General Knowledge: ಭಾರತವು 1947ರ ಆಗಸ್ಟ್ 15ರಂದು ಬ್ರಿಟಿಷರ ನೂರಾರು ವರ್ಷಗಳ ಗುಲಾಮಗಿರಿಯಿಂದ ಮುಕ್ತಿ ಪಡೆಯಿತು ಎಂಬುದು ಇಡೀ ಜಗತ್ತಿಗೆ ತಿಳಿದಿರುವ ಸತ್ಯ. ಆ ದಿನ ಕೋಟ್ಯಂತರ ಭಾರತೀಯರು ಸಂಭ್ರಮಾಚರಣೆಯಲ್ಲಿ ಮುಳುಗಿದ್ದಾಗ, ದೇಶದ ಕೆಲವು ಪ್ರಮುಖ ಪ್ರದೇಶಗಳ ಜನರಿಗೆ ಮಾತ್ರ ಆ ಸಂಭ್ರಮ ಸಿಕ್ಕಿರಲಿಲ್ಲ!
ಹೌದು, ನಮಗೆ ಸಿಕ್ಕಿದ್ದು ಭಾಗಶಃ ಸ್ವಾತಂತ್ರ್ಯವೇ ಹೊರತು ಸಂಪೂರ್ಣ ಭಾರತ ಒಂದೇ ದಿನ ಸ್ವತಂತ್ರವಾಗಲಿಲ್ಲ. ಆಗಸ್ಟ್ 15ರ ನಂತರವೂ ದೇಶದ ಹಲವು ಭಾಗಗಳು ಪೋರ್ಚುಗೀಸರು ಮತ್ತು ಫ್ರೆಂಚರ ವಸಾಹತುಶಾಹಿಗಳ ಅಡಿಯಲ್ಲಿ, ಇನ್ನು ಕೆಲವು ಹಠಮಾರಿ ರಾಜರ ಆಡಳಿತದಲ್ಲೇ ಕತ್ತಲೆಯಲ್ಲಿ ಕಾಲ ಕಳೆಯುತ್ತಿದ್ದವು. ಹಾಗದ್ರೆ, 1947ರ ನಂತರ ವಿಮೋಚನೆಗೊಂಡು ಭಾರತ ಒಕ್ಕೂಟವನ್ನು ಸೇರಿದ ರಾಜ್ಯಗಳ ವಿವರ ಇಲ್ಲಿವೆ:
ಭಾರತ ಒಕ್ಕೂಟಕ್ಕೆ ತಡವಾಗಿ ಸೇರಿದ ರಾಜ್ಯಗಳು:
ಹೈದರಾಬಾದ್ (ತೆಲಂಗಾಣ):
ಹೈದರಾಬಾದ್‌ನ ನಿಜಾಮನು ಭಾರತದೊಂದಿಗೆ ವಿಲೀನಗೊಳ್ಳಲು ನಿರಾಕರಿಸಿ ಸ್ವತಂತ್ರವಾಗಿರಲು ಬಯಸಿದ್ದನು. ಆದ್ರೆ, ಭಾರತ ಸರ್ಕಾರವು ಆಪರೇಷನ್ ಪೋಲೋ ಹೆಸರಿನಲ್ಲಿ ಕಾರ್ಯಚರಣೆ ನಡೆಸಿತು. ಇದರ ಪರಿಣಾಮ 1948ರ ಸೆಪ್ಟೆಂಬರ್ 17 ರಂದು ಹೈದರಾಬಾದ್ ಸಂಸ್ಥಾನದ ಇಂದಿನ ಕಲ್ಯಾಣ ಕರ್ನಾಟಕ, ತೆಲಂಗಾಣ ಮತ್ತು ಮರಾಠವಾಡ ಪ್ರದೇಶಗಳು ಅಧಿಕೃತವಾಗಿ ಭಾರತದ ಭಾಗವಾಯಿತು.
ಜಮ್ಮು ಮತ್ತು ಕಾಶ್ಮೀರ:
ಆಗಸ್ಟ್ 15 ರಂದು ಕಾಶ್ಮೀರ ಸ್ವತಂತ್ರವಾಗಿ ಉಳಿದಿತ್ತು. ಆದರೆ ಅಕ್ಟೋಬರ್‌ನಲ್ಲಿ ಪಾಕಿಸ್ತಾನದ ಬೆಂಬಲಿತ ಬುಡಕಟ್ಟು ಜನಾಂಗದವರು ದಾಳಿ ಮಾಡಿದಾಗ, ಅಲ್ಲಿನ ರಾಜ ಹರಿ ಸಿಂಗ್ ಅವರು ಭಾರತದ ನೆರವು ಕೋರಿದರು ಮತ್ತು 1947 ರ ಅಕ್ಟೋಬರ್ 26 ರಂದು ಭಾರತದೊಂದಿಗೆ ವಿಲೀನ ಒಪ್ಪಂದಕ್ಕೆ ಸಹಿ ಹಾಕಿದರು.
ಸಿಕ್ಕಿಂ:
ಸಿಕ್ಕಿಂ 1947 ರ ನಂತರವೂ ಚೋಗ್ಯಾಲ್ ರಾಜಮನೆತನದ ಆಳ್ವಿಕೆಯಲ್ಲಿ ಭಾರತದ ರಕ್ಷಣೆಯಲ್ಲಿದ್ದ ಸ್ವತಂತ್ರ ದೇಶವಾಗಿತ್ತು. ಆದರೆ 1975 ರಲ್ಲಿ ಅಲ್ಲಿ ನಡೆದ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಜನರು ಭಾರತವನ್ನು ಸೇರಲು ಬಹುಮತ ನೀಡಿದರು. ಹೀಗಾಗಿ 1975 ರ ಮೇ 16 ರಂದು ಸಿಕ್ಕಿಂ ಅಧಿಕೃತವಾಗಿ ಭಾರತದ 22 ನೇ ರಾಜ್ಯವಾಯಿತು.
