ವಿನೇಶ್ ಫೋಗಟ್ 
ಕ್ರೀಡೆ

Olympics 2024: Vinesh Phogat ಗೆ 100 ಗ್ರಾಂ ತೂಕ ಮುಳುವಾಗಿದ್ದು ಹೇಗೆ? ನಿಯಮ ಏನು?

ವಿನೇಶ್​ 50 ಕೆಜಿ ವಿಭಾಗದಲ್ಲಿ ಒಲಿಂಪಿಕ್ಸ್​ ಆಡುತ್ತಿರುವುದು ಇದೇ ಮೊದಲ ಬಾರಿ. ಇದಕ್ಕೂ ಮುನ್ನ ರಿಯೋ ಒಲಿಂಪಿಕ್ಸ್​ನಲ್ಲಿ 48 ಕೆಜಿ, ಟೋಕಿಯೊದಲ್ಲಿ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರು.

ಪ್ಯಾರಿಸ್: ಪ್ಯಾರಿಸ್​ ಒಲಿಂಪಿಕ್ಸ್​ ಕ್ರೀಡಾಕೂಟದ ಕುಸ್ತಿಯಲ್ಲಿ ಫೈನಲ್​ ಪ್ರವೇಶಿಸುವ ಮೂಲಕ ಐತಿಹಾಸಿಕ ಪದಕವೊಂದನ್ನು ಗೆಲ್ಲುವ ನಿರೀಕ್ಷೆ ಮೂಡಿಸಿದ್ದ ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ (Vinesh Phogat) 100ಗ್ರಾಂ ಹೆಚ್ಚುವರಿ ತೂಕದಿಂದ ಅನರ್ಹಗೊಂಡಿದ್ದಾರೆ.

ಹೌದು.. 50 ಕೆಜಿ ತೂಕ ವಿಭಾಗದಲ್ಲಿ ಸ್ಪರ್ಧಿಸಿದ್ದ ಅವರು ಇದೀಗ ನಿಗದಿತ ತೂಕಕ್ಕಿಂತ 100 ಗ್ರಾಂ ಹೆಚ್ಚು ಇರುವ ಕಾರಣಕ್ಕೆ ಅವರನ್ನು ಫೈನಲ್​ನಿಂದ ಅನರ್ಹ(Vinesh Phogat Disqualified) ಮಾಡಲಾಗಿದೆ. ಇದೀಗ ವಿನೇಶ್ ಫೋಗಟ್ ಅನರ್ಹ ವಿಚಾರ ವ್ಯಾಪಕ ಚರ್ಚೆಗ್ರಾಸವಾಗಿದ್ದು, ಇಷ್ಟಕ್ಕೂ ವಿನೇಶ್ ಫೋಗಟ್ ಗೆ ಮುಳುವಾಗಿದ್ದು ಏನು? ನಿಯಮ ಏನು ಹೇಳುತ್ತದೆ? ಇಲ್ಲಿದೆ ಉತ್ತರ..

ವಿಭಾಗ ಬದಲಿಸಿದ್ದೇ ವಿನೇಶ್ ಫೋಗಟ್ ಗೆ ಮುಳುವಾಯಿತೇ?

ವಿನೇಶ್​ 50 ಕೆಜಿ ವಿಭಾಗದಲ್ಲಿ ಒಲಿಂಪಿಕ್ಸ್​ ಆಡುತ್ತಿರುವುದು ಇದೇ ಮೊದಲ ಬಾರಿ. ಇದಕ್ಕೂ ಮುನ್ನ ರಿಯೋ ಒಲಿಂಪಿಕ್ಸ್​ನಲ್ಲಿ 48 ಕೆಜಿ, ಟೋಕಿಯೊದಲ್ಲಿ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರು. ಒಲಿಂಪಿಕ್ಸ್​ ಆರಂಭಕ್ಕೂ ಮುನ್ನ ನಡೆದಿದ್ದ ಸೀನಿಯರ್‌ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿಯೂ ವಿನೇಶ್​ 55 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಚಿನ್ನದ ಪದಕ ಗೆದ್ದಿದ್ದರು. ಆದರೆ, 50 ಕೆಜಿ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಅವರು ಕಣಕ್ಕಿಳಿದ್ದರು. ಇದೀಗ ತೂಕ ಬದಲಿಸಿದ್ದೇ ಅವರ ಈ ಹಿನ್ನಡೆಗೆ ಕಾರಣ ಎಂದು ಹೇಳಲಾಗುತ್ತಿದೆ.

