ಮೀರ್ ಪುರ: ಭಾರತದ ವಿರುದ್ಧದ ರೋಚಕ ಸೋಲಿನ ಬಳಿಕ ಚೇತರಿಸಿಕೊಂಡಿರುವ ಪಾಕಿಸ್ತಾನ ತಂಡ ಸೋಮವಾರ ನಡೆದ ಯುಎಇ ವಿರುದ್ಧದ ಪಂದ್ಯದಲ್ಲಿ ಭರ್ಜರಿ 7 ವಿಕೆಟ್ ಗಳ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಯುಎಇ ತಂಡ ಪಾಕಿಸ್ತಾನದ ಪ್ರಬಲ ಬೌಲಿಂದ್ ದಾಳಿಯ ನಡುವೆಯೂ 6 ವಿಕೆಟ್ ನಷ್ಟಕ್ಕೆ 129ರನ್ ಗಳಿಸಿತು. ಬೌಲರ್ ಗಳಿಗೆ ನೆರವಾಗುವ ಮೀರ್ ಪುರ ಪಿಚ್ ನಲ್ಲಿ ಯುಎಇ ಬ್ಯಾಟ್ಸಮನ್ ಗಳು 129 ರನ್ ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿದರು. ಈ ಮೊತ್ತವನ್ನು ಬೆನ್ನು ಹತ್ತಿದ ಪಾಕಿಸ್ತಾನ ತಂಡ ಆರಂಭಿಕ ಆಘಾತದ ನಡುವೆಯೂ ಶೊಯೇಬ್ ಮಲಿಕ್ ಅವರ ಸಮಯೋಚಿತ ಅರ್ಧಶತಕ (63 ರನ್) ಹಾಗೂ ಉಮರ್ ಅಕ್ಮಲ್ ಅವರ ಆಕರ್ಷಕ ಅರ್ಧಶತಕ(50 ರನ್ )ದ ನೆರವಿನಿಂದ 18.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಆ ಮೂಲಕ ಪ್ರಶಸ್ತಿ ಸುತ್ತಿನ ತನ್ನ ಆಸೆಯನ್ನು ಪಾಕಿಸ್ತಾನ ಜೀವಂತವಾಗಿಟ್ಟುಕೊಂಡಿತು.
ಆಕರ್ಷಕ ಬ್ಯಾಟಿಂಗ್ ಮಾಡಿದ ಪಾಕಿಸ್ತಾನದ ಬ್ಯಾಟ್ಸಮನ್ ಶೊಯೆಬ್ ಮಲ್ಲಿಕ್ ಅವರು ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು. ಇನ್ನು ತಾನಾಡಿದ ಎರಡು ಪಂದ್ಯಗಳನ್ನು ಕೈಚೆಲ್ಲಿರುವ ಯುಎಇ ತಂಡ ಏಷ್ಯಾಕಪ್ ಟೂರ್ನಿಯಿಂದ ಬಹುತೇಕ ಹೊರಬಿದ್ದಿತು.