ಕ್ರೀಡೆ

ಇಂಡೋನೇಷಿಯಾ ಓಪನ್: ಪಿವಿ ಸಿಂಧು, ಕಿಡಂಬಿ ಶ್ರೀಕಾಂತ್ ಶುಭಾರಂಭ

Raghavendra Adiga
ಜಕಾರ್ತ: ಭಾರತದ ಬ್ಯಾಡ್ಮಿಂಟನ್ ಸ್ಟಾರ್‌ಗಳಾದ ಪಿ.ವಿ. ಸಿಂಧು ಹಾಗೂ ಕಿಡಂಬಿ ಶ್ರೀಕಾಂತ್‌ ಅವರು ಇಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್‌ ವಿಶ್ ಟೂರ್‌ ಸೂಪರ್‌ 1000 ಟೂರ್ನಿಯ ಇಂಡೋನೇಷ್ಯಾ ಓಪನ್‌ನ ಆರಂಭಿಕ ಸುತ್ತಿನಲ್ಲಿ ಗೆದ್ದು ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.
ಬುಧವಾರ ಒಂದು ಗಂಟೆಗೂ ಅಧಿಕ ಸಮಯ ನಡೆದಿದ್ದ ಮಹಿಳಾ ಸಿಂಗಲ್ಸ್‌ ಮೊದಲ ಸುತ್ತಿನ ಕಾದಾಟದಲ್ಲಿ ಪಾರಮ್ಯ ಮೆರೆದ ಐದನೇ ಶ್ರೇಯಾಂಕಿತೆ ಸಿಂಧು ಅವರು ಜಪಾನ್‌ನ ಅಯಾ ಓಹೋರಿ ಅವರ ವಿರುದ್ಧ 11-21, 21-15, 21-15 ಅಂತರದಲ್ಲಿ ಗೆದ್ದು ಎರಡನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. 
 ಇನ್ನು, 38 ನಿಮಿಷಗಳ ಕಾಲ ನಡೆದಿದ್ದ ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವದ 9ನೇ ಶ್ರೇಯಾಂಕದ ಕಿಡಂಬಿ ಶ್ರೀಕಾಂತ್‌ ಅವರು ಜಪಾನ್‌ನ ಕೆಂಟಾ ನಿಶಿಮೊಟಾ ಅವರ ವಿರುದ್ಧ 21-14, 21-13 ಅಂತರದಲ್ಲಿ ಗೆದ್ದು ಎರಡನೇ ಸುತ್ತು ಪ್ರವೇಶಿಸಿದ್ದಾರೆ.
ಇದಕ್ಕೂ ಮುನ್ನ ಮಂಗಳವಾರ ಭಾರತರ ಡಬಲ್ಸ್‌ ಜೋಡಿ ಮೊದಲ ಸುತ್ತಿನಲ್ಲಿ ಗೆದ್ದು ಎರಡನೇ ಸುತ್ತಿಗೆ ಪ್ರವೇಶ ಮಾಡಿತ್ತು. ಸಾತ್ವಿಕ್‌ ಸಾಯಿರಾಜ್‌ ರಂಕಿರೆಡ್ಡಿ ಹಾಗೂ ಚಿರಾಗ್‌ ಶೆಟ್ಟಿ ಭಾರತದ ಪುರುಷರ ಡಬಲ್ಸ್‌ ಜೋಡಿಯು ಗೊಹ್ ಸ್ಜೆ ಫೀ ಮತ್ತು ನೂರ್ ಇ ಇಜ್ಜುದೀನ್ ಜೋಡಿ ವಿರುದ್ಧ 21-19, 18-21, 21-19 ಅಂತರದಲ್ಲಿ ಗೆದ್ದು ಎರಡನೇ ಸುತ್ತಿಗೆ ಪ್ರವೇಶ ಮಾಡಿತು. 
ಭಾರತದ ಜೋಡಿಯು ಎರಡನೇ ಸುತ್ತಿನಲ್ಲಿ ಇಂಡೋನೇಷ್ಯಾ ಅಗ್ರ ಜೋಡಿ ಮಾರ್ಕುಸ್‌ ಗಿಡೀನ್‌ ಮತ್ತು ಕೆವಿನ್‌ ಸಂಜಯ ಸುಕಮುಲ್ಜಿ ವಿರುದ್ಧ ಸೆಣಸಲಿದೆ. 
ಇನ್ನೂ ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಭಾರತದ ಪ್ರಣವ್‌ ಜೆರ್ರಿ ಮತ್ತು ಎನ್‌. ಸಿಕ್ಕಿ ರೆಡ್ಡಿ ಜೋಡಿಯು ನೆದರ್‌ಲೆಂಡ್‌ ನ ರಾಬಿನ್‌ ಟ್ಯಾಬಿಲಿಂಗ್‌ ಹಾಗೂ ಸೆಲೆನಾ ಪೀಕ್ ಜೋಡಿ ವಿರುದ್ಧ 25-23, 16-21, 21-19 ಅಂತರದಲ್ಲಿ ಗೆಲುವು ಸಾಧಿಸಿತು. ಆ ಮೂಲಕ ಎರಡನೇ ಸುತ್ತಿನಲ್ಲಿ ಚೀನಾದ ಝೆಂಗ್ ಸಿ ವೀ ಮತ್ತು ಹುವಾಂಗ್ ಯಾ ಕಿಯೊಂಗ್ ಜೋಡಿ ವಿರುದ್ಧ ಸೆಣಸಲಿದೆ. 
ಆದರೆ, ಮಹಿಳಾ ಡಬಲ್ಸ್‌ ವಿಭಾಗದಲ್ಲಿ ಭಾರತಕ್ಕೆ ತೀವ್ರ ನಿರಾಸೆ ಉಂಟಾಯಿತು. ಕಾಮನ್‌ವೆಲ್ತ್‌ ಕಂಚಿನ ಪದಕ ವಿಜೇತ ಅಶ್ವಿನಿ ಪೊನ್ನಪ್ಪ ಮತ್ತು ಎನ್‌.ಸಿಕ್ಕಿರೆಡ್ಡಿ ಜೋಡಿ 20-22, 22-20, 20-22 ಅಂತರದಲ್ಲಿ ವಿವಿಯನ್‌ ಹೋ ಮತ್ತು ಯಾಪ್‌ ಚೆಂಗ್‌ ವೆನ್‌ ಜೋಡಿ ವಿರುದ್ಧ ಸೋಲುವ ಮೂಲಕ ಇಂಡೋನೇಷ್ಯಾ ಓಪನ್ ಟೂರ್ನಿಯ ಅಭಿಯಾನ ಮುಗಿಸಿತು.
SCROLL FOR NEXT