ಬೆಂಗಳೂರು: ಟೆಸ್ಟ್ ಕ್ರಿಕೆಟ್‍ನಲ್ಲಿ ಬಳಸಲಾಗುತ್ತಿರುವ ಅಂಪೈರ್ ತೀರ್ಪು ಪರಿಶೀಲನಾ ವ್ಯವಸ್ಥೆ (ಡಿಆರ್‍ಎಸ್)ನಲ್ಲಿ ಕೆಲವು ಬದಲಾವಣೆ ತರುವವರೆಗೂ ಭಾರತ ಈ ವ್ಯವಸ್ಥೆಯನ್ನು ಒಪ್ಪುವುದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
ಈ ವ್ಯವಸ್ಥೆಯಲ್ಲಿ ಐಸಿಸಿ ಬದಲಾವಣೆ ತರುವುದೇ ಎಂಬುದನ್ನು ನೋಡುತ್ತೇವೆ. ಡಿಆರ್‍ಎಸ್‍ನಲ್ಲಿ ನೋಬಾಲ್, ಬ್ಯಾಟ್ ಪ್ಯಾಡ್ ಕ್ಯಾಚ್, ಮತ್ತು ಇತರೆ ರಿವ್ಯೂಗಳಲ್ಲಿ ಇನ್ನಷ್ಟು ಸುಧಾರಣೆ ತರಬಹುದಾಗಿದೆ. ಆದರೆ ಎಲ್‍ಬಿಡಬ್ಲ್ಯೂನಲ್ಲಿ ಡಿಆರ್‍ಎಸ್ ಅನ್ನು ಭಾರತ ಒಪ್ಪುವುದಿಲ್ಲ. ಈ ಕುರಿತು ನಾವು ಸಾಕಷ್ಟು ಅಸಮಾಧಾನ ಹೊಂದಿದ್ದೇವೆ. ಐಸಿಸಿ ನಿಖರ ವ್ಯವಸ್ಥೆ ತರುವವರೆಗೂ ಎಲ್ ಬಿಡಬ್ಲ್ಯೂಗೆ ಡಿಆರ್‍ಎಸ್ ಅನ್ನು ಒಪ್ಪುವುದಿಲ್ಲ ಎಂದು ಅನುರಾಗ್ ಠಾಕೂರ್ ತಿಳಿಸಿದ್ದಾರೆ.
ಎನ್‍ಸಿಎ ಸ್ಥಳಾಂತರ ಅನಿವಾರ್ಯ
ಇನ್ನು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯನ್ನು ಸ್ಥಳಾಂತರಿಸುವ ಬಗ್ಗೆ ಮಾತನಾಡಿರುವ ಠಾಕೂರ್, ಬೇರೆ ರಾಜ್ಯ ಸರ್ಕಾರಗಳು ಈ ಸಂಸ್ಥೆ ನಿರ್ಮಿಸಲು ಉಚಿತವಾಗಿ ಭೂಮಿಯನ್ನು ನೀಡಲು ಮುಂದಾಗಿದೆ. ಆದರೆ, ಉಪೇಕ್ಷೆಯಿಂದಾಗಿ ಇಲ್ಲಿ ರು.50 ಕೋಟಿ ನೀಡಿದ್ದರೂ ಅಗತ್ಯ ಭೂಮಿ ಸಿಗುವುದು ಅನುಮಾನ. ಹಿಮಾಚಲ ಪ್ರದೇಶ ಹಾಗೂ ಮಹಾರಾಷ್ಟ್ರ ಸರ್ಕಾರಗಳು ಮುಂದೆ ಬಂದಿದ್ದು, ಕರ್ನಾಟಕ ಸರ್ಕಾರ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕಿದೆ ಎಂದರು.