ಜುನಾಗಢ್:
ಗುಜರಾತ್ ರಾಜ್ಯದ ಜುನಾಗಢದ ನವಾಬ ಪಾಕಿಸ್ತಾನದ ಜೊತೆ ಸೇರಲು ಬಯಸಿದ್ದ. ಆದರೆ, ನವಾಬನ ನಿರ್ಧಾರವನ್ನು ಅಲ್ಲಿನ ಜನ ವಿರೋಧಿಸಿದರು. ಹಾಗಾಗಿ ನವಾಬ ಪಾಕಿಸ್ತಾನಕ್ಕೆ ಪಲಾಯನ ಮಾಡಿದ ನಂತರ, 1948ರ ಫೆಬ್ರವರಿಯಲ್ಲಿ ನಡೆಸಿದ ಜನಮತಸಂಗ್ರಹದ ಮೂಲಕ ಜುನಾಗಢ ಭಾರತಕ್ಕೆ ಸೇರ್ಪಡೆಯಾಯಿತು.
ವಿದೇಶಿ ವಸಾಹತುಗಳಿಂದ ಮುಕ್ತಿ ಪಡೆದ ರಾಜ್ಯಗಳು:
ಭಾರತವನ್ನ ಕೇವಲ ಬ್ರಿಟಿಷರು ಮಾತ್ರವೇ ಆಳ್ವಿಕೆ ಮಾಡುತ್ತಿರಲಿಲ್ಲ. ಅವರೊಂದಿಗೆ ಕೆಲ ಭಾಗಗಳನ್ನು ಪೋರ್ಚುಗೀಸರು ಹಾಗೂ ಫ್ರೆಂಚ್ ಸರ್ಕಾರ ವಸಾಹತುಗಳನ್ನಾಗಿ ಮಾಡಿಕೊಂಡಿದ್ದರು. ಈ ರಾಜ್ಯಗಳು ಭಾರತದೊಂದಿಗೆ ಲೇಟ್ ಆಗಿ ಸ್ವಾತಂತ್ರ್ಯ ಪಡೆದವು. ಅವು,
ಗೋವಾ:
ಸುಮಾರು 450 ವರ್ಷಗಳಿಗೂ ಹೆಚ್ಚು ಕಾಲ ಪೋರ್ಚುಗೀಸರ ಆಳ್ವಿಕೆಯಲ್ಲಿದ್ದ ಗೋವಾ 1947 ರಲ್ಲಿ ಸ್ವಾತಂತ್ರ್ಯ ಪಡೆಯಲಿಲ್ಲ. ಆದ್ರೆ, 1947ರ ನಂತರ ಸ್ವಾತಂತ್ರ್ಯ ಭಾರತದ ಸರ್ಕಾರವು ಗೋವಾವನ್ನ ಭಾರತದ ಭಾಗವಾಗಿಸಲು ಪ್ರಯತ್ನ ಪಟ್ಟಿತು. ಆದ್ರೆ, ಸಫಲವಾಗದೆ ಇದ್ದಾಗ ಕೊನೆಗೆ ಭಾರತ ಸರ್ಕಾರವು 1961 ರ ಡಿಸೆಂಬರ್ 18-19 ರಂದು ಆಪರೇಷನ್ ವಿಜಯ್ ಎಂಬ ಸೇನಾ ಕಾರ್ಯಾಚರಣೆಯ ಮೂಲಕ ಗೋವಾವನ್ನು ಪೋರ್ಚುಗೀಸರಿಂದ ಮುಕ್ತಗೊಳಿಸಿತು.
ಪುದುಚೇರಿ:
ಪುದುಚೇರಿ (ಪಾಂಡಿಚೇರಿ), ಕಾರೈಕಲ್, ಮಾಹೆ ಮತ್ತು ಯಾಣಂ ಪ್ರದೇಶಗಳು ಫ್ರೆಂಚ್ ವಸಾಹತುಗಳಾಗಿದ್ದವು. ದೀರ್ಘ ಹೋರಾಟದ ನಂತರ, ಫ್ರೆಂಚ್ ಸರ್ಕಾರವು 1954 ರ ನವೆಂಬರ್ 1 ರಂದು ಈ ಪ್ರದೇಶಗಳ ಆಡಳಿತವನ್ನು ಭಾರತಕ್ಕೆ ಹಸ್ತಾಂತರಿಸಿತು.
ದಮನ್ ಮತ್ತು ದಿಯು ಹಾಗೂ ದಾದ್ರಾ ಮತ್ತು ನಗರ ಹವೇಲಿ:
ದಾದ್ರಾ ಮತ್ತು ನಗರ ಹವೇಲಿ 1954 ರಲ್ಲಿ ಪೋರ್ಚುಗೀಸರಿಂದ ಮುಕ್ತವಾಯಿತು. ದಮನ್ ಮತ್ತು ದಿಯು ಪ್ರದೇಶಗಳು ಗೋವಾದೊಂದಿಗೆ 1961 ರಲ್ಲಿ ಭಾರತ ಒಕ್ಕೂಟವನ್ನು ಸೇರಿದವು.