ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಆಘಾತಕಾರಿ ನಿರ್ಗಮನದ ಹಿನ್ನಲೆಯಲ್ಲಿ ವಿನೇಶ್ ಫೋಗಟ್ ಅವರ ಸಹಾಯಕ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳುವಂತೆ ಭಾರತ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಅಧ್ಯಕ್ಷ ಸಂಜಯ್ ಸಿಂಗ್ ಬುಧವಾರ ಒತ್ತಾಯಿಸಿದ್ದಾರೆ.
ಮಹತ್ವದ ಕ್ರೀಡಾಕೂಟದ ಫೈನಲ್‌ಗೆ ಮುನ್ನ ವಿನೇಶ್ ಫೋಗಟ್ ಅವರ ತೂಕವನ್ನು ಸರಿಯಾಗಿ ನಿರ್ವಹಣೆ ಮಾಡುವಲ್ಲಿ ಸಿಬ್ಬಂದಿ ವಿಫಲವಾಗಿದ್ದು, ಇದು ಸ್ವೀಕಾರಾರ್ಹವಲ್ಲ. ಇದು ವಿನೇಶ್ ಅವರ ತಪ್ಪು ಅಲ್ಲ. ಅವರು ಅದ್ಭುತ ಪ್ರದರ್ಶನ ನೀಡುತ್ತಿದ್ದರು. ತರಬೇತುದಾರರು, ಸಹಾಯಕ ಸಿಬ್ಬಂದಿ, ಫಿಸಿಯೋಗಳು ಮತ್ತು ಪೌಷ್ಟಿಕತಜ್ಞರು ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು.
ವಿನೇಶ್ ಬೆಲ್ಜಿಯಂನ ತನ್ನ ವೈಯಕ್ತಿಕ ತರಬೇತುದಾರ ವೊಲರ್ ಅಕೋಸ್ ಅವರೊಂದಿಗೆ ತರಬೇತಿ ಪಡೆಯುತ್ತಿದ್ದರು. ಮತ್ತು ದಕ್ಷಿಣ ಆಫ್ರಿಕಾದ ಮಾನಸಿಕ ಕಂಡೀಷನಿಂಗ್ ತರಬೇತುದಾರ ವೇಯ್ನ್ ಲೊಂಬಾರ್ಡ್ ಅವರೊಂದಿಗೆ ಕೆಲಸ ಮಾಡುತ್ತಿದ್ದರು. ಇವರುಗಳ ಪ್ರಮಾದದಿಂದಾಗಿಯೇ ವಿನೇಶ್ ಫೋಗಟ್ ಅನರ್ಹಗೊಳ್ಳುವಂತಾಗಿದೆ ಎಂದು ಭಾರತ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಅಧ್ಯಕ್ಷ ಸಂಜಯ್ ಸಿಂಗ್ ಆರೋಪಿಸಿದ್ದಾರೆ.
ಮಹತ್ವದ ಕ್ರೀಡಾಕೂಟಗಳಲ್ಲಿ ಸಹಾಯಕ ಸಿಬ್ಬಂದಿಗಳು ಯಾವುದೇ ಕಾರಣಕ್ಕೂ ಚಾನ್ಸ್ ತೆಗೆದುಕೊಳ್ಳಬಾರದು. ಎಲ್ಲವೂ ಸರಿ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಎಲ್ಲಾ ಸಮಯದಲ್ಲೂ ಆಕೆಯ ಬಗ್ಗೆ ಗಮನ ಹರಿಸಬೇಕಿತ್ತು. ವಿನೇಶ್ ಹೇಗೆ ತನ್ನ ತೂಕದ ಮಿತಿಯನ್ನು ಮೀರಿದಳು ಎಂಬುದನ್ನು ಪರಿಶೀಲಿಸಬೇಕು. ಎಲ್ಲ ಹೊಣೆಗಾರರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ನಾನು ಭಾರತ ಸರ್ಕಾರವನ್ನು ವಿನಂತಿಸುತ್ತೇನೆ ಅವರು ಹೇಳಿದ್ದಾರೆ.
ವಿನೇಶ್ ಆಟಕ್ಕೆ ಹೊಸ ರೂಪ ನೀಡಿದ್ದೇ ಕೋಚ್ ಅಕೋಸ್
ಈ ಹಿಂದೆ ವಿನೇಶ್ ತರಬೇತಿ ಪಡೆಯಲು ಅಕೋಸ್ ರನ್ನು ಆಯ್ಕೆ ಮಾಡಿಕೊಂಡಿದ್ದರು. ಇದಕ್ಕಾಗಿ ಭಾರತ ಸರ್ಕಾರವು ಕೂಡ ವಿನೇಶ್ ಜೊತೆಗೆ ಗೇಮ್ಸ್‌ಗಾಗಿ ಆಕೋಸ್ ಅವರ ಪ್ರಯಾಣಕ್ಕೆ ಅನುಮೋದನೆ ನೀಡಿತ್ತು. ಅಕೋಸ್ ಅವರಿಗೆ ಭಾರತೀಯ ರಾಷ್ಟ್ರೀಯ ತರಬೇತುದಾರರಂತೆ ಪೂರ್ಣ-ಪ್ರವೇಶದ ಮಾನ್ಯತೆಯನ್ನು ನೀಡಲಾಯಿತು. ವಿನೇಶ್ ಆಟಕ್ಕೆ ಹೊಸ ರೂಪ ನೀಡುವಲ್ಲಿ ಅಕೋಸ್ ಪ್ರಮುಖ ಪಾತ್ರ ವಹಿಸಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.
