ಪ್ಯಾರಿಸ್: ಒಲಿಂಪಿಕ್ಸ್‌ನಲ್ಲಿ ಎರಡು ಮೆಡಲ್ ಗೆದ್ದಿರುವ ಕಂಚಿನ ಹುಡುಗಿ ಮನು ಭಾಕರ್, ಮಹಿಳೆಯರ 25 ಮೀಟರ್ ಪಿಸ್ತೂಲ್ ಶೂಟಿಂಗ್‌ನಲ್ಲಿ ಫೈನಲ್‌ಗೆ ಲಗ್ಗೆ ಹಾಕಿದ್ದಾರೆ. ಈ ಮೂಲಕ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಹ್ಯಾಟ್ರಿಕ್ ಮೆಡಲ್ ಸಾಧನೆಗೆ ಇನ್ನು ಒಂದು ಹೆಜ್ಜೆಯಷ್ಟೇ ಬಾಕಿಯಿದೆ.
ಪ್ಯಾರಿಸ್ ಒಲಿಂಪಿಕ್ಸ್ ನ ಮಹಿಳೆಯರ 25 ಪಿಸ್ತೂಲ್ ಸ್ಪರ್ಧೆಯಲ್ಲಿ ಶುಕ್ರವಾರ ಮನು ಭಾಕರ್ 590-24x ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದು ಫೈನಲ್‌ಗೆ ಪ್ರವೇಶಿಸಿದರು.
ಶನಿವಾರ ಫೈನಲ್ ಸುತ್ತು ನಡೆಯಲಿದ್ದು, ಇಲ್ಲಿ ಅಗ್ರ ಮೂರು ಸ್ಥಾನ ಪಡೆದರೆ ಮನು ಸತತ ಮೂರನೇ ಪದಕದ ಸಾಧನೆ ಮಾಡಲಿದ್ದಾರೆ. ಅದರೊಂದಿಗೆ ಇತಿಹಾಸ ಬರೆಯಲು ಮನು ಸಜ್ಜಾಗಿದ್ದಾರೆ.
ಈಗಾಗಲೇ ಮನು 10 ಮೀಟರ್ ಏರ್ ಪಿಸ್ತೂಲ್ ವೈಯಕ್ತಿಕ ಮತ್ತು 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡದಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದಿದ್ದಾರೆ.
ಮನು ಅವರಿಗೆ ಎರಡೂ ಕಂಚಿನ ಪದಕಗಳು 10m ಏರ್ ಪಿಸ್ತೂಲ್ ವೈಯಕ್ತಿಕ ಮತ್ತು 10m ಏರ್ ಶೂಟಿಂಗ್ ಮಿಶ್ರ ತಂಡ ಸ್ಪರ್ಧೆಗಳಲ್ಲಿ ಬಂದಿವೆ. ಹರಿಯಾಣದ 22 ವರ್ಷದ ಶೂಟರ್ ಈಗ ಶನಿವಾರ ತನ್ನ ಪದಕದ ಬಣ್ಣವನ್ನು ಬದಲಾಯಿಸುವ ನಿರೀಕ್ಷೆಯಲ್ಲಿದ್ದಾರೆ.
ಮನು ಭಾಕರ್ ಶನಿವಾರ ಪದಕ ಗೆದ್ದರೆ, ಮೂರು ಒಲಂಪಿಕ್ ಪದಕಗಳನ್ನು ಗೆದ್ದ ಮೊದಲ ಭಾರತೀಯ ವೈಯಕ್ತಿಕ ಅಥ್ಲೀಟ್ ಆಗಲಿದ್ದಾರೆ.
ಸ್ವಾತಂತ್ರ್ಯದ ನಂತರ ಒಲಿಂಪಿಕ್ ಕ್ರೀಡಾಕೂಟದ ಒಂದೇ ಆವೃತ್ತಿಯಲ್ಲಿ ಎರಡು ಪದಕಗಳನ್ನು ಗೆದ್ದ ಏಕೈಕ ಭಾರತೀಯ ಎಂಬ ದಾಖಲೆಯನ್ನು ಅವರು ಈಗಾಗಲೇ ಹೊಂದಿದ್ದಾರೆ. ಅವರು ಒಲಿಂಪಿಕ್ ಪದಕ ಗೆದ್ದ ಮೊದಲ ಮಹಿಳಾ ಶೂಟರ್ ಕೂಡ.
ಹಂಗೇರಿಯ ವೆರೋನಿಕಾ ಮೇಜರ್ 592-28x ಸ್ಕೋರ್‌ನೊಂದಿಗೆ ಅಗ್ರಸ್ಥಾನ ಪಡೆದು ಫೈನಲ್ ಪ್ರವೇಶಿಸಿದರು. ಇದು ಭಾಕರ್‌ಗಿಂತ ಕೇವಲ ಎರಡು ಅಂಕಗಳು ಹೆಚ್ಚು ಮತ್ತು ಮಹಿಳೆಯರ 25 ಮೀ ಪಿಸ್ತೂಲ್ ಈವೆಂಟ್‌ನಲ್ಲಿ ಹೊಸ ಯುರೋಪಿಯನ್ ಅರ್ಹತಾ ದಾಖಲೆಯಾಗಿದೆ. ಇರಾನ್‌ನ ಹನಿಯೆಹ್ ರೋಸ್ತಮಿಯಾನ್ 588-18X ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದರು.