ಮಡಿಕೇರಿ: ನಿಸರ್ಗದೊಂದಿಗೆ ಬೌದ್ಧ ಧರ್ಮ ಅವಿನಾಭಾವ ಸಂಬಂಧ ಹೊಂದಿದೆ. ಗೌತಮ ಬುದ್ಧನಿಗೆ ಬೋಧಿ ವೃಕ್ಷದ ಕೆಳಗಡೆ ಜ್ಞಾನೋದಯ ಪಡೆದ ಕ್ಷಣದಿಂದ ಈ ಬಾಂಧವ್ಯ ಬೇರೂರಿದೆ. ಪ್ರಕೃತಿಯ ಮೇಲಿನ ಈ ಗೌರವವನ್ನು ಬೌದ್ಧ ಮಠಗಳಲ್ಲಿ ಕಾಣಬಹುದು. ಇವು ಶಾಂತವಾದ, ಆಧ್ಯಾತ್ಮಿಕ ಕೇಂದ್ರವಾಗಿಯೂ ಕಾರ್ಯೋನ್ಮುಖವಾಗಿವೆ. ದಕ್ಷಿಣ ಭಾರತದಲ್ಲಿ ಇಂತಹ ಮಠಗಳ ಪೈಕಿ ಕರ್ಮ ಕಾರ್ಗ್ಯು ಮಠವೂ ಒಂದಾಗಿದೆ. 100 ಎಕರೆ ಅರಣ್ಯ ವಲಯದಲ್ಲಿರುವ ಈ ಮಠ ಆರಾಧನೆಗೂ ಮೀರಿ ಸಂರಕ್ಷಣೆ ಮತ್ತು ಪರಿಸರ ಸಾಮರಸ್ಯದ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿದೆ.
ಮಠದ ವಿಶೇಷತೆ ಏನು?
ಬೋಧಿ ಸತ್ವ ಟ್ರಸ್ಟ್‌ನ ಆಶ್ರಯದಲ್ಲಿ ಸ್ಥಾಪಿತವಾದ ಈ ಮಠ, ಮೈಸೂರು ಜಿಲ್ಲೆಯ ಬೈಲಕುಪ್ಪೆಯಲ್ಲಿರುವ ಟಿಬೆಟಿಯನ್ ನಿರಾಶ್ರಿತರ ಶಿಬಿರದಲ್ಲಿದೆ. ಈ ಟ್ರಸ್ಟ್ ಇಕೋ ನಳಂದ ಶಾಲೆ ಎಂಬ ಗುರುಕುಲ ಸಂಸ್ಥೆಯನ್ನು ಸಹ ನಡೆಸುತ್ತಿದೆ. ಅಲ್ಲಿ ಬೌದ್ಧ ಭಿಕ್ಕುಗಳಿಗೆ ದಿನನಿತ್ಯದ ಶಿಕ್ಷಣದೊಂದಿಗೆ ವಿವಿಧ ಅಭ್ಯಾಸಗಳನ್ನು ಕಲಿಸಲಾಗುತ್ತದೆ. ಈ ಮಠದ ವಿಶೇಷವೆಂದರೆ ಇದು ಸುಮಾರು 700 ಕ್ಕೂ ವಿವಿಧ ತಳಿಯ ಮರಗಳಿಗೆ ನೆಲೆಯಾಗಿದೆ. ಸಂರಕ್ಷಣಾ ಕಾರ್ಯಕ್ರಮದ ಮಹತ್ವಾಕಾಂಕ್ಷೆಯೊಂದಿಗೆ 1995 ರಲ್ಲಿ ಟ್ರಸ್ಟ್ ನ್ನು ಸ್ಥಾಪಿಸಲಾಯಿತು. ಗುರು ಕರ್ಮ ಸ್ಯಾಮ್ಟೆನ್ಲಿಂಗ್ಪಾ ರಿಂಪೋಚೆ ಸ್ಥಾಪಿಸಿದ ಟ್ರಸ್ಟ್, ಸುಸ್ಥಿರ ಜೀವನಕ್ಕಾಗಿ ಅನೇಕ ಯೋಜನೆಗಳನ್ನು ಹೊಂದಿದ್ದರೂ ಸಹ ಪ್ರಕೃತಿ ಪುನಶ್ಚೇತನ ಕಾರ್ಯ ನಡೆಸುತ್ತಿದೆ. ಬುದ್ಧನು ಶಾಂತಿಯ ರಾಯಭಾರಿ ಮತ್ತು ಬೋಧಿ ಸತ್ವದಲ್ಲಿ ಆಧ್ಯಾತ್ಮಿಕ ವಿಜ್ಞಾನವನ್ನು ಹಂಚಿಕೊಳ್ಳಲು ಬಯಸುತ್ತೇವೆ ಎಂದು ಟ್ರಸ್ಟ್‌ನ ಸಂಸ್ಥಾಪಕ ಗುರು ಕರ್ಮ ಸ್ಯಾಮ್ಟೆನ್ಲಿಂಗ್ಪಾ ರಿಂಪೋಚೆ ವಿವರಿಸಿದರು.