ಒಲಿಂಪಿಕ್ಸ್​ ಸ್ಪರ್ಧೆಗೂ ಮುನ್ನ ವಿನೇಶ್​ ಅವರ ತೂಕ 2 ಕೆಜಿ ಹೆಚ್ಚಳವಾಗಿತ್ತು. ಇದನ್ನು ಕಡಿಮೆ ಮಾಡಲೆಂದೆ ಅವರು ನಿದ್ದೆ, ಆಹಾರ ಬಿಟ್ಟು ಅತ್ಯಂತ ಕಠಿಣ ವ್ಯಾಯಾಮ ನಡೆಸಿ ಸುಮಾರು 1.90 ಕೆಜಿ ತೂಕ ಇಳಿಸಿಕೊಂಡಿದ್ದರು. ಆದರೆ 100 ಗ್ರಾಂ ಹೆಚ್ಚಳದಿಂದ ಇದೀಗ ಅವರ ಒಲಿಂಪಿಕ್ಸ್​ ಪದಕದ ಕನಸು ನುಚ್ಚುನೂರಾಗಿದೆ. ಒಂದೊಮ್ಮೆ ಅವರು ತಮ್ಮ ಈ ಹಿಂದಿನಂತೆ 53 ಕೆಜಿ ತೂಕ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರೆ ಈ ಹಿನ್ನಡೆ ಉಂಟಾಗುತ್ತಿರಲಿಲ್ಲ ಎಂಬ ವಾದವೂ ಇದೆ.

100ಗ್ರಾಂ ತೂಕ ಮುಳುವಾಗಿದ್ದು ಹೇಗೆ?

ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ (UWW) ನಿಯಮಗಳ ಪ್ರಕಾರ, ಒಬ್ಬ ಕುಸ್ತಿಪಟು ತೂಕ ಪರೀಕ್ಷೆಯಲ್ಲಿ ವಿಫಲರಾದರೆ, ತಕ್ಷಣವೇ ಅವರನ್ನು ಅನರ್ಹಗೊಳಿಸಲಾಗುತ್ತದೆ. ಅಲ್ಲದೆ ಕುಸ್ತಿಪಟುವಿನ ಗೆಲುವನ್ನೂ ಅನರ್ಹಗೊಳಿಸಿ ಕೊನೆಯ ಸ್ಥಾನದಲ್ಲಿ ಇರಿಸಲಾಗುತ್ತದೆ. ತೂಕ ಪರೀಕ್ಷೆಯಲ್ಲಿ ವಿಫಲಗೊಳ್ಳುವ ಬಗ್ಗೆ UWW ನಿಯಮಗಳು ಏನು ಹೇಳುತ್ತದೆ ಎಂದರೆ, "ಒಬ್ಬ ಅಥ್ಲೀಟ್ ತೂಕ- ಪರೀಕ್ಷೆಗೆ ಹಾಜರಾಗದಿದ್ದರೆ ಅಥವಾ ತೂಕ ಪರೀಕ್ಷೆಯಲ್ಲಿ ವಿಫಲವಾದರೆ ಅವನು/ಆಕೆ ಸ್ಪರ್ಧೆಯಿಂದ ಹೊರಹಾಕಲ್ಪಡುತ್ತಾರೆ. ಕನಿಷ್ಠ ಆ ಸ್ಪರ್ಧಿಗೆ ಕೊನೆಯ ಶ್ರೇಯಾಂಕ ಕೂಡ ನೀಡಲಾಗುವುದಿಲ್ಲ. ವಿನೇಶ್ ಫೋಗಟ್ ವಿಚಾರದಲ್ಲಿ ವಿನೇಶ್ ಹೊಂದಿದ್ದ ಹೆಚ್ಚುವರಿ ತೂಕದ ಕುರಿತು ನಿಖರ ಮಾಹಿತಿ ಇಲ್ಲವಾದರೂ ಆಕೆ 100 ರಿಂದ 150 ಗ್ರಾಂ ಹೆಚ್ಚುವರಿ ತೂಕ ಹೊಂದಿದ್ದರು ಎನ್ನಲಾಗಿದೆ.

ಇದೇ ಕಾರಣಕ್ಕೆ ವಿನೇಶ್ ಫೋಗಟ್ ಫೈನಲ್ ತಲುಪಿದ್ದರೂ ಯಾವುದೇ ಪದಕಕ್ಕೆ ಅರ್ಹರಾಗುವುದಿಲ್ಲ. ಒಂದು ವೇಳೆ ವಿನೇಶ್ ಫೋಗಟ್ ಫೈನಲ್ ಪಂದ್ಯದಲ್ಲಿ ಸೋತಿದ್ದರೂ ಬೆಳ್ಳಿ ಪದಕ ಖಚಿತಪಡಿಸಿಕೊಳ್ಳುತ್ತಿದ್ದರು. ಆದರೆ 100 ಗ್ರಾಂ ತೂಕ ಅವರ ಕನಸಿಗೆ ಕೊಳ್ಳಿ ಇಟ್ಟಿದೆ.

