ಕ್ರೀಡೆ

ಭಾರತೀಯ ರೆಸ್ಲರ್ ನಿಶಾ ದಹಿಯಾ, ಆಕೆಯ ಸಹೋದರನ ಗುಂಡಿಕ್ಕಿ ಹತ್ಯೆ, ಆರೋಪಿ ಪರಾರಿ; ಹೆಸರಿನಿಂದ ಭಾರಿ ಗೊಂದಲ ಸೃಷ್ಟಿ

Srinivasamurthy VN

ಸೋನಿಪತ್: ಭಾರತೀಯ ಮಹಿಳಾ ರೆಸ್ಲರ್ ನಿಶಾ ದಹಿಯಾ (21 ವರ್ಷ) ಮತ್ತು ಆಕೆಯ ಸಹೋದರನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಹರ್ಯಾಣದ ಸೋನಿಪತ್‌ ಜಿಲ್ಲೆಯ ಹಲಾಲ್‌ಪುರ ಗ್ರಾಮದ ಸುಶೀಲ್ ಕುಮಾರ್ ವ್ರೆಸ್ಲಿಂಗ್ ಅಕಾಡೆಮಿಯಲ್ಲಿ ಈ ಭೀಕರ ಘಟನೆ ನಡೆದಿದ್ದು, ಕುಸ್ತಿಪಟು ನಿಶಾ ದಹಿಯಾ (21) ಮತ್ತು ಆಕೆಯ ಸಹೋದರ ಸೂರಜ್ (18) ಅವರನ್ನು ತರಬೇತುದಾರ ಮತ್ತು ಇತರೆ ಇಬ್ಬರು ವ್ಯಕ್ತಿಗಳು ಗುಂಡಿಕ್ಕಿ ಕೊಂದು ಹಾಕಿದ್ದಾರೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತಯೇ ಅಕಾಡೆಮಿ ಮೇಲೆ ದಾಳಿ ಮಾಡಿದ ಸ್ಥಳೀಯ ಗ್ರಾಮಸ್ಥರು ಅಕಾಡೆಮಿಗೆ ಬೆಂಕಿ ಹಚ್ಚಿದ್ದಾರೆ.

ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, 65 ಕೆಜಿ ತೂಕದ ಕುಸ್ತಿಪಟು ನಿಶಾ ಮತ್ತು ಆಕೆಯ ಸಹೋದರ ಸೂರಜ್ ಅವರ ಮೃತದೇಹಗಳನ್ನು ಸೋನಿಪತ್‌ನ ಸಿವಿಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆಕೆಯ ತಾಯಿ ಧನಪತಿ ಗಾಯಗೊಂಡು ರೋಹ್ಟಕ್‌ನ ಪಿಜಿಐಗೆ ದಾಖಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ. ಆಕೆಯ ತಂದೆ ದಯಾನಂದ ದಹಿಯಾ ಅವರು ಸಿಆರ್‌ಪಿಎಫ್‌ನಲ್ಲಿ ಇನ್ಸ್‌ಪೆಕ್ಟರ್ ಆಗಿದ್ದು, ಶ್ರೀನಗರದಲ್ಲಿ ಸೇವೆಸಲ್ಲಿಸುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದೇ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಸೋನಿಪತ್ ಸಹಾಯಕ ಎಸ್‌ಪಿ ಮಯಾಂಕ್ ಗುಪ್ತಾ ಅವರು, ರೆಸ್ಲರ್ ನಿಶಾ ದಹಿಯಾ ಅವರ ಸಾವನ್ನು ಖಚಿತಪಡಿಸಿದ್ದಾರೆ. ನಿಶಾ ದಹಿಯಾ ಮತ್ತು ಅವರ ಸಹೋದರನ ಮೇಲೆ ರೋಹ್ಟಕ್‌ನ ಬಲಂಡಾದ ತರಬೇತುದಾರ ಪವನ್, ಅವರ ಸೋದರಳಿಯರಾದ ಸಚಿನ್ ಮತ್ತು ಹಲಾಲ್‌ಪುರದ ಅಮಿತ್ ಅವರೊಂದಿಗೆ ಐದರಿಂದ ಆರು ಸುತ್ತಿನ ಬುಲೆಟ್‌ಗಳನ್ನು ಹಾರಿಸಿದ್ದಾರೆ. ಗುಂಡಿನ ದಾಳಿಯ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆಯಿಂದ ಕುಪಿತಗೊಂಡ ಗ್ರಾಮಸ್ಥರು ಅಕಾಡೆಮಿಗೆ ಬೆಂಕಿ ಹಚ್ಚಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರನ್ನು ಬಂಧಿಸಲು ಪೊಲೀಸ್ ತಂಡಗಳು ಕಾರ್ಯಾಚರಣೆ ನಡೆಸಿವೆ ಎಂದು ಹೇಳಿದರು.