ಸ್ಪೂರ್ತಿಯ ಕಥೆ ವಿವರಿಸಿದ ಕರ್ಮ ರಿಂಪೋಚೆ
ಇಂತಹ ಪ್ರಕೃತಿ ಸಂರಕ್ಷಣಾ ಕಾರ್ಯಕ್ಕೆ ಸ್ಪೂರ್ತಿಯ ಕಥೆಯನ್ನು ಹೇಳಿದ ಅವರು, ಬೈಲಕುಪ್ಪೆಯಲ್ಲಿ ಜನಿಸಿದ ಮಹಾಯೋಗಿ ಕಾಜುಂಗ್ ಅವರ ಮಗ, ಕರ್ಮ ರಿಂಪೋಚೆ, ಈ ಸ್ಥಳವನ್ನು ತಮ್ಮ ಕರ್ಮಭೂಮಿ ಎಂದು ಕರೆದಿದ್ದರು. ಬಾಲ್ಯದಲ್ಲಿ ಅವರಿಗೆ ತಮ್ಮ ಅಜ್ಜ ಅವರ ಮೊದಲ ಸ್ಫೂರ್ತಿಯಾಗಿದ್ದರೂ ಸಹ ಪ್ರಕೃತಿಯ ನಡುವೆ ಬೆಳೆದರು. ನನ್ನ ತಾತ, ಕೈಲಾಸ ಪರ್ವತದಲ್ಲಿ ಧ್ಯಾನ ಮಾಡಿದ ಮಹಾನ್ ಯೋಗಿ, ಪ್ರಕೃತಿ ಪ್ರೇಮಿಯಾಗಿದ್ದರು. 1959 ರಲ್ಲಿ ಟಿಬೆಟ್ ಮೇಲೆ ಚೀನಾ ದಾಳಿ ನಂತರ ನನ್ನ ಅಜ್ಜಿ-ತಾತಾ ಮತ್ತು ತಂದೆ ಬೈಲಕುಪ್ಪೆಗೆ ಬಂದರು. ನನ್ನ ತಾತ ಯಾವಾಗಲೂ ಧ್ಯಾನ ಮತ್ತು ಮಾವಿನ ಮರದ ಮೇಲೆ ಆಧ್ಯಾತ್ಮಿಕ ಕಲೆ ಬರೆಯುವುದರಲ್ಲಿ ಹೆಚ್ಚಿನ ಕಾಲ ಕಳೆಯುತ್ತಿದ್ದರು. ಮರದ ಮೇಲೆಯೇ ಹೆಚ್ಚಿನ ಕಾಲ ಕಳೆಯುತ್ತಿದ್ದ ಅವರು ಕೇವಲ ಊಟಕ್ಕಾಗಿ ಕೆಳಗಡೆ ಬರುತ್ತಿದ್ದರು ಎಂದು ತಿಳಿಸಿದರು.
