ಮಕರಂದ/ದೋಣಿ

ಕಾವ್ಯದ ಹಕ್ಕಿಗೆ 118

ನುಡಿ ಮಾಂತ್ರಿಕ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ಹುಟ್ಟಿ 118 ವರ್ಷಗಳು ಕಳೆದಿವೆ. ಆದರೆ ಇಂದಿಗೂ ಅವರ ಒಂದೊಂದು ಕವಿತೆಯೂ ಕಾವ್ಯಪ್ರೇಮಿಗಳ ಮನದಾಳದಲ್ಲಿ ಮಾರ್ದನಿಸುತ್ತಿದೆ. ರಸವೇ ಜನನ ವಿರಸ ಮರಣ ಸಮರಸವೇ ಜೀವನ, ನಾನು ಬಡವ ಆಕೆ ಬಡವಿ ಒಲವೆ ನಮ್ಮ ಬದುಕು ಎಂಬಂತಹ ಕವಿತೆಗಳನ್ನು ಬರೆದು ನಮ್ಮಲ್ಲಿ ಉತ್ಸಾಹದ ಚಿಲುಮೆ ಚಿಮ್ಮಿಸಿದವರು ಬೇಂದ್ರೆ.
ಬೇಂದ್ರೆ ಕಾವ್ಯ ಓದುವುದೆಂದರೆ ಹೊಸ ಲೋಕ ಹೊಕ್ಕಂತೆ. ಪ್ರತಿ ಬಾರಿ ಅವರ ಕವಿತೆ ಓದಿದಾಗಲೂ ಹೊಸ ಆಲೋಚನೆಗಳು ಚಿಗುರೊಡೆಯುತ್ತವೆ, ಭಿನ್ನ ಭಾವಧಾರೆಗಳು ಹೊಮ್ಮುತ್ತವೆ.
ಹೊಸಗನ್ನಡ ಕಾವ್ಯ ಪ್ರಪಂಚದಲ್ಲಿ ಮನ್ವಂತರ ಸೃಷ್ಟಿಸಿದ ದಾರ್ಷನಿಕ ಕವಿ ಹುಟ್ಟಿ ಬೆಳೆದದ್ದು ಧಾರವಾಡದ ಸಾಧನಕೇರಿಯಲ್ಲಿ. ಅವರ ಬಹುತೇಕ ಕವಿತೆಗಳು ಹುಟ್ಟಿದ್ದು ಇಲ್ಲೇ. ಮಾತೃಭಾಷೆ ಮರಾಠಿ, ಕಾವ್ಯಭಾಷೆ ಸವಿಗನ್ನಡ. ತಮ್ಮ 12ನೇ ವರ್ಷಕ್ಕೇ ತಂದೆಯನ್ನು ಕಳೆದುಕೊಂಡ ಬೇಂದ್ರೆಯವರಿಗೆ ಆಸರೆಯಾದದ್ದು ತಾಯಿ ಅಂಬಕ್ಕ. ತಾಯಿ ಎಂಬ ಎರಡಕ್ಷರದ ಸೂತ್ರದಲ್ಲೇ ಜೀವನವನ್ನು ಪೋಣಿಸಿದವರು ಬೇಂದ್ರೆ. ಅವರು ಮೂರು ವರ್ಷದವರಿದ್ದಾಗ ಧಾರವಾಡದ ಹಾಲಗೇರಿಯ ಕೆರೆಯೊಂದರಲ್ಲಿ ಬಿದ್ದು ಮುಳುಗುತ್ತಿದ್ದರಂತೆ. ಅವರನ್ನು ಅಲ್ಲಿಂದ ಹಿಡಿದೆತ್ತಿ ದತ್ತಮಂದಿರಕ್ಕೆ ಕರೆತಂದು ಬದುಕಿಸಿಕೊಂಡವರು ತಾಯಿ ಅಂಬಕ್ಕ. ಹಾಗಾಗಿ ಬೇಂದ್ರೆ 'ಅಂಬಿಕಾತನಯದತ್ತ'ರಾದರು.
