ಕೇವಲ ಒಂದೇ ಒಂದು ದಿನಕ್ಕೆ ಪ್ರಧಾನಿಯಾಗಿದ್ದ IAS ಅಧಿಕಾರಿ! ಏಕ್ ದಿನ್ ಕಾ PM ಬಗ್ಗೆ ಇಲ್ಲಿದೆ ರೋಚಕ ಕಥೆ
ಜವಾಹರಲಾಲ್ ನೆಹರು ಅವರಿಂದ ಹಿಡಿದು ನರೇಂದ್ರ ಮೋದಿಯವರವರೆಗೆ ಭಾರತದ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ ಮಹಾನ್ ನಾಯಕರ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಆದರೆ, ಭಾರತದ ಇತಿಹಾಸದಲ್ಲಿ ಓರ್ವ ಐಎಎಸ್ ಅಧಿಕಾರಿ ಕೇವಲ 'ಒಂದೇ ಒಂದು ದಿನಕ್ಕೆ' ಪ್ರಧಾನಮಂತ್ರಿಯಾಗಿದ್ದರು ಎಂಬ ಅಚ್ಚರಿಯ ಸಂಗತಿ ನಿಮಗೆ ಗೊತ್ತೇ?
General Knowledge: ಜವಾಹರಲಾಲ್ ನೆಹರು ಅವರಿಂದ ಹಿಡಿದು ನರೇಂದ್ರ ಮೋದಿಯವರವರೆಗೆ ಭಾರತದ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ ಮಹಾನ್ ನಾಯಕರ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ರಾಜಕೀಯ ಹಿನ್ನೆಲೆ, ಚುನಾವಣೆ, ಬಹುಮತ ಇಲ್ಲದೆ ಈ ದೇಶದ ಅತ್ಯುನ್ನತ ಹುದ್ದೆಯನ್ನು ಏರುವುದು ಅಸಾಧ್ಯ ಎಂಬುದು ನಮ್ಮೆಲ್ಲರ ನಂಬಿಕೆ. ಆದರೆ, ಭಾರತದ ಇತಿಹಾಸದಲ್ಲಿ ಯಾವುದೇ ಚುನಾವಣೆಗೆ ನಿಲ್ಲದೆ, ಯಾವುದೇ ರಾಜಕೀಯ ಪಕ್ಷದ ಬೆಂಬಲವಿಲ್ಲದೆ ಓರ್ವ ಸಾಮಾನ್ಯ ಐಎಎಸ್ ಅಧಿಕಾರಿ ಕೇವಲ 'ಒಂದೇ ಒಂದು ದಿನಕ್ಕೆ' ಪ್ರಧಾನಮಂತ್ರಿಯಾಗಿದ್ದರು ಎಂಬ ಅಚ್ಚರಿಯ ಸಂಗತಿ ನಿಮಗೆ ಗೊತ್ತೇ?
ಹೌದು, ಇದು ಯಾವುದೋ ಸಿನಿಮಾ ಕಥೆಯಲ್ಲ, ಭಾರತದ ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಅಪರೂಪದ ಸತ್ಯ! ಅದುವೇ, 1961ರ ಆಗಸ್ಟ್ 11ರಂದು ಐಎಎಸ್ ಅಧಿಕಾರಿ ಕಿಶಿನ್ಚಂದ್ ಗೋಬಿಂದ್ರಾಮ್ ಬದ್ಲಾನಿ (K.G. Badlani) ಅವರನ್ನು ದಾದ್ರಾ ಮತ್ತು ನಗರ್ ಹವೇಲಿಯ ಪ್ರಧಾನಮಂತ್ರಿಯಾಗಿ ನೇಮಿಸಲಾಗಿತ್ತು. ಪೋರ್ಚುಗೀಸರ ದಾಸ್ಯದಿಂದ ಮುಕ್ತವಾಗಿದ್ದ ಆ ಭೂಭಾಗವನ್ನು ಕಾನೂನುಬದ್ಧವಾಗಿ ಭಾರತದ ಒಕ್ಕೂಟದಲ್ಲಿ ವಿಲೀನಗೊಳಿಸಲು ಅಂದಿನ ಭಾರತದ ಪ್ರಧಾನಿ ಜವಾಹರಲಾಲ್ ನೆಹರು ಅವರೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವ ಸಲುವಾಗಿ ಈ ಐತಿಹಾಸಿಕ ಮತ್ತು ಅಸಾಮಾನ್ಯ ಸಾಂವಿಧಾನಿಕ ನಡೆಯನ್ನು ಅನುಸರಿಸಲಾಗಿತ್ತು. ಕೇವಲ 24 ಗಂಟೆಗಳ ಕಾಲ ಪ್ರಧಾನಿ ಪಟ್ಟ ಅಲಂಕರಿಸಿ ಇತಿಹಾಸ ಸೃಷ್ಟಿಸಿದ ಆ ಅಧಿಕಾರಿಯ ರೋಚಕ ಕಥೆ ಇಲ್ಲಿದೆ...
