ನವದೆಹಲಿ: ಲಿಯೋನಲ್ ಮೆಸ್ಸಿ.. ಫುಟ್ಬಾಲ್ ಜಗತ್ತಿನ ಅನಭಿಶಕ್ತ ದೊರೆ.. ಕಾಲ್ಚೆಂಡು ಪಂದ್ಯದ ಸೂಪರ್ ಸ್ಟಾರ್.. ಆದರೆ ಇದೇ ಸೂಪರ್ ಸ್ಟಾರ್ ಹಿಂದೊಮ್ಮೆ ತಾವೇ ಎತ್ತಿ ಆಡಿಸಿದ ಮಗುವೊಂದು ತಮಗೇ ಎದುರಾಳಿ ಆಗುತ್ತದೆ ಎಂದು ಬಹುಶಃ ಅವರು ಕನಸಿನಲ್ಲೂ ಎಣಿಸಿರುವುದಿಲ್ಲ..
ಅಚ್ಚರಿಯಾದರೂ ಇದು ಸತ್ಯ.. ಫುಟ್‌ಬಾಲ್ ಲೋಕದಲ್ಲಿ ಕೆಲ ಕಥೆಗಳು ಅಂಕಿಅಂಶಗಳನ್ನು ಮೀರಿ ಹೃದಯವನ್ನು ಮುಟ್ಟುತ್ತವೆ. ಕೆಲವು ಚಿತ್ರಗಳು ಕಾಲದ ಗೋಡೆಯನ್ನೇ ದಾಟಿ ಭವಿಷ್ಯದ ಕಥೆಯನ್ನು ಹೇಳಿಬಿಡುತ್ತವೆ. ಲಿಯೊನೆಲ್ ಮೆಸ್ಸಿ ಮತ್ತು ಲಮೀನ್ ಯಮಾಲ್ ಅವರ ಕಥೆಯೂ ಅಂತಹದ್ದೇ.
2007ರ ಡಿಸೆಂಬರ್ ತಿಂಗಳು. ಬಾರ್ಸಿಲೋನಾದ ಸರಳ ಬಡಾವಣೆಯೊಂದರಲ್ಲಿ ನಡೆದಿದ್ದ ಯುನಿಸೆಫ್ ಮತ್ತು ಡಿಯಾರಿಯೊ ಸ್ಪೋರ್ಟ್ ಆಯೋಜಿಸಿದ್ದ ಚಾರಿಟಿ ಫೋಟೋಶೂಟ್. ಆಗ ಕೇವಲ 20 ವರ್ಷದ ಯುವ ಫುಟ್‌ಬಾಲರ್ ಲಿಯೊನೆಲ್ ಮೆಸ್ಸಿ ವಿಶ್ವದ ಅತಿದೊಡ್ಡ ತಾರೆಯಾಗಿರಲಿಲ್ಲ. ಮುಜುಗರದ ಸ್ವಭಾವದ ಆ ಯುವಕನಿಗೆ ಒಂದು ಪುಟ್ಟ ಮಗುವನ್ನು ಕೈಯಲ್ಲಿ ಹಿಡಿದು ಫೋಟೋಗೆ ಪೋಸ್ ಕೊಡಬೇಕಾಗಿತ್ತು.
ನೀಲಿ ಬಣ್ಣದ ಪ್ಲಾಸ್ಟಿಕ್ ಟಬ್‌ನಲ್ಲಿ ಐದು ತಿಂಗಳ ಮಗು ಮುದ್ದಾಗಿ ಆಟವಾಡುತ್ತಿತ್ತು. ಆ ಮಗುವಿನ ತಲೆಗೆ ನೀರು ಸುರಿಯುತ್ತಿದ್ದ ಮೆಸ್ಸಿಗೆ, ತನ್ನ ಎದುರಿನ ಆ ಪುಟ್ಟ ಬಾಲಕನ ಭವಿಷ್ಯವೇನು ಎಂಬುದರ ಸುಳಿವೂ ಇರಲಿಲ್ಲ. ಆ ಮಗುವಿನ ಹೆಸರು – ಲಮೀನ್ ಯಮಾಲ್.