ಬೇಂದ್ರೆ ಮನೆ ಅಕ್ಷರಶಃ ಒಂದು ಧಾರ್ಮಿಕ ಶ್ರದ್ಧಾಕೇಂದ್ರದಂತಿತ್ತು. ಅಲ್ಲಿ ನಿತ್ಯ ಚಿದಂಬರ ಭಜನೆ, ರಾಮ ಭಜನೆ, ಬ್ರಹ್ಮಚೈತನ್ಯ ಆರಾಧನೆ ಮತ್ತು ಮರಾಠಿ ಪುರಾಣ ಪಠಣ. ಅಂತಹ ಪ್ರಶಾಂತ ವಾತಾವರಣದಲ್ಲಿ ಬೇಂದ್ರೆಯವರ ವಿಶಾಲ ವ್ಯಕ್ತಿತ್ವ ರೂಪುಗೊಂಡಿತು. ಬಾಲ್ಯದಲ್ಲಿ ಬಡತನವಿದ್ದ ಕಾರಣ ಅದರ ಜತೆಜತೆಗೆ ಆತ್ಮಾಭಿಮಾನವೂ ಬೆಳೆಯಿತು.
ಬೇಂದ್ರೆಯವರ ಕಾಲೇಜು ವಿದ್ಯಾಭ್ಯಾಸವೆಲ್ಲ ಮಹಾರಾಷ್ಟ್ರದ ಪುಣೆಯಲ್ಲಿ. ಅಲ್ಲಿ ಅವರು ಕಾಳಿದಾಸ, ಶೇಕ್ಸ್‌ಪಿಯರ್, ಶೆಲ್ಲಿ, ಕೀಟ್ಸ್, ಎಮರ್ಸನ್, ಮಿಲ್ಟನ್, ಖಲೀಲ್ ಗಿಬ್ರಾನ್ ಮತ್ತು ರವೀಂದ್ರನಾಥ ಟಾಗೋರ್‌ರಂತಹ ವಿದ್ವಾಂಸರ ನೂರಾರು ಗ್ರಂಥಗಳನ್ನು ಅಧ್ಯಯನ ಮಾಡಿದರು. ಅವರ ಲೇಖನಿಯಿಂದ ಕನ್ನಡ, ಮರಾಠಿ, ಸಂಸ್ಕೃತ ಮತ್ತು ಇಂಗ್ಲಿಷ್‌ನಲ್ಲಿ ಕವನಗಳು ಹೊರಬಂದವು. 1918ರಲ್ಲಿ ಧಾರವಾಡದ ವಿಕ್ಟೋರಿಯಾ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ ನೇಮಕಗೊಂಡರು. ಅಷ್ಟರಲ್ಲಾಗಲೇ ಭಾರತ ಸ್ವಾತಂತ್ರ ಚಳುವಳಿಯ ಕಿಚ್ಚು ದೇಶಾದ್ಯಂತ ಹಬ್ಬಿತ್ತು. ಧಾರವಾಡದಲ್ಲಿ ಗೆಳೆಯರ ಗುಂಪು ಎಂಬ ವೇದಿಕೆ ಸ್ಥಾಪಿಸಿದರು. ಗೆಳೆಯರಿಗೆ ಕಾವ್ಯ ಪಾಠ ಹೇಳಿಕೊಡಲಾರಂಭಿಸಿದರು. ಜನಸಾಮಾನ್ಯರಲ್ಲೂ ಕಾವ್ಯದ ಬಗ್ಗೆ ಪ್ರೀತಿ, ಅಭಿಮಾನ ಮತ್ತು ಅಭಿರುಚಿಯನ್ನು ಬೆಳೆಸತೊಡಗಿದರು. ಕನ್ನಡ ಕಾವ್ಯ ಪ್ರವಾಹ ಇಳಿಮುಖವಾಗುತ್ತಿದ್ದ ಆ ಹೊತ್ತಿನಲ್ಲಿ ಹೊಸ ಕಾವ್ಯವನ್ನು ಸೃಷ್ಟಿಸಲು ಪ್ರೇರಣೆಯಾದದ್ದೇ ಈ ಗೆಳೆಯರ ಗುಂಪು. ಈ ವೇದಿಕೆ ಕೆಲವೇ ಸಮಯದಲ್ಲಿ ನೂರಾರು ಕವಿಗಳನ್ನು ಸೂಜಿಗಲ್ಲಿನಂತೆ ಸೆಳೆಯಿತು. ಅಲ್ಲಿ ಸದಸ್ಯರಾಗಿದ್ದ ವಿ.