ಹೈದರಾಬಾದ್: ಪ್ರಸಕ್ತ ಸಾಲಿನ ಪ್ರೊ ಕಬಡ್ಡಿ ಟೂರ್ನಿಯ ಆರಂಭಿಕ ಎಂಟು ಪಂದ್ಯಗಳಲ್ಲಿ ಸತತ ಗೆಲುವಿನ ಮೂಲಕ ಮೆರೆಯುತ್ತಿದ್ದ ಮುಂಬೈಗೆ, ಈಗ ಟೂರ್ನಿಯಲ್ಲಿ ಮೊದಲ ಆಘಾತವಾಗಿದ್ದು, ಅದರ ಗೆಲುವಿನ ಓಟಕ್ಕೆ ತಡೆಬಿದ್ದಿದೆ.
ಗಾಚಿಬೋಲಿ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಟೂರ್ನಿಯ 34ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ 35-25 ಅಂಕಗಳ ಅಂತರದಲ್ಲಿ ಗೆಲುವು ದಾಖಲಿಸುವ ಮುಖೇನಯು ಮುಂಬಾಗೆ ಸೋಲಿನ ರುಚಿಯುಣಿಸಿತು. ಅಂದಹಾಗೆ ಟೂರ್ನಿಯ ಆರಂಭಿಕ ಪಂದ್ಯದಲ್ಲಿಯು ಮುಂಬಾ ವಿರುದ್ಧ ಸೋತಿದ್ದ ಜೈಪುರ ತಂಡಕ್ಕೆ ಈ ಗೆಲುವು ತುಸು ಸಮಾಧಾನ ತಂದಿತು.
ಈ ಗೆಲುವಿನೊಂದಿಗೆ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆದಿದೆ. ಪಂದ್ಯದ ಆರಂಭದಿಂದಲೂ ಆಕರ್ಷಕ ಪ್ರದರ್ಶನ ನೀಡಿದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಎಲ್ಲ ವಿಭಾಗಗಳಲ್ಲೂ ಸಂಘಟಿತ ಪ್ರದರ್ಶನ ನೀಡಿತು. ಇನ್ನು ಜೈಪುರ ತಂಡದ ರಕ್ಷಣಾತ್ಮಕ ವಿಭಾಗ ಎಂದಿನಂತೆ ಪರಿಣಾಮಕಾರಿ ಪ್ರದರ್ಶನ ನೀಡಿತು. ಪ್ರಶಾಂತ್ ಚೌಹಾಣ್, ಕುಲ್ದೀಪ್ ಸಿಂಗ್ ಹಾಗೂ ರಣ್ ಸಿಂಗ್ ಸೂಪರ್ ಟ್ಯಾಕಲ್ ಮಾಡುವ ಮೂಲಕ ತಂಡಕ್ಕೆ ಆಸರೆಯಾಗಿ ನಿಂತರು.
ಯು ಮುಂಬಾ ತಂಡದ ಪರ ಸುರೇಂದರ್ ನಾಡಾ ರಕ್ಷಣಾತ್ಮಕ ವಿಭಾಗದಲ್ಲಿ 6 ಅಂಕ ಪಡೆದಿದ್ದು, ತಂಡದ ಪರ ಗರಿಷ್ಠ ಪಾಯಿಂಟ್ ಎನಿಸಿತು. ಇನ್ನು ಟೂರ್ನಿಯಲ್ಲಿ ತಂಡದ ಪರ ಪ್ರಮುಖ ಆಟಗಾರನೆನಿಸಿರುವ ನಾಯಕ ಅನುಪ್ ಕುಮಾರ್ 14 ರೈಡ್‍ಗಳಲ್ಲಿ ಕೇವಲ 2 ಅಂಕಗಳನ್ನು ಪಡೆದಿದ್ದು, ತಂಡದ ಹಿನ್ನಡೆಗೆ ಪ್ರಮುಖ ಕಾರಣವಾಯಿತು. ಮತ್ತೊಬ್ಬ ರೈಡರ್ ಪವನ್ ಕುಮಾರ್ ಸಹ 12 ರೈಡ್ ಮಾಡಿ ಕೇವಲ 2 ಅಂಕಗಳನ್ನು ಗಳಿಸಿ ತೀವ್ರ ನಿರಾಸೆ ಮೂಡಿಸಿದರು.
ಪಂದ್ಯದ ಆರಂಭದಿಂದ ಮುನ್ನಡೆ ಸಾಧಿಸಿದ ಜೈಪುರ ತಂಡ 32ನೇ ನಿಮಿಷದ ವೇಳೆಗೆ 3019 ಅಂಕಗಳ ಅಂತರದ ಮುನ್ನಡೆಯೊಂದಿಗೆ ಪಂದ್ಯದಲ್ಲಿ ಸುಸ್ಥಿತಿಗೆ ತಲುಪಿತು. ಹಾಗಾಗಿ ಪಂದ್ಯದ ಅಂತಿಮ ಅವಧಿಯಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಒತ್ತಡದಿಂದ ಹೊರಬಂದು ರಕ್ಷಣಾತ್ಮಕ ಪ್ರದರ್ಶನದಿಂದ ಅಂತರ ಕಾಯ್ದುಕೊಳ್ಳುವತ್ತ ಗಮನ ಹರಿಸಿತು.