ನವದೆಹಲಿ: ಕೆನಡದ ಟೆನಿಸ್ ತಾರೆ ಎಗುನಿ ಬೌಚಾರ್ಡ್ ಬೆಟ್ಟಿಂಗ್ ನಲ್ಲಿ ಸೋತಿದ್ದಕ್ಕೆ ಅಭಿಮಾನಿ ಜತೆ ಡೇಟಿಂಗ್ ಹೋಗಬೇಕಾದ ಪಜೀತಿಗೆ ಸಿಲುಕಿದ್ದಾರೆ.
ಎಗುನಿ ಬೌಚಾರ್ಡ್ ಅಮೆರಿಕದ ಪ್ರತಿಷ್ಠಿತ ವೃತ್ತಿಪರ ಫುಟ್ಬಾಲ್ ಲೀಗ್(ಎನ್ಎಫ್ಎಲ್)ನ ಸೂಪರ್ ಬೌಲ್ ವಾರ್ಷಿಕ ಚಾಂಪಿಯನ್ ಷಿಪ್ ಪಂದ್ಯದಲ್ಲಿ ಅಟ್ಲಾಂಟ ಫಾಲ್ಕನ್ಸ್ ತಂಡ ಗೆಲ್ಲುತ್ತದೆ ಎಂದು ಬೆಟ್ ಕಟ್ಟಿದ್ದರು. ಆದರೆ ಈ ಪಂದ್ಯದಲ್ಲಿ ನ್ಯೂ ಇಂಗ್ಲೆಂಡ್ ಪೇಟ್ರಿಯಾಟ್ಸ್ ತಂಡದ ವಿರುದ್ಧ ಅಟ್ಲಾಂಟ ಫಾಲ್ಕನ್ಸ್ ತಂಡ ಸೋತಿದ್ದು, ಹೀಗಾಗಿ ಅಭಿಮಾನಿ ಜತೆ ಡೇಟಿಂಗ್ ಹೋಗಬೇಕಿದೆ.
ಕಳೆದ ಭಾನುವಾರ ನಡೆದ ಪಂದ್ಯದ ವೇಳೆ ಅಟ್ಲಾಂಟ ತಂಡ ಭಾರಿ ಮುನ್ನಡೆಯಲ್ಲಿದ್ದಾಗ 22 ವರ್ಷದ ಬೌಚಾರ್ಡ್ ಅಟ್ಲಾಂಟ ಗೆಲ್ಲುತ್ತದೆ ಎಂದು ಟ್ವೀಟಿಸಿದ್ದರು. ಆಗ ಅಭಿಮಾನಿಯೊಬ್ಬ ಹಾಗದರೆ ಪೇಟ್ರಿಯಾಟ್ಸ್ ತಂಡ ಗೆದ್ದರೆ ನಾವು ಡೇಟಿಂಗ್ ಗೆ ಹೋಗೋಣವೇ? ಎಂದು ಸವಾಲೆಸೆದ. ಈ ಸವಾಲವನ್ನು ಬೌಚಾರ್ಡ್ ಸ್ವೀಕರಿಸಿದ್ದರು.
ಆದರೆ ಅಟ್ಲಾಂಟ ತಂಡ 28-34 ರಿಂದ ಸೋತಿದ್ದು ಇದರಿಂದ ಪೇಟ್ರಿಯಾಟ್ಸ್ ಅಭಿಮಾನಿ ಜತೆ ಡೇಟಿಂಗ್ ಹೋಗಲು ಆತನ ವಿವರಗಳನ್ನು ಪಡೆದುಕೊಂಡಿದ್ದಾರೆ.