ಕ್ರೀಡೆ

ಹಿತಾಸಕ್ತಿ ಸಂಘರ್ಷ; ಕಾನೂನು ಸಲಹೆ ಕೇಳಿದ "ಭಜ್ಜಿ"

Srinivasamurthy VN

ನವದೆಹಲಿ: ಭಜ್ಜಿ ಸ್ಪೋರ್ಟ್ಸ್ ಸಂಸ್ಥೆಗೆ ಕುಟುಂಬದ ಮಾಲೀಕತ್ವವಿರುವುದರಿಂದ ಸ್ವಹಿತಾಸಕ್ತಿಯ ಸಂಘರ್ಷಕ್ಕೆ ಕಾರಣವಾಗಲಿದೆ ಎಂಬ ಬಿಸಿಸಿಐನ ಓಂಬುಡ್ಸ್‌ಮನ್ ನಿವೃತ್ತ ನ್ಯಾಯಮೂರ್ತಿ  ಎ.ಪಿ.ಷಾ ಎಚ್ಚರಿಕೆ ಬೆನ್ನಲ್ಲೇ ಭಾರತ ತಂಡದ ಸ್ಪಿನ್ನರ್ ಹರ್ಭಜನ್ ಸಿಂಗ್ ಕಾನೂನು ತಜ್ಞರ ಸಲಹೆಗೆ ಮುಂದಾಗಿದ್ದಾರೆ.

ಹರ್ಭಜನ್ ಸಿಂಗ್ ಅವರ ತಾಯಿ ಅವತಾರ್ ಕೌರ್ ಅವರು ಭಜ್ಜಿ ಸ್ಫೋರ್ಟ್ಸ್ ಎಂಬ ಕ್ರೀಡಾ ಉತ್ಪನ್ನಗಳ ತಯಾರಿಕಾ ಸಂಸ್ಥೆಯ ಮಾಲೀಕರಾಗಿದ್ದು, ಈ ಸಂಸ್ಥೆ 6 ರಾಜ್ಯಗಳ ರಣಜಿ ಟ್ರೋಫಿ  ತಂಡಗಳಿಗೆ ಕಿಟ್ ಪೂರೈಸುತ್ತಿದೆ. ಹೀಗಾಗಿ ಈ ಬಗ್ಗೆ ವಿವರ ಕೇಳಿದ್ದ ಬಿಸಿಸಿಐನ ಓಂಬುಡ್ಸ್ ಮನ್  ನ್ಯಾಯಮೂರ್ತಿ ಎ.ಪಿ.ಷಾ ಅವರು, ಸಂಸ್ಥೆಯಲ್ಲಿ ಹರ್ಭಜನ್ ಸಿಂಗ್ ಪಾತ್ರವೇನು ಮತ್ತು ಅವರ  ಪಾಲೇನು ಎಂದು ಈ ಹಿಂದೆ ಪ್ರಶ್ನಿಸಿದ್ದರು. ಅಲ್ಲದೆ ಭಜ್ಜಿ ಸ್ಫೋರ್ಟ್ಸ್ ಸಂಸ್ಥೆ ಹಿತಾಸಕ್ತಿ ಸಂಘರ್ಷಕ್ಕೆ ಕಾರಣವಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದರು.

ಈ ಹಿಂದೆ ನೀರಜ್ ಗುಂಡೇ ಎಂಬುವವರು ಗಂಗೂಲಿ, ಹರ್ಭಜನ್ ಸಿಂಗ್ ಸೇರಿದಂತೆ ಹಲವರ ವಿರುದ್ಧ ಬಿಸಿಸಿಐನ ಓಂಬುಡ್ಸ್‌ಮನ್‌ಗೆ ಪತ್ರ ಬರೆದಿದ್ದರು. ಈ ಹಿನ್ನಲೆಯಲ್ಲಿ ನಿವೃತ್ತ  ನ್ಯಾಯಮೂರ್ತಿ ಎಪಿ ಷಾ ತನಿಖೆ ನಡೆಸಿದ್ದರು. ಇದೀಗ ಎಪಿ ಷಾ ಅವರ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಕ್ರಿಕೆಟಿಗ ಹರ್ಭಜನ್ ಸಿಂಗ್, ಕಾನೂನು ತಜ್ಞರ ಸಲಹೆ ಕೇಳಲು  ಮುಂದಾಗಿದ್ದಾರೆ. ಅಲ್ಲದೆ ಭಜ್ಜಿ ಸ್ಪೋರ್ಟ್ಸ್ ಸಂಸ್ಥೆಯಿಂದ ತಮ್ಮನ್ನು ಕೈಬಿಡುವಂತೆ ಕೇಳಿದ್ದಾರೆ ಎಂದು ತಿಳಿದುಬಂದಿದೆ.

SCROLL FOR NEXT