ನವದೆಹಲಿ: ಭಾರತ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಪಂದ್ಯಗಳನ್ನು ಎದುರು ನೋಡುತ್ತಿದ್ದು, ವಿರಾಟ್ ಕೊಹ್ಲಿಯವರು ಧೋನಿ ಅವರಿಂದ ಸಂಪೂರ್ಣವಾಗಿ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿರುತ್ತಿವೆ. ಈ ಸಂದರ್ಭದಲ್ಲಿ ಕ್ರಿಕೆಟ್ ಆಟದ ಮೂರೂ ಪ್ರಕಾರಗಳಲ್ಲಿ ಭಾರತದ ತಂಡದ ಮುಂದಾಳತ್ವವನ್ನು ವಿರಾಟ್ ಕೊಹ್ಲಿಯವರು ವಹಿಸಿಕೊಂಡರೆ ಉತ್ತಮ ಎಂದು ದಕ್ಷಿಣ ಆಫ್ರಿಕಾದ ಮಾಜಿ ಆಲ್ ರೌಂಡರ್, ವಿಶ್ವದ ಅನುಭವಿ ಅಂತಾರಾಷ್ಟ್ರೀಯ ಕ್ರಿಕೆಟಿಗ ಜಾಕ್ ಕಾಲಿಸ್ ಹೇಳಿದ್ದಾರೆ.
ಟೆಸ್ಟ್, ಏಕದಿನ, ಮತ್ತು ಟಿ-20 ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಮುನ್ನಡೆಸುವ ಸಾಮರ್ಥ್ಯ ವಿರಾಟ್ ಅವರಿಗಿದೆ. ಅವರು ಧೋನಿಯವರಿಂದ ನಾಯಕತ್ವವನ್ನು ತೆಗೆದುಕೊಳ್ಳಬೇಕು. ಈ ಬದಲಾವಣೆ ಮಾಡಿಕೊಂಡರೆ ಭಾರತಕ್ಕೆ ಒಳ್ಳೆಯದಾಗಬಹುದೇ ಎಂಬುದನ್ನು ಕಾಲ ನಿರ್ಧರಿಸಲಿದೆ. ಕೊಹ್ಲಿ ಅವರು ಒತ್ತಡದಲ್ಲಿ ಆಟವಾಡಬಲ್ಲರು ಎಂದು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಭಾರತ ಒಂದು ಉತ್ತಮ ತಂಡ. ದಕ್ಷಿಣ ಆಫ್ರಿಕಾ ಅದರ ಜೊತೆ ಆಡುತ್ತಿರುವುದು ಖುಷಿ ತಂದಿದೆ. ಇದೊಂದು ಆಸಕ್ತಿಕರ ಪಂದ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭಾರತ ಪ್ರವಾಸ ಮಾಡಿ ಆಡಿ ಗೆದ್ದು ಬರುವುದು ಸವಾಲಿನ ವಿಷಯ. ಆಯ್ಕೆಗಾರರು ಉತ್ತಮ ತಂಡಗಳನ್ನು ಆಯ್ಕೆ ಮಾಡಿದ್ದಾರೆ. ಭಾರತದ ಜೊತೆ ಆಡಲು ದಕ್ಷಿಣ ಆಫ್ರಿಕಾ ಆಟಗಾರರು ಎಲ್ಲಾ ರೀತಿಯ ಸಿದ್ದತೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.