ಕರ್ಮ ರಿಂಪೋಚೆ ಪ್ರಕಾರ, ಅವರ ಮನೆಯಲ್ಲಿ ದೊಡ್ಡ ಹಣ್ಣಿನ ತೋಟವೇ ಇತ್ತ. ಅಡುಗೆಗೆ ಬೇಕಾದ ಎಲ್ಲಾ ಸಸ್ಯಗಳನ್ನು ಹಿತ್ತಲಿನಲ್ಲಿಯೇ ಬೆಳೆಯಲಾಗುತಿತ್ತು.ಅಲ್ಲಿಂದ ಪರಿಸರ ಸಂರಕ್ಷಣೆ ಕಡೆಗೆ ಒಲವು ಹೆಚ್ಚಾಯಿತು. 1995 ರಲ್ಲಿ ಗುರುಕುಲದಿಂದ ಪದವಿ ಪಡೆದ ನಂತರ, ಸಂರಕ್ಷಣಾ ಯೋಜನೆ ಪ್ರಾರಂಭಿಸಲು ಟ್ರಸ್ಟ್ ಅನ್ನು ಸ್ಥಾಪಿಸಿದೆ. ಆದರೆ, ದಾರಿ ಸುಲಭವಾಗಿರಲಿಲ್ಲ. ಆಗ ಯುವಕನಾಗಿದ್ದ ಕರ್ಮ ರಿಂಪೋಚೆ ಯೋಜನೆಗೆ ಸರಿಯಾದ ಯೋಜನೆಯನ್ನು ಹೊಂದಿರಲಿಲ್ಲ ಮತ್ತು ಅವರು ಸರ್ಕಾರಿ ಇಲಾಖೆಗಳಿಂದ ಉಚಿತವಾಗಿ ಪಡೆದ ಸಸಿಗಳನ್ನು ನೆಡುವ ಮೂಲಕ ಪ್ರಾರಂಭಿಸಿದರು. 1995 ರಲ್ಲಿ ಮಠದಲ್ಲಿ ಸಿಲ್ವರ್ ಓಕ್ ಸಸಿ ನೆಡುವ ಮೂಲಕ ಸಣ್ಣ ರೀತಿಯಲ್ಲಿ ಪ್ರಾರಂಭವಾದ ಅವರ ಸಂರಕ್ಷಣಾ ಯಾತ್ರೆಗೆ ಇಂದಿಗೂ ಆ ಮರವೇ ಸಾಕ್ಷಿಯಾಗಿದೆ.
ಡಿ. ಕುಪೇಂದ್ರ ರೆಡ್ಡಿ, ಪರಿಸರ ತಜ್ಞ ಡಾ. ಯಲ್ಲಪ್ಪ ರೆಡ್ಡಿ ನೆರವು:
"ನನಗೆ ತಿಳಿದಿದ್ದ ಏಕೈಕ 'ಸತ್ಯ' ಪ್ರಕೃತಿ ಮಾತೆಗೆ ಶರಣಾಗುವುದು ಮತ್ತು ಪ್ರಕೃತಿ ಮಾತೆ ಮಾತ್ರ ನಿಜವಾದ ಧರ್ಮ. ನನ್ನ ಸಂರಕ್ಷಣಾ ಕಥೆಯು ಮಂಗಳೂರಿನ ಹೆಂಚುಗಳನ್ನು ಬಳಸಿ ನಿರ್ಮಿಸಲಾದ ಕರ್ಮ ಕಾರ್ಗ್ಯು ಮಠದ ಚಿಕ್ಕ ದೇವಾಲಯದ ಪಕ್ಕದಲ್ಲಿ ಪ್ರಾರಂಭವಾಯಿತು" ಎಂದು ಅವರು ಹೇಳುತ್ತಾರೆ.
ಈ ದೇವಾಲಯದಲ್ಲಿ ಧ್ಯಾನ ಮಾಡಿದ ನಂತರ ಅವರು ಸಸಿಗಳನ್ನು ನೆಡಲು ಹೋಗುತ್ತಿದ್ದರು.ತಮ್ಮ ಯೋಜನೆಗೆ ಬೆಂಬಲವನ್ನು ಕೋರಿ ಪ್ರಪಂಚದಾದ್ಯಂತ ಪ್ರಯಾಣಿಸಿದರು. ಈ ವೇಳೆ ಮಾಜಿ ಸಂಸದರಾದ ಡಿ. ಕುಪೇಂದ್ರ ರೆಡ್ಡಿ ಪರಿಚಯವಾದರು. ಅವರ ಬೆಂಗಳೂರಿನಲ್ಲಿ ಸರೋವರ ಸಂರಕ್ಷಣಾ ಯೋಜನೆಗಳು ಸೇರಿದಂತೆ ಅನೇಕ ಸಂರಕ್ಷಣಾ ಕಾರ್ಯಕ್ರಮಗಳನ್ನು ಮುನ್ನಡೆಸಿದ್ದಾರೆ. ಕರ್ಮ ರಿಂಪೋಚೆ ಅವರ ಸಂರಕ್ಷಣಾ ಪ್ರಯಾಣ ಅವರನ್ನು ಪ್ರಸಿದ್ಧ ಸಂರಕ್ಷಣಾಕಾರರಾದ ಡಾ ಯಲ್ಲಪ್ಪ ರೆಡ್ಡಿ ಅವರ ಬಳಿಗೆ ಕರೆದೊಯ್ಯಿತು. ಅವರು ಬೋಧಿ ಸತ್ವ ಸಂರಕ್ಷಣಾ ಯೋಜನೆಯನ್ನು ರೂಪಿಸಲು ಸಹಾಯ ಮಾಡಿದರು ಎಂದು ಅವರು ತಿಳಿಸಿದರು.
