ಲಿ ವಿಶೇಷವಾಗಿ ಶಾಲೆಗಳನ್ನು ಅಳವಡಿಸಿಕೊಳ್ಳಲು ಅವರು ನಿರ್ಧರಿಸಿದ್ದಾರೆ.
ಈ ವರ್ಷ, ಲೋಕೇಶಪ್ಪ ಅವರ ಪತ್ನಿ ಸುಧಾಮಣಿ ಅವರು ತಮ್ಮ ಅಧ್ಯಾಪಕ ವೃತ್ತಿಯನ್ನು ತೊರೆದು ತಮ್ಮ ಮಗಳ ಹೆಸರಿನಲ್ಲಿ ಹರ್ಷಾಲಿ ಫೌಂಡೇಶನ್ ಎಂಬ ಎನ್‌ಜಿಒ ಪ್ರಾರಂಭಿಸಲು ನಿರ್ಧರಿಸಿದ್ದಾರೆ. ಶೀಘ್ರದಲ್ಲೇ ನೋಂದಣಿಯಾಗಲಿರುವ ಈ ಘೌಂಡೇಶನ್ ಮೂಲಕ ದೂರದ ಪ್ರದೇಶಗಳಲ್ಲಿ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳು ಮತ್ತು ಸ್ಟೇಷನರಿಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.