ಮಂಗಳವಾರ ಬೆಳಗ್ಗೆ ವಿನೇಶ್ ಫೋಗಟ್ 50 ಕೆಜಿ ಗರಿಷ್ಠ ಮಿತಿಯನ್ನು ತಲುಪಿದ್ದರು. ನಾಲ್ಕು ಬಾರಿಯ ವಿಶ್ವ ಚಾಂಪಿಯನ್ ಮತ್ತು ಜಪಾನ್‌ನ ಟೋಕಿಯೊ ಚಿನ್ನದ ಪದಕ ವಿಜೇತ ಯುಯಿ ಸುಸಾಕಿ ವಿರುದ್ಧ ಸೇರಿದಂತೆ ಮೂರು ಪಂದ್ಯಗಳನ್ನು ಗೆದ್ದರು, ಯಾವುದೇ ತೂಕ ವಿಭಾಗದಲ್ಲಿ ಒಲಿಂಪಿಕ್ಸ್‌ನಲ್ಲಿ ಫೈನಲ್‌ಗೆ ತಲುಪಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ, ಬುಧವಾರ ಬೆಳಗ್ಗೆ ನಡೆದ ತೂಕ ಪರೀಕ್ಷೆಯಲ್ಲಿ ವಿಫಲವಾಗುವ ಮೂಲಕ ಭಾರತೀಯ ಕ್ರೀಡಾಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ಅನುತ್ತೀರ್ಣಳಾದಳು.

ನಿಯಮ ಏನು?

ಕುಸ್ತಿ, ಬಾಕ್ಸಿಂಗ್ ಮತ್ತು ಇತರ ರೆಸ್ಲಿಂಗ್ ವಿಭಾಗಗಳಂತಹ ಕ್ರೀಡೆಗಳಲ್ಲಿ, ಕ್ರೀಡಾಪಟುಗಳ ನಡುವೆ ನ್ಯಾಯಯುತತೆಯನ್ನು ಖಚಿತಪಡಿಸಿಕೊಳ್ಳಲು ನಿರ್ದಿಷ್ಟ ತೂಕದ ವಿಭಾಗಗಳಲ್ಲಿ ಮಾತ್ರ ಸ್ಪರ್ಧಿಸುವಂತೆ ನಿಯಮ ರೂಪಿಸಲಾಗಿದೆ. ಇದರಿಂದ ದೈತ್ಯ ಕ್ರೀಡಾಪಟುಗಳು ಸಣ್ಣ ಕ್ರೀಡಾಪಟುಗಳ ವಿರುದ್ಧ ಸ್ಪರ್ಧಿಸುವುದನ್ನು ತಡೆಯಲು ಸಾಧ್ಯವಾಗುತ್ತದೆ.

ಈ ತೂಕದ ಮಿತಿಗಳನ್ನು ಪೂರೈಸಲು, ಕೆಲವು ಕ್ರೀಡಾಪಟುಗಳು "ತೂಕ ಕತ್ತರಿ" (weight cutting) ಎಂದು ಕರೆಯಲ್ಪಡುವ ಅಭ್ಯಾಸದಲ್ಲಿ ತೊಡಗುತ್ತಾರೆ. ಇದು ಸ್ಪರ್ಧೆಯ ಮೊದಲು ಗಮನಾರ್ಹ ಪ್ರಮಾಣದ ತೂಕವನ್ನು ತ್ವರಿತವಾಗಿ ಕಳೆದುಕೊಳ್ಳುವುದನ್ನು ಒಳಗೊಂಡಿರುತ್ತದೆ. ಇದು ರೆಸ್ಲಿಂಗ್ ಕ್ರೀಡೆಗಳಲ್ಲಿ ಸಾಮಾನ್ಯ ತಂತ್ರವಾಗಿದೆ, ಅಲ್ಲಿ ಕ್ರೀಡಾಪಟುಗಳು ಕಡಿಮೆ ತೂಕದ ವರ್ಗದಲ್ಲಿ ಸ್ಪರ್ಧಿಸಲು ಮತ್ತು ಸಂಭಾವ್ಯ ಪ್ರಯೋಜನವನ್ನು ಪಡೆಯಲು ತೂಕವನ್ನು ಇಳಿಸುವ ಗುರಿಯನ್ನು ಹೊಂದಿರುತ್ತಾರೆ.

