ಕ್ರೀಡೆ

ಡೋಪಿಂಗ್ ಟೆಸ್ಟ್ ನಲ್ಲಿ ಫೇಲ್​: ಕರ್ನಾಟಕದ ಹಿರಿಯ ಅಥ್ಲೀಟ್​ ಪೂವಮ್ಮಗೆ 2 ವರ್ಷ ನಿಷೇಧ

Shilpa D

ನವದೆಹಲಿ: ಭಾರತದ ಹಿರಿಯ ಅಥ್ಲೀಟ್​, ಏಷ್ಯನ್ ಗೇಮ್ಸ್ ಪದಕ ವಿಜೇತೆ ಎಂಆರ್ ಪೂವಮ್ಮ ಅವರು ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದು, 2 ವರ್ಷ ನಿಷೇಧಕ್ಕೆ ಒಳಗಾಗಿದ್ದಾರೆ. ಈ ಹಿಂದೆ ಅವರು 3 ತಿಂಗಳವರೆಗೆ ನಿಷೇಧಕ್ಕೆ ಒಳಗಾಗಿದ್ದರು. ಇದರ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರು.

32 ವರ್ಷದ ಪೂವಮ್ಮ ಅವರು ಕಳೆದ ವರ್ಷ ಫೆಬ್ರವರಿಯಲ್ಲಿ ಪಟಿಯಾಲದಲ್ಲಿ ನಡೆದಿದ್ದ ಇಂಡಿಯನ್ ಗ್ರ್ಯಾನ್‌ಪ್ರಿ ಕೂಟದಲ್ಲಿ ಭಾಗವಹಿಸಿದ್ದರು. ಅದರಲ್ಲಿ ಅವರು ಪರೀಕ್ಷೆಗೆ ನೀಡಿದ್ದ ಮಾದರಿಯಲ್ಲಿ ನಿಷೇಧಿತ ಮೆಥೈಲ್‌ಹೆಕ್ಸಾನೀಮೈನ್ ಮದ್ದಿನ ಅಂಶ ಇರುವುದು ಪತ್ತೆಯಾಗಿತ್ತು.

ಈ ಹಿನ್ನೆಲೆಯಲ್ಲಿ ಈ ವರ್ಷದ ಜೂನ್‌ನಲ್ಲಿ ಅವರಿಗೆ ಎಡಿಡಿಪಿ ಮೂರು ತಿಂಗಳ ನಿಷೇಧ ಶಿಕ್ಷೆ ವಿಧಿಸಿತ್ತು. ಆದರೆ ಈ ಆದೇಶವನ್ನು ಪ್ರಶ್ನಿಸಿ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ) ಮೇಲ್ಮನವಿ ಸಲ್ಲಿಸಿತ್ತು. ಈ ಮನವಿಯನ್ನು ಪುರಸ್ಕರಿಸಿರುವ ಎಡಿಎಪಿ ಶಿಕ್ಷೆಯನ್ನು ಎರಡು ವರ್ಷಕ್ಕೆ ವಿಸ್ತರಿಸಿದೆ.

‘ಪೂವಮ್ಮ ಅವರಿಂದ ಪರೀಕ್ಷೆಗಾಗಿ 2021ರ ಫೆಬ್ರವರಿ 18ರಂದು ಮಾದರಿ ಸಂಗ್ರಹಿಸಲಾಗಿತ್ತು. ಅಂದಿನಿಂದ ಅವರು ಸ್ಪರ್ಧಿಸಿದ್ದ ಎಲ್ಲ ಫಲಿತಾಂಶಗಳನ್ನು ಅಮಾನ್ಯಗೊಳಿಸಲಾಗುತ್ತದೆ. ಗೆದ್ದ ಪದಕಗಳನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಎಡಿಎಪಿ ಮುಖ್ಯಸ್ಥ ಅಭಿನವ್ ಮುಖರ್ಜಿ ಇದೇ 16ರಂದು ನೀಡಿದ ಆದೇಶದಲ್ಲಿ ತಿಳಿಸಿದ್ದಾರೆ.

SCROLL FOR NEXT