ತಾನೇ ಮುದ್ದಾಡಿದ ಮಗು ಇಂದು ತನ್ನ ಎದುರಾಳಿ
ಆಗ ಅದು ಕೇವಲ ಒಂದು ಫೋಟೋ. ಕುಟುಂಬದ ನೆನಪು. ಚಾರಿಟಿ ಕಾರ್ಯಕ್ರಮದ ಭಾಗ. ಆದರೆ 19 ವರ್ಷಗಳ ಬಳಿಕ ಅದೇ ಫೋಟೋ ಫುಟ್‌ಬಾಲ್ ಇತಿಹಾಸದ ಅತ್ಯಂತ ಭಾವನಾತ್ಮಕ ಚಿತ್ರವಾಗಿ ರೂಪಾಂತರಗೊಂಡಿದೆ. ಇಂದು ವಿಶ್ವಕಪ್ 2026ರ ಫೈನಲ್‌ನಲ್ಲಿ, ನ್ಯೂಜೆರ್ಸಿಯ ಮೆಟ್‌ಲೈಫ್ ಕ್ರೀಡಾಂಗಣದಲ್ಲಿ, ಅರ್ಜೆಂಟೀನಾದ ನಾಯಕ ಲಿಯೊನೆಲ್ ಮೆಸ್ಸಿ ಮತ್ತು ಸ್ಪೇನ್‌ನ ಯುವ ಸಂಚಲನ ಲಮೀನ್ ಯಮಾಲ್ ಪರಸ್ಪರ ಎದುರಾಗಲಿದ್ದಾರೆ. ಒಮ್ಮೆ ತನ್ನ ಕೈಯಲ್ಲಿ ಹಿಡಿದು ಸ್ನಾನ ಮಾಡಿಸಿದ್ದ ಮಗುವಿನ ವಿರುದ್ಧವೇ ಮೆಸ್ಸಿ ಈಗ ವಿಶ್ವದ ಅತಿದೊಡ್ಡ ಪ್ರಶಸ್ತಿಗಾಗಿ ಹೋರಾಡಲಿದ್ದಾರೆ.
ಅಂತ್ಯ-ಆರಂಭ ಒಟ್ಟಿಗೇ
ಇದು ಕೇವಲ ಫುಟ್‌ಬಾಲ್ ಪಂದ್ಯವಲ್ಲ. ಇದು ಒಂದು ಪೀಳಿಗೆಯ ಅಂತ್ಯ ಮತ್ತು ಮತ್ತೊಂದು ಪೀಳಿಗೆಯ ಆರಂಭದ ಸಂಕೇತ. ಮೆಸ್ಸಿ – ಒಂದು ಯುಗ. ಅನೇಕ ದಾಖಲೆಗಳು, ಅನೇಕ ಟ್ರೋಫಿಗಳು, ಕೋಟ್ಯಂತರ ಅಭಿಮಾನಿಗಳ ಕನಸುಗಳನ್ನು ಹೊತ್ತ ಮಹಾನ್ ಆಟಗಾರ. ಕತಾರ್ ವಿಶ್ವಕಪ್ ಗೆದ್ದು ಶಿಖರ ತಲುಪಿದ ಬಳಿಕವೂ, ಈ ಟೂರ್ನಿಯಲ್ಲಿ ಎಂಟು ಗೋಲುಗಳೊಂದಿಗೆ ಜಗತ್ತಿಗೆ ಮೆಸ್ಸಿ ಮತ್ತೆ ತನ್ನ ಮಾಯಾಜಾಲ ತೋರಿಸಿದ್ದಾರೆ.
ಇನ್ನೊಂದು ಕಡೆ ಯಮಾಲ್ – ಇನ್ನೂ ಹದಿನೆಂಟರ ಹರೆಯ. ಆದರೆ ಈಗಾಗಲೇ ವಿಶ್ವ ಫುಟ್‌ಬಾಲ್‌ನ ಭವಿಷ್ಯವೆಂದು ಗುರುತಿಸಿಕೊಂಡ ಪ್ರತಿಭೆ. ಸ್ಪೇನ್ ಪರ ಆಡಿದ ಪ್ರಮುಖ ಟೂರ್ನಿಗಳಲ್ಲಿನ ತನ್ನ 12 ಪಂದ್ಯಗಳನ್ನೂ ಗೆದ್ದಿರುವ ಅಪರೂಪದ ದಾಖಲೆ ಹೊಂದಿದ್ದಾರೆ.
ಒಂದೇ ಮೈದಾನದಲ್ಲಿ ಆಡಿ ಬೆಳೆದ ಪ್ರತಿಭೆಗಳು
ಅಚ್ಚರಿ ಎಂದರೆ ಯಾವ ಮೈದಾನದಲ್ಲಿ ಲಿಯೋನಲ್ ಮೆಸ್ಸಿ ಆಡಿ, ಕಸರತ್ತು ಮಾಡಿ ಇಂದು ಸೂಪರ್ ಸ್ಟಾರ್ ಪಟ್ಟಕ್ಕೇರಿದ್ದಾರೆಯೋ ಅದೇ ಮೈದಾನದಲ್ಲೇ ಯಮಾಲ್ ಕೂಡ ತರಬೇತಿ ನಡೆಸಿದ್ದರು. ಇವರಿಬ್ಬರೂ ಬೆಳೆದದ್ದು ಬಾರ್ಸಿಲೋನಾದ ಪ್ರಸಿದ್ಧ ಲಾ ಮಾಸಿಯಾ ಅಕಾಡೆಮಿಯಲ್ಲಿ.