ಅವರು 2018ರಿಂದ ಸ್ಟಾರ್ ಭಾರತೀಯ ಕುಸ್ತಿಪಟು ಜೊತೆ ಕೆಲಸ ಮಾಡುತ್ತಿದ್ದಾರೆ. ಅವರ ಆಟಕ್ಕೆ ತಾಂತ್ರಿಕ ಮತ್ತು ತಂತ್ರಗಾರಿಕೆ ಬದಲಾವಣೆಗಳನ್ನು ತರುತ್ತಿದ್ದಾರೆ. ವಿನೇಶ್ ಅವರೊಂದಿಗೆ ಎರಡು ವಿಶ್ವ ಚಾಂಪಿಯನ್‌ಶಿಪ್ ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಜಪಾನ್ ಆಟಗಾರ್ತಿ ವಿರುದ್ದ ಅವರ ಕಾರ್ಯತಂತ್ರ ಪರಿಣಾಮಕಾರಿಯಾಗಿ ಫಲ ನೀಡಿತ್ತು ಎಂದು ಸಂಜಯ್ ಸಿಂಗ್ ಕೋಚ್ ಬೆಂಬಲಕ್ಕೆ ನಿಂತರು.
ಅನರ್ಹತೆ ಕುರಿತು ಪಿಟಿ ಉಷಾ ಮಹತ್ವದ ಸಭೆ
ಇದೇ ವೇಳೆ ವಿನೇಶ್ ಫೋಗಟ್ ಅನರ್ಹತೆ ತೆರವುಗೊಳಿಸುವ ವಿಚಾರವಾಗಿ ಐಒಎ ಅಧ್ಯಕ್ಷೆ ಪಿಟಿ ಉಷಾ ಅವರೊಂದಿಗೆ ಸಭೆ ನಡೆಸಲಾಗುತ್ತಿದೆ. ಏನಾದರೂ ಮಾಡಬಹುದೇ ಎಂದು ನೋಡಲು ಯುಡಬ್ಲ್ಯೂಡಬ್ಲ್ಯೂ ಮುಖ್ಯಸ್ಥ ನೆನಾದ್ ಲಾಲೋವಿಕ್ ಅವರನ್ನು ಸಂಪರ್ಕಿಸಿದ್ದಾರೆ. ನಾನು IOA (ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್) ಮತ್ತು UWW (ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್) ಜೊತೆ ಮಾತನಾಡಿದ್ದೇನೆ. ನಾನು ಪತ್ರಗಳನ್ನು ಸಹ ಕಳುಹಿಸಿದ್ದೇನೆ, ಈ ವಿಷಯವನ್ನು ಪರಿಶೀಲಿಸಲು ಮತ್ತು ವಿನೇಶ್ ಸ್ಪರ್ಧಿಸಲು ಅವಕಾಶ ಮಾಡಿಕೊಡುವಂತೆ ಕೇಳಿದ್ದೇನೆ" ಎಂದು ಸಂಜಯ್ ಸಿಂಗ್ ಹೇಳಿದರು.
ಲೋಕಸಭೆಯಲ್ಲೂ ಭಾರಿ ಚರ್ಚೆ
ಇನ್ನು ವಿನೇಶ್ ಫೋಗಟ್ ವಿಚಾರ ಸಂಸತ್ ನಲ್ಲೂ ಭಾರಿ ಸುದ್ದಿಗೆ ಗ್ರಾಸವಾಗಿದ್ದು ಲೋಕಸಭೆಯಲ್ಲಿ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಹೇಳಿಕೆ ನೀಡಿದ್ದಾರೆ. ಅಕೋಸ್, ಲೊಂಬಾರ್ಡ್, ಅಶ್ವಿನಿ ಜೀವನ್ ಪಾಟೀಲ್ (ಫಿಸಿಯೋ) ಸೇರಿದಂತೆ ವಿದೇಶದಲ್ಲಿ ತರಬೇತಿ ಮತ್ತು ಸ್ಪರ್ಧೆಗಳಿಗಾಗಿ ವಿನೇಶ್ ಅವರಿಗೆ ಸರ್ಕಾರವು 70 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಿದೆ ಎಂದು ಮಾಂಡವಿಯಾ ಹೇಳಿದರು. ಅವರು ಸ್ಪೇನ್, ಫ್ರಾನ್ಸ್ ಮತ್ತು ಹಂಗೇರಿಯಲ್ಲಿ ತರಬೇತಿ ಪಡೆದರು. ಟೋಕಿಯೊ ಒಲಿಂಪಿಕ್ ಗಾಗಿ ಆಕೆಗೆ 1 ಕೋಟಿ 13 ಲಕ್ಷ ರೂಪಾಯಿಗೂ ಹೆಚ್ಚು ಆರ್ಥಿಕ ನೆರವು ನೀಡಲಾಗಿತ್ತು ಎಂದು ಸಚಿವರು ಹೇಳಿದ್ದಾರೆ.