ನವದೆಹಲಿ: ರಿಯೋ ಒಲಿಂಪಿಕ್ಸ್ ಸಂಭವನೀಯರ ಪಟ್ಟಿಯಿಂದ ಕುಸ್ತಿ ಪಟು ಸುಶೀಲ್ ಕುಮಾರ್ ಅವರನ್ನು ಕೈ ಬಿಟ್ಟಿಲ್ಲ. ಅಷ್ಟೇ ಅಲ್ಲ ನಾವು ಯಾವುದೇ ಪಟ್ಟಿಯನ್ನು ಕಳುಹಿಸಿಕೊಟ್ಟಿಲ್ಲ ಎಂದು ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯೂ ಎಫ್ ಐ)ಹೇಳಿದೆ.
ಸಾಮಾನ್ಯವಾಗಿ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದವರ ಪಟ್ಟಿಯನ್ನು ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್‌ಗೆ ಕಳುಹಿಸುವುದು ವಾಡಿಕೆ. ಸಂಭವನೀಯರ ಪಟ್ಟಿಯಲ್ಲಿ ಸುಶೀಲ್ ಅವರ ಹೆಸರಿಲ್ಲ ಅಂದ ಮಾತ್ರಕ್ಕೆ, ಅವರು ರಿಯೋ ಒಲಿಂಪಿಕ್ಸ್ ಗೆ ಹೋಗಲ್ಲ ಎಂಬುದು ಅರ್ಥವಲ್ಲ. ಆದಾಗ್ಯೂ ಒಲಿಂಪಿಕ್ಸ್ ಆಯ್ಕೆಗೆ ಯಾವಾಗ ಟ್ರಯಲ್ಸ್ ನಡೆಸಬೇಕೆಂಬುದರ ಬಗ್ಗೆ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಡಬ್ಲ್ಯೂ ಎಫ್ ಐ ಸ್ಪಷ್ಟನೆ ನೀಡಿದೆ.
ಸಂಭವನೀಯರ ಪಟ್ಟಿಯನ್ನು ಡಬ್ಲ್ಯೂ ಎಫ್ ಐ ಕಳುಹಿಸಿಲ್ಲ. ಅದನ್ನು ಯುನೈಟೆಡ್ ವರ್ಲ್ಡ್ ರೆಸ್ಟ್ಲಿಂಗ್ ಕಳುಹಿಸಿಕೊಟ್ಟಿದೆ. ಏತನ್ಮಧ್ಯೆ, ಇಲ್ಲಿ ಟ್ರಯಲ್ಸ್ ನಡೆದ ನಂತರವೇ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದವರ ಪಟ್ಟಿಯನ್ನು ಒಲಿಂಪಿಕ್ ಫೆಡರೇಷನ್ಸ್‌ಗೆ ಕಳುಹಿಸಿಕೊಡಲಾಗುವುದು ಎಂದು ಡಬ್ಲ್ಯೂ ಎಫ್ ಐ ಉಪ ಕಾರ್ಯದರ್ಶಿ ವಿನೋದ್ ಕುಮಾರ್ ಹೇಳಿದ್ದಾರೆ.
ಆದಾಗ್ಯೂ, 77 ಕೆಜಿ ಪುರುಷರ ಫ್ರೀಸ್ಟೈಲ್ ವಿಭಾಗದಲ್ಲಿ ಸುಶೀಲ್ ಮತ್ತು ನರಸಿಂಗ್ ಯಾದವ್ ಇವರಲ್ಲಿ ಯಾರು ಪ್ರಸ್ತುತ ವಿಭಾಗವನ್ನು ಪ್ರತಿನಿಧೀಕರಿಸುತ್ತಾರೆ ಎಂಬುದರ ಬಗ್ಗೆ ಡಬ್ಲ್ಯೂ ಎಫ್ ಐ ಯಾವುದೇ ಹೇಳಿಕೆ ನೀಡಿಲ್ಲ.
ದಿನಗಳ ಹಿಂದೆಯಷ್ಟೇ ಸುಶೀಲ್ ಕುಮಾರ್, ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿದ್ದೇನೆ ಎಂದ ಮಾತ್ರಕ್ಕೆ ಈ ಬಾರಿಯೂ ನನ್ನನ್ನೇ ಒಲಿಂಪಿಕ್ಸ್‌ಗೆ ಆಯ್ಕೆ ಮಾಡಬೇಕು ಎಂದು ನಾನು ಹೇಳುತ್ತಿಲ್ಲ. ನಿಯಮದ ಪ್ರಕಾರ ನನ್ನ ಮತ್ತು ನರಸಿಂಗ್ ಯಾದವ್ ನಡುವೆ ಟ್ರಯಲ್ಸ್ ನಡೆಸಬೇಕು. ಅದರಲ್ಲಿ ಯಾರು ಹೆಚ್ಚಿನ ಸಾಮರ್ಥ್ಯವನ್ನು ಸಾಬೀತು ಪಡಿಸುತ್ತಾರೋ ಅವರನ್ನು ಒಲಿಂಪಿಕ್ಸ್‌ಗೆ ಆಯ್ಕೆ ಮಾಡಿ ಎಂದು ಮನವಿ ಮಾಡಿದ್ದರು.