ಕ್ರೀಡೆ

ದಾಖಲೆ ಬರೆದ ನವೋಮಿ ಒಸಾಕಾ, ಅಮೆರಿಕ ಓಪನ್ ಪ್ರಶಸ್ತಿ ಗೆದ್ದ ಮೊದಲ ಜಪಾನ್ ಆಟಗಾರ್ತಿ

Sumana Upadhyaya

ನ್ಯೂಯಾರ್ಕ್‌: ಪ್ರತಿಷ್ಠಿತ ಅಮೆರಿಕನ್ ಓಪನ್  2018 ಟೆನಿಸ್ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಅಮೆರಿಕಾದ ಸೆರೆನಾ ವಿಲಿಯಮ್ಸ್ ಜಪಾನ್ ನ ನವೋಮಿ ಒಸಾಕಾ ವಿರುದ್ಧ ಸೋಲನುಭವಿಸಿದ್ದಾರೆ. ಒಸಾಕಾ ಅವರು 6-2, 6-4 ಸೆಟ್ ಗಳಿಂದ ಸೆರೆನಾ ಅವರನ್ನು ಮಣಿಸಿ ಮೊದಲ ಸಿಂಗಲ್ಸ್ ಗ್ರಾಂಡ್ ಸ್ಲಾಮ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ.

20 ವರ್ಷದ ಒಸಾಕಾ, ಅತಿದೊಡ್ಡ ಸಿಂಗಲ್ಸ್ ಗ್ರಾಂಡ್ ಸ್ಲಾಮ್ ನಲ್ಲಿ ಪ್ರಶಸ್ತಿ ಗಿಟ್ಟಿಸಿಕೊಂಡ ಜಪಾನ್ ನ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.  ಯುಎಸ್‌ ಓಪನ್‌ ಮಹಿಳೆಯರ ಅಂತಿಮ ಹಣಾಹಣಿ ರೋಚಕ ಹಂತ ತಲುಪಿತ್ತು. ಆತಿಥೇಯ ನಾಡಿನ ದೈತ್ಯ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ ಮತ್ತು ಜಪಾನಿನ ಯುವ ತಾರೆ ನವೋಮಿ ಒಸಾಕಾ ಪರಸ್ಪರ ಎದುರಾಗಿದ್ದರು.

ಸೆಮಿಫೈನಲ್‌ ಹಣಾಹಣಿಯಲ್ಲಿ ಸೆರೆನಾ ವಿಲಿಯಮ್ಸ್‌ ಲಾತ್ವಿಯಾದ ಅನಾಸ್ತಾಸಿಜಾ ಸೆವಸ್ತೋವಾ ಅವರನ್ನು 6-3, 6-0 ಅಂತರದಿಂದ ಸುಲಭದಲ್ಲಿ ಸೋಲಿಸಿದರೆ, ನವೋಮಿ ಒಸಾಕಾ ಆತಿಥೇಯ ನಾಡಿನ ಮ್ಯಾಡಿಸನ್‌ ಕೀಸ್‌ ಅವರನ್ನು 6-2, 6-4 ನೇರ ಸೆಟ್‌ಗಳಿಂದ ಹಿಮ್ಮೆಟ್ಟಿಸಿದರು.

ಜಪಾನಿ ಆಟಗಾರ್ತಿಯೊಬ್ಬರು ಗ್ರಾಂಡ್ ಸ್ಲಾಮ್ ಫೈನಲ್‌ಗೆ ಲಗ್ಗೆ ಇಡುತ್ತಿರುವುದು ಇದೇ ಮೊದಲು. ಅನುಭವಿ ಆಟಗಾರ್ತಿ ಸೆರೆನಾ ಅವರನ್ನು ಮಣಿಸಿ ಒಸಾಕಾ ಚಾಂಪಿಯನ್‌ ಆಗಿದ್ದು ಟೆನಿಸ್‌ ಲೋಕದ ಇತಿಹಾಸದಲ್ಲಿ ಒಂದು ಅಚ್ಚರಿಯ ಮತ್ತು ಅಚ್ಚಳಿಯದ ಕ್ಷಣವಾಗಿದೆ.

SCROLL FOR NEXT