ಮೆಸ್ಸಿಯ ಪ್ರತಿಭೆಗೆ ರೂಪ ನೀಡಿದ ಅದೇ ಅಂಗಳ, ವರ್ಷಗಳ ನಂತರ ಯಮಾಲ್ ಎಂಬ ಆಟಗಾರನನ್ನೂ ಜಗತ್ತಿಗೆ ಕೊಟ್ಟಿದೆ. ಒಬ್ಬನು ಆ ಅಕಾಡೆಮಿಯ ಚಿನ್ನದ ಅಧ್ಯಾಯ. ಮತ್ತೊಬ್ಬನು ಅದರ ಭವಿಷ್ಯದ ಭರವಸೆ. ಈ ಫೈನಲ್ ಅನ್ನು ಹಲವರು “ಗುರು vs ಶಿಷ್ಯ”, “ರಾಜ vs ಉತ್ತರಾಧಿಕಾರಿ” ಎಂದು ವರ್ಣಿಸುತ್ತಿದ್ದಾರೆ. ಆದರೆ ಈ ಕಥೆ ಅದಕ್ಕಿಂತಲೂ ಆಳವಾದದ್ದು.
ವಿಧಿ ಬರೆದ ಕಥೆ
ಫುಟ್‌ಬಾಲ್‌ನಲ್ಲಿ ಪೀಳಿಗೆಗಳು ಸಾಮಾನ್ಯವಾಗಿ ಒಂದರ ನಂತರ ಒಂದು ಬರುತ್ತವೆ. ಪೆಲೆ ಮತ್ತು ಮರಡೋನಾ ವಿಶ್ವಕಪ್ ಫೈನಲ್‌ನಲ್ಲಿ ಎದುರಾಗಲಿಲ್ಲ. ಮರಡೋನಾ ಮತ್ತು ಮೆಸ್ಸಿಯೂ ಅಂತಹ ಕ್ಷಣವನ್ನು ಕಂಡಿಲ್ಲ. ಆದರೆ ಇಲ್ಲಿ ವಿಧಿಯೇ ಒಂದು ಅಪರೂಪದ ವೇದಿಕೆಯನ್ನು ಸೃಷ್ಟಿಸಿದೆ.
ಒಮ್ಮೆ ಮೆಸ್ಸಿಯ ಕೈಯಲ್ಲಿ ಮುದ್ದಾಗಿ ನಗುತ್ತಿದ್ದ ಮಗು, ಇಂದು ಅದೇ ಮೆಸ್ಸಿಯ ಕನಸಿನ ಕೊನೆಯ ವಿಶ್ವಕಪ್ ಅನ್ನು ಕಸಿದುಕೊಳ್ಳುವ ಮಹತ್ವಾಕಾಂಕ್ಷೆಯೊಂದಿಗೆ ನಿಂತಿದೆ. ಹತ್ತೊಂಬತ್ತು ವರ್ಷಗಳ ಹಿಂದೆ ರೊಸಾರಿಯೊದ ಒಬ್ಬ ಮುಜುಗರದ ಹುಡುಗ ಪ್ಲಾಸ್ಟಿಕ್ ಟಬ್‌ನಲ್ಲಿದ್ದ ಮಗುವಿಗೆ ಸ್ನಾನ ಮಾಡಿಸಿದ್ದ. ಇಂದು ಆ ಇಬ್ಬರೂ ವಿಶ್ವ ಫುಟ್‌ಬಾಲ್‌ನ ಅತಿದೊಡ್ಡ ಕಿರೀಟಕ್ಕಾಗಿ ಒಂದೇ ಮೈದಾನದಲ್ಲಿ, ಪರಸ್ಪರ ಎದುರಾಳಿಗಳಾಗಿ ನಿಂತಿದ್ದಾರೆ.
ಭಾನುವಾರ ನ್ಯೂಜೆರ್ಸಿಯ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯದ ಸೀಟಿ ಮೊಳಗಿದಾಗ ಭಾವನೆಗಳು ಮರೆಯಾಗಬಹುದು. ತಂತ್ರಗಳು, ಒತ್ತಡ ಮತ್ತು ಜಯದ ಹಂಬಲವೇ ಮೇಲುಗೈ ಸಾಧಿಸಬಹುದು. ಆದರೆ ಫಲಿತಾಂಶ ಏನೇ ಆಗಲಿ, ಈ ಕಥೆ ಈಗಾಗಲೇ ಇತಿಹಾಸವಾಗಿದೆ. ಒಬ್ಬರ ಮಹತ್ವಾಕಾಂಕ್ಷೆ ಮತ್ತೊಬ್ಬರ ಒಡೆದ ಕನಸಾಗಲಿದೆ. 2007ರಲ್ಲಿ ಬಾತ್‌ಟಬ್‌ನಲ್ಲಿ ಆರಂಭವಾದ ಈ ಕಥೆ 2026ರ ವಿಶ್ವಕಪ್ ಫೈನಲ್‌ನಲ್ಲಿ ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ದಾಖಲಾಗಲಿದೆ.