ಈ ಪ್ರದೇಶದಲ್ಲಿ ಹಲವಾರು ಸಸಿಗಳನ್ನು ನೆಡಲಾಗಿದ್ದರೂ, ಡಾ ಯಲ್ಲಪ್ಪ ರೆಡ್ಡಿ ಅವರ ಭೇಟಿಯ ನಂತರ 400 ಕ್ಕೂ ಹೆಚ್ಚು ದೇಶೀಯ ಸಸಿಗಳನ್ನು ನೆಡಲಾಯಿತು. ಇದು 2006 ರಲ್ಲಿ ನಡೆಯಿತು ಎಂದು ಹೇಳಿಕೊಂಡ ಕರ್ಮ ರಿಂಪೋಚೆ, ಮಠದಲ್ಲಿರುವ ಭಿಕ್ಕುಗಳು ಯೋಜನೆಯ ಭಾಗವಾಗಿದ್ದರು. ಈ ಸಸ್ಯಗಳನ್ನು ಪೋಷಿಸಲು ಬಕೆಟ್ ನೀರಿಗಾಗಿ ಮೈಲುಗಟ್ಟಲೆ ನಡೆದಿದ್ದರು. ಟ್ರಸ್ಟ್ ಈಗ ಮಳೆನೀರು ಕೊಯ್ಲು ಘಟಕ ಮತ್ತು ಹನಿ ನೀರಾವರಿ ಘಟಕವನ್ನು ಹೊಂದಿದ್ದರೂ, ಆರಂಭದಲ್ಲಿ ಸಾಕಷ್ಟು ಶ್ರಮಪಟ್ಟೇವು ಎಂದು ಅವರು ತಿಳಿಸಿದರು.
ಇನ್ನೂ 1,500 ಹೆಚ್ಚು ಸಸಿಗಳನ್ನು ನೆಡುವ ಗುರಿ:
ಮಳೆನೀರು ಕೊಯ್ಲು ಯೋಜನೆಗೆ ಮೈಸೂರಿನ ಪ್ರೊ.ರವಿಕುಮಾರ್ ಮತ್ತು ಕೇರಳ ಅರಣ್ಯ ವಿಜ್ಞಾನ ಸಂಸ್ಥೆಯ ಡಾ. ಚಂದ್ರಶೇಖರ್ ತೋಟಗಾರಿಕೆ ಸಲಹೆಗಾರರಾದರು. ಡಾ. ಯಲ್ಲಪ್ಪ ರೆಡ್ಡಿ ಸೇರಿದಂತೆ ಈ ಎಲ್ಲಾ ವಿಜ್ಞಾನಿಗಳು ಪರಿಸರ ಸಂರಕ್ಷಣೆಗಾಗಿ ತಮ್ಮ ಪ್ರಯತ್ನಗಳಿಗೆ ಒಂದು ರೂಪಾಯಿ ತೆಗೆದುಕೊಳ್ಳಲಿಲ್ಲ ಎಂದು ಕರ್ಮ ರಿಂಪೋಚೆ ಹೇಳುತ್ತಾರೆ. ಟ್ರಸ್ಟ್ 700 ಜಾತಿಯ ದೇಶೀಯ ಮರಗಳ ಸಸಿಗಳನ್ನು ನೆಟ್ಟಿದೆ. ಇನ್ನೂ 1,500 ಹೆಚ್ಚು ಸಸಿಗಳನ್ನು ನೆಡುವ ಗುರಿ ಹೊಂದಿದೆ. ಸುಸ್ಥಿರ ಜೀವನ ಪರಿಕಲ್ಪನೆಯನ್ನು ಉತ್ತೇಜಿಸಲು ಟ್ರಸ್ಟ್ ಈಗ ಮಠದ ಬಳಿ ಮಾದರಿ ಮನೆ ನಿರ್ಮಿಸಲು ತೊಡಗಿದೆ. ಈ ಮನೆಯ ಸುತ್ತಲೂ ತೋಟ, ಅಡುಗೆಮನೆಯ ಅಗತ್ಯಗಳಿಗಾಗಿ ಬೇಕಾದ ತರಕಾರಿಗಳು ಮತ್ತು ದೈನಂದಿನ ಅಗತ್ಯಗಳಿಗಾಗಿ ಆಯುರ್ವೇದ ಸಸಿಗಳನ್ನು ನೆಡುತ್ತೇವೆ. ಅಲ್ಲದೇ 'ಹ್ಯಾಪಿ ಗೋ ಟೆಂಪಲ್' ಅನ್ನು ನಿರ್ಮಿಸುತ್ತೇವೆ . ಅಲ್ಲಿ ಸ್ಥಳೀಯ ಜಾನುವಾರು ತಳಿಯಾದ 'ಮಲ್ನಾಡ್ ಗಿಡ್ಡ'ವನ್ನು ಪರಿಚಯಿಸುತ್ತೇವೆ ಮತ್ತು ಸುಸ್ಥಿರ ಜೀವನಶೈಲಿಯನ್ನು ಉತ್ತೇಜಿಸುತ್ತೇವೆ," ಎಂದು ಅವರು ಹೇಳುತ್ತಾರೆ.
ಕಾಡಾನೆಗಳ ತಂಗುದಾಣ:
ಪರಿಸರ ನಳಂದದಲ್ಲಿ, ‘ಸತ್ಯಂ ಶಿವಂ ಸುಂದರಂ’ ಪರಿಕಲ್ಪನೆಯೊಂದಿಗೆ ಸಂಪರ್ಕ ಕಲ್ಪಿಸುವ ವಿವಿಧ ಜಾತಿಯ ಮರಗಳು ಮತ್ತು ಹಲವಾರು ಆಯುರ್ವೇದ ಸಸಿಗಳನ್ನು ಪೋಷಿಸಲಾಗುತ್ತಿದೆ. ಟ್ರಸ್ಟ್ ನಕ್ಷತ್ರ ವನ, ರಾಶಿ ವನ ಮತ್ತು ನವಗ್ರಹ ವನ ತೋಟವನ್ನು ಅಭಿವೃದ್ಧಿಪಡಿಸಿದೆ.100 ಎಕರೆ ವಿಸ್ತೀರ್ಣದ ಸಂರಕ್ಷಣಾ ಯೋಜನೆಯು ಬೈಲಕುಪ್ಪೆಯ 5,000 ಎಕರೆ ಟಿಬೆಟಿಯನ್ ಕ್ಯಾಂಪ್‌ನ ಮಧ್ಯಭಾಗದಲ್ಲಿದೆ ಮತ್ತು ಇದು ಕಾಡು ಆನೆಗಳ ತಂಗುದಾಣವಾಗಿದೆ. ಈ ಪ್ರದೇಶವು ಆನೆಗಳ ಕಾಟಕ್ಕೆ ಹೆಸರುವಾಸಿಯಾಗಿದೆ. ಆನೆಗಳ ಹಿಂಡುಗಳನ್ನು ಒಂದು ಎಸ್ಟೇಟ್‌ನಿಂದ ಇನ್ನೊಂದಕ್ಕೆ ಓಡಿಸಲಾಗುತ್ತದೆ. ಆದಾಗ್ಯೂ, ಪರಿಸರ ನಳಂದ ಆನೆಗಳಿಗೆ ಅತಿಥಿಗೃಹದಂತಿದೆ. ಮೇವು ಮತ್ತು ನೀರಿನ ಸಮೃದ್ಧಿಯೊಂದಿಗೆ, ಆನೆಗಳು ಆಗಾಗ್ಗೆ ಈ ಸ್ಥಳಕ್ಕೆ ಪ್ರವೇಶಿಸಿ ತಮ್ಮ ಕಾಡಿಗೆ ಮರಳುತ್ತವೆ ಎಂದು ಅವರು ಹೇಳುತ್ತಾರೆ.