ನವದೆಹಲಿ: ಡೋಪಿಂಗ್ ಟೆಸ್ಟ್ ನಲ್ಲಿ ಸಿಕ್ಕಿಬಿದ್ದು ರಿಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ಅವಕಾಶ ಕಳೆದುಕೊಂಡಿದ್ದ ಕುಸ್ತಿಪಟು ನರಸಿಂಗ್ ಯಾದವ್ ಅವರ ಪ್ರಕರಣವನ್ನು ಪ್ರಧಾನಮಂತ್ರಿಗಳ ಕಚೇರಿ(ಪಿಎಂಒ) ಸಿಬಿಐ ತನಿಖೆಗೆ ಒಪ್ಪಿಸಿದೆ ಎಂದು ಶುಕ್ರವಾರ ಭಾರತೀಯ ಕುಸ್ತಿ ಒಕ್ಕೂಟ ಹೇಳಿದೆ.
ಆಗಸ್ಟ್ 28ರಂದು ನರಸಿಂಗ್ ಯಾದವ್ ಅವರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ನಾನು ಪ್ರಧಾನಮಂತ್ರಿಗಳ ಕಚೇರಿಗೆ ಪತ್ರ ಬರೆದಿದ್ದೆ. ಅದರಂತೆ ಈಗ ಪಿಎಂಒ ಪ್ರಕರಣವನ್ನು ಸಿಬಿಐಗೆ ವಹಿಸಿರುವುದು ನನಗೆ ತುಂಬಾ ಸಂತೋಷ ತಂದಿದೆ ಎಂದು ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜಿ ಭೂಷಣ್ ಶರಣ್ ಸಿಂಗ್ ಅವರು ಹೇಳಿದ್ದಾರೆ.
2015ರ ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ 74ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ರಿಯೋ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದ ನರಸಿಂಗ್ ಯಾದವ್, ಬಳಿಕ ಜೂನ್ ತಿಂಗಳಲ್ಲಿ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ ನಾಡಾ ನಡೆಸಿದ ಪರೀಕ್ಷೆಯಲ್ಲಿ ಸಿಕ್ಕಿಬಿದಿದ್ದರು. ಅಲ್ಲದೇ ರಿಯೊ ಒಲಿಂಪಿಕ್ಸ್ ಕ್ರೀಡಾಕೂಟದಿಂದಲೇ ಅವರನ್ನು ಕೈ ಬಿಡಲಾಗಿತ್ತು.