ಮೈಸೂರು: ಹಲವಾರು ಏಳು ಬೀಳುಗಳ ನಡುವೆಯೂ ಆತಿಥೇಯ ಕರ್ನಾಟಕ ಪುರುಷರ ತಂಡವು ನಗರದಲ್ಲಿ ನಡೆಯುತ್ತಿರುವ 66ನೇ ಹಿರಿಯರ ರಾಷ್ಟ್ರೀಯ ಬಾಸ್ಕೆಟ್‍ಬಾಲ್ ಪಂದ್ಯಾವಳಿಯ ಕ್ವಾರ್ಟರ್ಫೈನಲ್ ತಲುಪುವಲ್ಲಿ ಸಫಲವಾಗಿದೆ.
ಇಲ್ಲಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಅಂಕ ಗಳಿಕೆಯ ಆಧಾರದ ಮೇಲೆ ಕರ್ನಾಟಕ ಪುರುಷರ ತಂಡ ಕ್ವಾರ್ಟರ್ಫೈನಲ್ ಪ್ರವೇಶಿಸಿದರೆ, ಮಹಿಳೆಯರ ತಂಡವು ಪಂದ್ಯಾವಳಿಯಿಂದ ಹೊರಬಿದ್ದಿದೆ. ಬುಧವಾರ ಬೆಳಗ್ಗೆ ಕರ್ನಾಟಕ ಮತ್ತು ಉತ್ತರಾಖಂಡ್ ನಡುವೆ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡವು 65-58 (22-11, 14-18, 13-11, 16-18) ಅಂತರದಲ್ಲಿ ಸೋಲು ಅನುಭವಿಸಿತು. ಆದರೆ ಕರ್ನಾಟಕ ತಂಡವು ದೆಹಲಿ ಮತ್ತು ಹರಿಯಾಣ ತಂಡಗಳಿಗೆ ಹೋಲಿಸಿದಲ್ಲಿ ಹೆಚ್ಚು ಅಂಕ ಗಳಿಸಿದ್ದರಿಂದ ಕ್ವಾರ್ಟರ್ ಫೈನಲ್‍ಗೆ ಅರ್ಹತೆ ಪಡೆದುಕೊಂಡಿತು.
ಇದೀಗ ಅಂತಿಮ ಎಂಟರ ಹಣಾಹಣಿಯಲ್ಲಿ ಬಲಿಷ್ಠ ಸರ್ವೀಸಸ್ ತಂಡದ ಸವಾಲನ್ನು ಮೆಟ್ಟಿನಿಂತು ಸೆಮಿಫೈನಲ್ ತಲುಪಬೇಕಾದ ಒತ್ತಡ ಅದರ ಮೇಲಿದೆ. ಅಂದಹಾಗೆ ಉತ್ತರಾಖಂಡ ವಿರುದ್ಧದ ಪಂದ್ಯದಲ್ಲಿ ರಾಜ್ಯದ ಪರ ಎಸ್. ಶಶಿ ಹಾಗೂ ಅನಿಲ್ ಕುಮಾರ್ ಕ್ರಮವಾಗಿ 11 ಮತ್ತು 10 ಅಂಕ ಗಳಿಸಿದರೆ, ಅದೇ ಉತ್ತರಾಖಂಡದ ಪರ ತ್ರಿದೀಪ್ ರೈ ಮತ್ತು ವಿಶೇಶ್ ಭೃಗುವಂಶಿ 24 ಮತ್ತು 20 ಪಾಯಿಂಟ್ಸ್‍ಗಳಿಂದ ವಿಜೃಂಭಿಸಿದರು.
ಸೋತ ವನಿತೆಯರು: ಇನ್ನು ಬುಧವಾರ ನಡೆದ ಮಹಿಳೆಯರ ವಿಭಾಗದಲ್ಲಿ ಕರ್ನಾಟಕ ಎದುರು ಇಂಡಿಯನ್ ರೇಲ್ವೇಸ್ ನ ವನಿತೆಯರು 68-49ರಿಂದ ಜಯ ಪಡೆದರು. ಆರಂಭದಿಂದಲೇ ಆಕ್ರಮಣ ಕಾರಿ ಹೋರಾಟ ನಡೆಸಿದ ರೇಲ್ವೇಸ್ ವನಿತೆಯರು 25-8, 20-6, 13-16 ಹಾಗೂ 22-7ರಿಂದ ಜಯಶಾಲಿಯಾದರು. ಪಂದ್ಯದಾದ್ಯಂತ ಅಬ್ಬರದ ಪ್ರದರ್ಶನ ನೀಡಿದ ರೇಲ್ವೇಸ್ ವನಿತಾ ತಂಡ ಭರ್ಜರಿ ಜಯ ಪಡೆಯಿತು. ರೇಲ್ವೇಸ್ ಪರ ರಾಜಪ್ರಿಯದರ್ಶಿನಿ 19 ಪಾಯಿಂಟ್ಸ್ ಗಳಿಸಿದರೆ, ಅನಿತಾ ಪೌಲ್ 12 ಮತ್ತು ಶೃತಿ ಮೆನನ್ 10 ಅಂಕ ಗಳಿಸಿ ತಂಡದ ಗೆಲುವಿಗೆ ನೆರವಾದರು. ಇನ್ನು ಸೋತ ಕರ್ನಾಟಕದ ಪರ ಬಾಂಧವ್ಯ ಮಹೇಶ ಮತ್ತು ಎಸ್. ಸವಿತಾ 13 ಹಾಗೂ 10 ಪಾಯಿಂಟ್ಸ್ ಗಳಿಸಿ ಗಮನ ಸೆಳೆದರು.