ಅಕಾಡೆಮಿ ಪ್ರಸಿದ್ಧ ರೆಸ್ಲರ್ ಕುಸ್ತಿಪಟು ಸುಶೀಲ್ ಕುಮಾರ್ ಅವರದ್ದಲ್ಲ, ಆದರೆ ಸ್ಥಳೀಯರದ್ದು
ಇನ್ನು ಘಟನೆ ನಡೆದ ಸುಶೀಲ್ ಕುಮಾರ್ ರೆಸ್ಲಿಂಗ್ ಅಕಾಡೆಮೆ ಕ್ರೀಡಾಪಟು ಸುಶೀಲ್ ಕುಮಾರ್ ಅವರದಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದು, ಸ್ಥಳಿಯರ ಮಾಲೀಕತ್ವದಲ್ಲಿ ಈ ಅಕಾಡೆಮಿ ನಡೆಯುತ್ತಿತ್ತು ಎಂದು ಹೇಳಿದ್ದಾರೆ.
 
ಹೆಸರಿನಿಂದ ಭಾರಿ ಗೊಂದಲ ಸೃಷ್ಟಿ, ನಾನು ಸತ್ತಿಲ್ಲ ಎಂದ ಮತ್ತೋರ್ವ ಕುಸ್ತಿಪಟು ನಿಶಾ ದಹಿಯಾ
ಇನ್ನು ನಿಶಾ ದಹಿಯಾ ಎಂಬ ಹೆಸರು ನಿನ್ನೆ ಭಾರಿ ಗೊಂದಲಕ್ಕೆ ಕಾರಣವಾಗಿತ್ತು. ಕೊಲೆಯಾದ ಆಟಗಾರ್ತಿಯ ಗುರುತು ಗೊಂದಲಕ್ಕೆ ಕಾರಣವಾಗಿತ್ತು. ಸುದ್ದಿಯಾದ ಹಲವಾರು ವರದಿಗಳಲ್ಲಿ ಆಕೆಯನ್ನು ಅದೇ ಹೆಸರಿನ 23 ವರ್ಷದೊಳಗಿನ ವಿಶ್ವ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತೆ ಎಂದು ತಪ್ಪಾಗಿ ಗ್ರಹಿಸಿದ್ದವು. ಈ ಸುದ್ದಿಗಳು ಪ್ರಸಾರವಾಗುತ್ತಲೇ ಈ ಬಗ್ಗೆ ವಿಡಿಯೋ ಮೂಲಕ ಸ್ಪಷ್ಟೀಕರಣ ನೀಡಿದ 23 ವರ್ಷದ ಮತ್ತೋರ್ವ ಕ್ರೀಡಾಪಟು ನಿಶಾ ದಹಿಯಾ ನಾನು ತುಂಬಾ ಜೀವಂತವಾಗಿದ್ದೇನೆ. ಉತ್ತರ ಪ್ರದೇಶದ ಗೊಂಡಾದಲ್ಲಿದ್ದೇನೆ ಎಂದು ಹೇಳಿದರು. 

ಅಂತಾರಾಷ್ಟ್ರೀಯ ಮಟ್ಟದ ಕುಸ್ತಿಪಟು ನಿಶಾ ದಹಿಯಾ ಅವರು ಸಂಜೆ ವೀಡಿಯೊವನ್ನು ಬಿಡುಗಡೆ ಮಾಡಿ, ನಾನು ಸಂಪೂರ್ಣವಾಗಿ ಕ್ಷೇಮವಾಗಿದ್ದೇನೆ. ತಾನು ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಾಗಿ ಯುಪಿಯ ಗೊಂಡಾದಲ್ಲಿದ್ದೇನೆ ಎಂದು ಹೇಳುವ ವೀಡಿಯೊವನ್ನು ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಹಂಚಿಕೊಂಡಿದೆ. ವಿಡಿಯೋದಲ್ಲಿ 2016ರ ಒಲಿಂಪಿಯನ್ ಸಾಕ್ಷಿ ಮಲಿಕ್ ಕೂಡ ನಿಶಾ ದಹಿಯಾ ಅವರೊಂದಿಗೆ ಇದ್ದರು. 

ಸ್ಪಷ್ಟನೆ ನೀಡಿದ ತರಬೇತುದಾರು
ಭಾರತೀಯ ಮಹಿಳಾ ತಂಡದೊಂದಿಗೆ ಬೆಲ್‌ಗ್ರೇಡ್‌ಗೆ ಪ್ರಯಾಣಿಸಿದ ತರಬೇತುದಾರ ರಣಧೀರ್ ಮಲಿಕ್, "ಮೃತಪಟ್ಟ ಹುಡುಗಿಯೂ ನಿಶಾ ದಹಿಯಾ ಆಗಿದ್ದಳು ಆದರೆ U-23 ವಿಶ್ವ ಚಾಂಪಿಯನ್‌ಶಿಪ್‌ಗೆ ಹೋದವಳಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 

SCROLL FOR NEXT