ದಾದ್ರಾ ನಗರ ಹವೇಲಿ ಆಗ ಸ್ವತಂತ್ರ ದೇಶವಾಗಿತ್ತು!
ಗೋವಾದಂತೆ ದಾದ್ರಾ ಮತ್ತು ನಗರ ಹವೇಲಿ ಕೂಡ ಪೋರ್ಚುಗೀಸರ ವಶದಲ್ಲಿತ್ತು. 1954 ರ ಆಗಸ್ಟ್ 2 ರಂದು ಸ್ವಾತಂತ್ರ್ಯ ಹೋರಾಟಗಾರರು, ಸ್ವಯಂಸೇವಕರು ಸಿಲ್ವಾಸಾವನ್ನು ವಶಪಡಿಸಿಕೊಂಡರು. ಆಗಿನಿಂದ 1961 ರವರೆಗೆ ಅದು ಸ್ವತಂತ್ರವಾಗಿತ್ತು, ಅಲ್ಲಿ ವರಿಷ್ಠ ಪಂಚಾಯತ್ ಆಡಳಿತ ನಡೆಸುತ್ತಿತ್ತು. ಅದು ಭಾರತದ ಭಾಗವೂ ಅಲ್ಲ, ಪೋರ್ಚುಗಲ್ ಭಾಗವೂ ಅಲ್ಲ. ಇಂಟರ್ನ್ಯಾಷನಲ್ ಕೋರ್ಟ್ ನಲ್ಲೂ ಕೇಸ್ ನಡೆಯುತ್ತಿತ್ತು.
ನೆಹರುಗೆ ದೊಡ್ಡ ಕಾನೂನು ಸಮಸ್ಯೆ ಬಂದಿದ್ದೇಕೆ?
ದಾದ್ರಾ ಜನರು ಭಾರತಕ್ಕೆ ಸೇರಬೇಕು ಅಂತ ಬಯಸಿದ್ದರು. ಜೂನ್ 1961 ರಲ್ಲಿ ವರಿಷ್ಠ ಪಂಚಾಯತ್ ಭಾರತಕ್ಕೆ ಸೇರಲು ಮತ ಹಾಕಿತು. ಆದರೆ ಕಾನೂನು ಪ್ರಕಾರ, ಭಾರತಕ್ಕೆ ಸೇರಲು ಒಂದು ಸ್ವತಂತ್ರ ದೇಶದ ಪ್ರಧಾನಿ ಅಥವಾ ರಾಷ್ಟ್ರದ ಮುಖ್ಯಸ್ಥರು ಭಾರತದ ಪ್ರಧಾನಿಯೊಂದಿಗೆ ವಿಲೀನ ಒಪ್ಪಂದಕ್ಕೆ ಸಹಿ ಹಾಕಬೇಕಿತ್ತು. ಸಾಮಾನ್ಯ ನಾಗರಿಕ ಅಥವಾ ಆಡಳಿತಾಧಿಕಾರಿ ಸಹಿ ಹಾಕಿದರೆ ಅದು ಅಂತಾರಾಷ್ಟ್ರೀಯ ಕಾನೂನಿನಲ್ಲಿ ಮಾನ್ಯವಾಗುತ್ತಿರಲಿಲ್ಲ. ಆಗ ನೆಹರು ಸರ್ಕಾರ ಅದ್ಭುತ ಉಪಾಯ ಮಾಡಿತು.
ಏಕ್ ದಿನ್ ಕಾ ಪಿಎಂ!
