ಜೈಪುರ: ಪಂದ್ಯದ ಮೊದಲಾರ್ಧದ ಅಂತಿಮ ನಿಮಿಷದಲ್ಲಿ ಕೆಚ್ಚೆದೆಯ ಹೋರಾಟ ನಡೆಸಿ ಲಯ ಕಂಡುಕೊಂಡು ಬೆಂಗಳೂರು ಬುಲ್ಸ್ ಮೇಲೆ ಸಂಪೂರ್ಣ ಪ್ರಾಬಲ್ಯ ಮೆರೆದ ಜೈಪುರ
ಪಿಂಕ್ ಪ್ಯಾಂಥರ್ಸ್ ಪ್ರಸಕ್ತ ಪ್ರೊ ಕಬ್ಬಡಿ ಲೀಗ್ ನಲ್ಲಿ ಮೊದಲ ಗೆಲುವು ದಾಖಲಿಸಿದೆ.
ಇಲ್ಲಿನ ಸವಾಯ್ ಮಾನ್‍ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ಪಿಂಕ್ ಪ್ಯಾಂಥರ್ಸ್ ತಂಡ 36-23 ಅಂಕಗಳ ಅಂತರದಲ್ಲಿ ಬೆಂಗಳೂರು ಬುಲ್ಸ್ ತಂಡವನ್ನು
ಮಣಿಸಿತು. ಆ ಮೂಲಕ ಸತತ ಮೂರು ಪಂದ್ಯಗಳ ಭರ್ಜರಿ ಗೆಲುವಿನಿಂದ ಕೂಡಿದ್ದ ಬುಲ್ಸ್‍ಗೆ ಸೋಲಿನ ರುಚಿಯುಣಿಸಿತು.
ಪಂದ್ಯದ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಬೆಂಗಳೂರು ಬುಲ್ಸ್, ದಿಢೀರನೆ ತನ್ನ ನಿಯಂತ್ರಣ ಕಳೆದುಕೊಂಡು ಮಂಕಾಯಿತು. ಇದರ ಸಂಪೂರ್ಣ ಲಾಭ ಪಡೆದ ಜೈಪುರ ತಂಡ ಗೆಲುವು ಸಾಧಿಸಿತು. ಈ ಮೂಲಕ ಸತತ 4 ಪಂದ್ಯಗಳಲ್ಲಿನ ಸೋಲಿನ ನಂತರ ಜೈಪುರ ಪಿಂಕ್ ಪ್ಯಾಂಥರ್ಸ್ ಪಡೆ ತವರಿನ ಪ್ರೇಕ್ಷಕರೆದುರು ತಲೆಎತ್ತಿ ನಿಂತಂತಾಯಿತು. ಪಂದ್ಯಕ್ಕೂ ಮುನ್ನ 7ನೇ ಸ್ಥಾನದಲ್ಲಿದ್ದ ಜೈಪುರ, ಈ ಜಯದಿಂದ 8 ಅಂಕಗಳೊಂದಿಗೆ ಐದನೇ ಸ್ಥಾನಕ್ಕೇರಿದೆ. ಇನ್ನು ಆಡಿರುವ 6 ಪಂದ್ಯಗಳಲ್ಲಿ 4 ಗೆಲುವು ಹಾಗೂ 2ರಲ್ಲಿ ಸೋತಿರುವ ಬುಲ್ಸ್ ಮೂರನೇ ಸ್ಥಾನದಲ್ಲಿ ಮುಂದುವರಿದಿದೆ.
ಇಂದಿನ ಪಂದ್ಯಗಳು
ಪುನೇರಿ ಪಲ್ಟಾನ್ಸ್ v/s ಬೆಂಗಾಲ್ ವಾರಿಯರ್ಸ್ ರಾತ್ರಿ 8ಕ್ಕೆ
ಜೈಪುರ ಪಿಂಕ್ ಪ್ಯಾಂಥರ್ಸ್ v/s ದಬಾಂಗ್ ಡೆಲ್ಲಿ ರಾತ್ರಿ 9ಕ್ಕೆ