ಕ್ರೀಡೆ

ಇಶಾಂತ್ ವರ್ತನೆ ಸಹನೀಯವಲ್ಲ: ಬಿಷನ್ ಸಿಂಗ್ ಬೇಡಿ

Srinivasamurthy VN

ನವದೆಹಲಿ: ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತದ ವೇಗಿ ಇಶಾಂತ್ ಶರ್ಮಾ ಆತಿಥೇಯ ಆಟಗಾರರ ಜತೆಗೆ ತೋರಿದ ಅನುಚಿತ ವರ್ತನೆ ತೀರಾ ಕೆಟ್ಟದಾಗಿದೆ ಎಂದು ಭಾರತದ   ಮಾಜಿ ಆಟಗಾರ ಬಿಷನ್ ಸಿಂಗ್ ಬೇಡಿ ಅಭಿಪ್ರಾಯಪಟ್ಟಿದ್ದಾರೆ.

ಇಶಾಂತ್ ಶರ್ಮಾ ತೋರಿದ ಉತ್ತಮ ಬೌಲಿಂಗ್ ಪ್ರದರ್ಶನವು ಭಾರತದ 21 ಅಂತರದ ಸರಣಿ ಗೆಲುವಿನಲ್ಲಿ ನೆರವಿಗೆ ಬಂದರೂ, ಅಂತಿಮ ಪಂದ್ಯದಲ್ಲಿ ಎಂಟು ವಿಕೆಟ್ ಕಬಳಿಸಿ ತಮ್ಮ ವೃತ್ತಿ  ಜೀವನದಲ್ಲಿ 200 ವಿಕೆಟ್ ಪೂರೈಸಿದರು. ಆದರೆ ಲಂಕಾ ಆಟಗಾರರೊಂದಿಗೆ ಸತತವಾಗಿ ವಾಗ್ವಾದದಲ್ಲಿ ಕಾಣಿಸಿಕೊಂಡ ಪರಿಣಾಮ ಐಸಿಸಿಯಿಂದ ಒಂದು ಟೆಸ್ಟ್ ಪಂದ್ಯದ ನಿಷೇಧ ಶಿಕ್ಷೆಗೆ ಗುರಿಯಾಗಿದ್ದಾರೆ. ``ಲಂಕಾ ವಿರುದ್ಧದ ಸರಣಿಯಲ್ಲಿ ನಿರಂತರವಾಗಿ ಆಟಗಾರರ ಜತೆಗೆ ನಡೆಸಿದ ಮಾತಿನ ಚಕಮಕಿ ದುರದೃಷ್ಟಕರ. ತಂಡ ಆಕ್ರಮಣಕಾರಿ ಮನೋಭಾವದ ಬಗ್ಗೆ ಮಾತನಾಡುತ್ತಿದ್ದರೂ ಇದರ ಫಲವಾಗಿ ಇಶಾಂತ್ ಒಂದು ಪಂದ್ಯದಿಂದ ನಿಷೇಧಿಸಲ್ಪಟ್ಟಿದ್ದಾರೆ.

ಕ್ರಿಕೆಟ್ ಕ್ರೀಡೆಯಲ್ಲಿ ಇದನ್ನು ನಿರೀಕ್ಷಿಸುತ್ತೀರಾ? ಇದು ಅತ್ಯಂತ ಕೆಟ್ಟ ವರ್ತನೆ. ಈ ವರ್ತನೆ ವಿರಾಟ್ ಕೊಹ್ಲಿ ಆಕ್ರಮಣಕಾರಿ ವರ್ತನೆಗೆ ಸಂಬಂಧಿಸಿಲ್ಲ'' ಎಂದು ಬೇಡಿ ಹೇಳಿದ್ದಾರೆ. ``ಕೊಹ್ಲಿ ಈ  ಸರಣಿಯಲ್ಲಿ ಅತ್ಯುತ್ತಮ ರೀತಿಯಲ್ಲಿ ಜವಾಬ್ದಾರಿ ನಿಭಾಯಿಸಿದರು. ಆದರೆ ಆತ ತನ್ನ ಆಕ್ರಮಣಕಾರಿ ಮನೋಭಾವವನ್ನು ನಿಯಂತ್ರಿಸಿಕೊಳ್ಳಬೇಕು. ಎಲ್ಲರ ಕಣ್ಣು ನಾಯಕನ ಮೇಲೆ ನೆಟ್ಟಿರುತ್ತದೆ.  ಆತ ಇತರೆ ಆಟಗಾರರಿಗೆ ಮಾದರಿಯಾಗಿರಬೇಕು. ಪಂದ್ಯದ ವೇಳೆ ಬ್ಯಾಟ್, ಬಾಲ್, ಫೀಲ್ಡಿಂಗ್ ವೇಳೆ ಆಕ್ರಮಣಕಾರಿಯಾಗಿರಬೇಕೇ ಹೊರತು ಬಾಯಿಯ ಮೂಲಕವಲ್ಲ'' ಎಂದಿದ್ದಾರೆ.

SCROLL FOR NEXT