ಮುಂಬೈ: ದೇಶದಲ್ಲಿ ಕಬಡ್ಡಿ ಕ್ರೀಡೆಯ ಹೊಸ ಅಲೆಯನ್ನೇ ಸೃಷ್ಟಿಸಿದ ಪ್ರೋ ಕಬಡ್ಡಿ ಲೀಗ್ ಟೂರ್ನಿಯ 3ನೇ ಆವೃತ್ತಿ ಯನ್ನು ಮುಂದಿನ ವರ್ಷ ಜನವರಿಯಲ್ಲೇ ನಡೆಸಲು ನಿರ್ಧರಿಸಲಾಗಿದೆ ಎಂದು ಟೂರ್ನಿಯ ಆಯೋಜಕರು ತಿಳಿಸಿದ್ದಾರೆ.
ಮುಂದಿನ ಆವೃತ್ತಿಯಲ್ಲಿ ಎಂಟು ತಂಡಗಳು ತಮ್ಮ ಆಟಗಾರರನ್ನು ಬದಲಾಯಿಸಿಕೊಂಡಿದ್ದಾರೆ. ಬೆಂಗಳೂರು ಬುಲ್ಸ್ ನಾಯಕ ಹಾಗೂ ಕಳೆದ ಎರಡು ಆವೃತ್ತಿಯಲ್ಲಿ ಅತ್ಯುತ್ತಮ ಆಟಗಾರ ಪ್ರಶಸ್ತಿ ಪಡೆದಿದ್ದ ಮಂಜೀತ್ ಚಿಲ್ಲರ್ ಸೇರಿದಂತೆ ಇತರೆ ಪ್ರಮುಖ ಆಟಗಾರರು, ಈ ಬಾರಿ ಬೇರೆ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಅಜಯ್ ಠಾಕೂರ್, ರಾಕೇಶ್ ಕುಮಾರ್, ದೀಪಕ್ ಹುಡ್ಡಾ, ಜಸ್ಮೀರ್ ಸಿಂಗ್, ಸುರ್ಜಿತ್ ನರ್ವಾಲ್, ಧರ್ಮರಾಜ್ ಚೆರಲನಾಥನ್, ವಾಸಿಂ ಸಜ್ಜದ್, ರಾಜಗುರು ಸುಬ್ರಮಣಿಯನ್ ಈ ಬಾರಿ ಬೇರೆ ತಂಡದಲ್ಲಿ ಆಡಲಿದ್ದಾರೆ ಎಂದು ಪ್ರೋ ಕಬಡ್ಡಿ ಲೀಗ್ ಆಯೋಜಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದೇ ವೇಳೆ ಯು ಮುಂಬಾ ತಂಡದ ನಾಯಕ ಅನೂಪ್ ಕುಮಾರ್, ದಬಾಂಗ್ ಡೆಲ್ಲಿಯ ಕಾಶಿಲಿಂಗ್ ಅಡಕೆ ಸೇರಿದಂತೆ ರವೀಂದರ್ ಪಹಲ್, ರಾಹುಲ್ ಚೌಧರಿ, ಸುಖೇಶ್ ಹೆಗಡೆ, ಜಾನ್ ಕುನ್ ಲೀ, ಸಂದೀಪ್ ನರ್ವಾಲ್ ಅದೇ ತಂಡಗಳಲ್ಲಿ ಮುಂದುವರಿಯಲಿದ್ದಾರೆ.