ಭಾರತ ಸರ್ಕಾರ ಗುಜರಾತ್ ಕೇಡರ್ IAS ಅಧಿಕಾರಿ ಕೆ.ಜಿ. ಬದ್ಲಾನಿ ಅವರನ್ನು ದಾದ್ರಾ ನಗರ ಹವೇಲಿಯ ಆಡಳಿತಾಧಿಕಾರಿಯಾಗಿ ಕಳುಹಿಸಿತು. 1961 ರ ಆಗಸ್ಟ್ 11 ರಂದು ವರಿಷ್ಠ ಪಂಚಾಯತ್ ಅವರನ್ನು ದಾದ್ರಾ ಮತ್ತು ನಗರ ಹವೇಲಿಯ ಪ್ರಧಾನಮಂತ್ರಿಯಾಗಿ ನೇಮಿಸಿತು. ಅಂದರೆ ಒಂದು ದಿನಕ್ಕೆ ಅವರು ಒಂದು ದೇಶದ ಪ್ರಧಾನಿಯಾದರು. ಪ್ರಧಾನಿಯಾದ ಕೂಡಲೇ ಅವರು ಭಾರತದ ಪ್ರಧಾನಿ ಜವಾಹರಲಾಲ್ ನೆಹರು ಅವರೊಂದಿಗೆ ವಿಲೀನ ಪತ್ರಕ್ಕೆ ಸಹಿ ಹಾಕಿದರು. ಇಬ್ಬರು ಪ್ರಧಾನಿಗಳ ನಡುವೆ ಒಪ್ಪಂದವಾಯಿತು, ಹಾಗಾಗಿ ಕಾನೂನುಬದ್ಧವಾಯಿತು.
ಬದ್ಲಾನಿ ಸಹಿ ಹಾಕಿದ ಮರುಕ್ಷಣವೇ ದಾದ್ರಾ ಮತ್ತು ನಗರ ಹವೇಲಿ ಭಾರತದ ಭಾಗವಾಯಿತು. ಸಂಸತ್ತಿನಲ್ಲಿ 10 ನೇ ಸಂವಿಧಾನ ತಿದ್ದುಪಡಿ ಮಾಡಿ ಅದನ್ನು ಅಧಿಕೃತವಾಗಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಯಿತು. ಬದ್ಲಾನಿ ಅವರ ಒಂದು ದಿನದ ಪ್ರಧಾನಿ ಹುದ್ದೆ ಮುಗಿಯಿತು, ಅವರು ಮತ್ತೆ IAS ಅಧಿಕಾರಿಯಾಗಿ ಮುಂದುವರಿದರು. ಈ ಅಪರೂಪದ ಘಟನೆ ಭಾರತದ ಇತಿಹಾಸದಲ್ಲಿ ಬೇರೆಲ್ಲೂ ನಡೆದಿಲ್ಲ.
1974 ರವರೆಗೂ ಜಗತ್ತು ಒಪ್ಪಿಕೊಂಡಿರಲಿಲ್ಲ!
ಭಾರತ ಅಧಿಕೃತವಾಗಿ 1961 ರಲ್ಲಿ ಸೇರಿಸಿಕೊಂಡರೂ, ಅಂತಾರಾಷ್ಟ್ರೀಯ ಸಮುದಾಯ ಪೋರ್ಚುಗಲ್ ಜೊತೆಗಿನ ಒಪ್ಪಂದದ ನಂತರ 1974 ರವರೆಗೂ ಇದನ್ನು ಮಾನ್ಯ ಮಾಡಿರಲಿಲ್ಲ. ಆದರೂ ಬದ್ಲಾನಿ ಅವರ ಬುದ್ಧಿವಂತಿಕೆಯಿಂದ ಭಾರತಕ್ಕೆ ಯಾವುದೇ ಯುದ್ಧ, ರಕ್ತಪಾತವಿಲ್ಲದೆ ಒಂದು ಪ್ರದೇಶ ಸಿಕ್ಕಿತು. ಗೋವಾಕ್ಕಾಗಿ ಯುದ್ಧ ಮಾಡಬೇಕಾಯಿತು, ಆದರೆ ದಾದ್ರಾ ನಗರ ಹವೇಲಿ ಕೇವಲ ಒಂದು ಸಹಿಯಿಂದ ಸಿಕ್ಕಿತು.