ಕುಸ್ತಿ ನಿಯಮ ಅಧ್ಯಾಯ 3, ಆರ್ಟಿಕಲ್ 11 ಪ್ರಕಾರ

"ಎಲ್ಲಾ ಸ್ಪರ್ಧೆಗಳಿಗೆ, ಸಂಬಂಧಿತ ತೂಕದ ವಿಭಾಗದ ಪಂದ್ಯದ ದಿನ ಪ್ರತಿ ಬೆಳಿಗ್ಗೆ ತೂಕ ಪರೀಕ್ಷೆಯನ್ನು ಆಯೋಜಿಸಲಾಗುತ್ತದೆ. ತೂಕ ಮತ್ತು ವೈದ್ಯಕೀಯ ಪರೀಕ್ಷೆಯು 30 ನಿಮಿಷಗಳವರೆಗೆ ಇರುತ್ತದೆ. ಎರಡನೇ ದಿನ ಬೆಳಿಗ್ಗೆ, ಫೈನಲ್‌ಗಳಲ್ಲಿ ಭಾಗವಹಿಸುವ ಕುಸ್ತಿಪಟುಗಳು ಮಾತ್ರ ತೂಕ ಪರೀಕ್ಷೆಗೆ ಹಾಜರಾಗಬೇಕು, ಇದು 15 ನಿಮಿಷಗಳವರೆಗೆ ಇರುತ್ತದೆ. ಇಬ್ಬರೂ ಸ್ಪರ್ಧಿಗಳಿಗೆ ಮಾನ್ಯತೆ ಪಡೆದ ಮತ್ತು ಒಲಿಂಪಿಕ್ಸ್ ಸಮಿತಿ ಅನುಮತಿಸಿದ ಏಕೈಕ ಸಮವಸ್ತ್ರ ನೀಡಲಾಗಿರುತ್ತದೆ. ಅರ್ಹ ವೈದ್ಯರಿಂದ ಪರೀಕ್ಷಿಸಿದ ನಂತರ, ಕುಸ್ತಿಪಟುಗಳ ತೂಕ ಪರೀಕ್ಷೆ ಮಾಡಲಾಗುತ್ತದೆ. ಸ್ಪರ್ಧಿಗಳು ಪರಿಪೂರ್ಣ ದೈಹಿಕ ಸ್ಥಿತಿಯಲ್ಲಿರಬೇಕು, ಬೆರಳಿನ ಉಗುರುಗಳನ್ನು ತುಂಬಾ ಚಿಕ್ಕದಾಗಿ ಕತ್ತರಿಸಿರಬೇಕು ಎಂಬಿತ್ಯಾದಿ ಅಂಶಗಳನ್ನು ಪರೀಕ್ಷಿಸಿದ ಬಳಕವೇ ಸ್ಪರ್ಧಿಗಳನ್ನು ತೂಕ ಪರೀಕ್ಷೆಗೆ ಅನುಮತಿಸಲಾಗುತ್ತದೆ.

ಅಂತೆಯೇ ಸ್ಪರ್ಧಿಗಳು ನಿಯಮಗಳಾನುಸಾರ ಎಲ್ಲ ಅರ್ಹತೆಗಳನ್ನು ಪೂರೈಸುತ್ತಾರೆಯೇ ಎಂಬುದನ್ನು ಅಧಿಕಾರಿಗಳು ಖಚಿತಪಡಿಸಿಕೊಳ್ಳುತ್ತಾರೆ. ಒಂದು ವೇಳೆ ಸ್ಪರ್ಧಿಗಳು ತಪ್ಪಾದ ಉಡುಗೆ ಧರಿಸಿದ್ದರೆ ಅದರಿಂದಲೂ ತೂಕ ಹೆಚ್ಚು-ಕಡಿಮೆಯಾಗುವ ಅಪಾಯವಿರುತ್ತದೆ. ಈ ಬಗ್ಗೆ ಅಧಿಕಾರಿಗಳು ಸ್ಪರ್ಧಿಗಳಿಗೆ ಮಾಹಿತಿ ನೀಡಬೇಕು. ಉಡುಗೆ ಸರಿ ಇಲ್ಲದ ಸ್ಪರ್ಧೆಯನ್ನು ತೂಕ ಪರೀಕ್ಷೆ ಅನುಮತಿಸದಂತೆಯೂ ನಿಯಮ ಇದೆ ಎನ್ನಲಾಗಿದೆ. ಇದೇ ಪರೀಕ್ಷೆಯಲ್ಲಿ ಭಾರತದ ವಿನೇಶ್ ಫೋಗಟ್ ಮತ್ತು ಅವರ ಫೈನಲ್ ಸ್ಪರ್ಧಿ ಅಮೆರಿಕದ ಸಾರಾ ಹಿಲ್ಡೆಬ್ರಾಂಡ್ ಕೂಡ ಹಾಜರಾಗಿದ್ದರು. ದುರಾದೃಷ್ಟವಶಾತ್ ಈ ಪರೀಕ್ಷೆಯಲ್ಲಿ ವಿನೇಶ್ ಫೋಗಟ್ ವಿಫಲರಾಗಿ ಅನರ್ಹಗೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

BMTC ಬಸ್ ಚಾಲಕನಿಗೆ ಫಿಡ್ಸ್, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಸರಣಿ ಅಪಘಾತ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

SCROLL FOR NEXT