ನವದೆಹಲಿ: ಹೆಚ್ಚಿನ ತರಬೇತಿಗಾಗಿ ತನಗೆ ಹಣಕಾಸು ನೆರವು ನೀಡಬೇಕೆಂದು ಮನವಿ ಸಲ್ಲಿಸಿದ್ದ ಬೀಜಿಂಗ್ ಒಲಿಂಪಿಕ್ಸ್ ಶೂಟಿಂಗ್ ವಿಜೇತ ಅಭಿನವ್ ಬಿಂದ್ರಾ ಅವರಿಗೆ ಕೇಂದ್ರ ಕ್ರೀಡಾ ಸಚಿವಾಲಯ ಅಸ್ತು ಎಂದಿದೆ.
ಅದರಂತೆ ಮುಂದಿನ ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಲು ನೆರವಾಗುವಂತೆ ಮುಂದಿನ ತಿಂಗಳು 1ರಿಂದ 11ರವರೆಗೆ ಜರ್ಮನಿಯಲ್ಲಿ ತರಬೇತಿ ಪಡೆಯಲು 5,000 ಯೂರೋಗಳ ಧನಸಹಾಯವನ್ನು ಒದಗಿಸಲಾಗಿದೆ. ``ಯೋಜನಾ ಹಂತದ ಶೇ. 90ರಷ್ಟು ಹಣವನ್ನು ಮುಂಗಡವಾಗಿ ನೀಡಲು ಈಗಾಗಲೇ ಒಪ್ಪಿಗೆ ಸೂಚಿಸಲಾಗಿದೆ. ಖರ್ಚು ವೆಚ್ಚದ ಮೊತ್ತವನ್ನು ಬಿಂದ್ರಾಗೆ ಒದಗಿಸಲಾಗಿರುವ ಟಾರ್ಗೆಟ್ ಒಲಿಂಪಿಕ್ ಫೋಡಿಯಂ (ಟಿಒಪಿ) ಯೋಜನೆಯಡಿ ಒದಗಿಸಲಾಗುವುದು'' ಎಂದು ಕ್ರೀಡಾ ಸಚಿವಾಲಯದ ಪ್ರಕಟಣೆ ತಿಳಿಸಿದೆ.