ಕೃ.ಗೋಕಾಕ್, ರಂ.ಶ್ರೀ.ಮುಗಳಿ, ಮಧುರ ಚೆನ್ನ, ಆನಂದಕಂದರು ಮಹತ್ವಪೂರ್ಣ ಕಾವ್ಯ ಸೃಷ್ಟಿಸಿದರು. ಇದಲ್ಲದೆ ಪಂಪೋತ್ಸವ, ವಿದ್ಯಾರಣ್ಯ ಉತ್ಸವ, ರವೀಂದ್ರೋತ್ಸವ ಹುಟ್ಟುಹಾಕಿದರು.
1927. ಬೆಳಗಾವಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ. ಅಲ್ಲಿ ಬೇಂದ್ರೆ ತಾವು ಬರೆದ 'ಹಕ್ಕಿ ಹಾರುತಿದೆ ನೋಡಿದಿರಾ' ಕವನವನ್ನು ಅದ್ಭುತವಾಗಿ ಹಾಡಿದರು. ಇಡೀ ಸಭೆಯಲ್ಲಿ ಮಿಂಚಿನ ಸಂಚಾರ. ಅದೇ ಸಮಯಕ್ಕೆ ಬೇಂದ್ರೆ ಬ್ರಿಟಿಷರ ಆಳ್ವಿಕೆ ವಿರೋಧಿಸಿ 'ನರಬಲಿ' ಕವಿತೆ ಬರೆದರು. ಆ ಕಾವ್ಯ ಅವರ ನೌಕರಿಯನ್ನೇ ಬಲಿ ತೆಗೆದುಕೊಂಡಿತು. ಕೆಲವು ತಿಂಗಳು ಸೆರೆವಾಸ ಅನುಭವಿಸಬೇಕಾಯಿತು. ಜೈಲಿನಲ್ಲೇ 'ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ' ಕವಿತೆ ಮೂಡಿಬಂತು. ಆ ಸಮಯದಲ್ಲಿ ಬೇಂದ್ರೆಯವರಿಗೆ ಬೆಂಬಲವಾಗಿ ನಿಂತವರು ಮಾಸ್ತಿ.
ಬೇಂದ್ರೆ ಜೀವನ ಪ್ರವಾಹಕ್ಕೆ ಹೊಸ ತಿರುವು ಮೂಡಿದ್ದು 1946ರಲ್ಲಿ. ಆಗಷ್ಟೇ ಅವರು ಸೊಲ್ಲಾಪುರಕ್ಕೆ ಬಂದಿದ್ದರು. ಮನೆಯಲ್ಲಿ ತೀರಾ ಬಡತನ. ಕೆಲವೇ ದಿನಗಳ ಅಂತರದಲ್ಲಿ ಸೊಲ್ಲಾಪುರ, ಬೇಂದ್ರೆಯವರ ಹಿರಿಯ ಮತ್ತು ಕಿರಿಯ ಮಕ್ಕಳಿಬ್ಬರನ್ನೂ ಆಹುತಿ ತೆಗೆದುಕೊಂಡಿತು. ಬೇಂದ್ರೆಯವರ ಬದುಕಿನ ಅತ್ಯಂತ ದುರ್ಭರ ದಿನಗಳವು. ಆಗಲೇ ಬೇಂದ್ರೆ 'ರುದ್ರ ವಿಲಾಸದ ಪರಿಯೇ ಬೇರೆ, ಶಿವ ಕರುಣೆಯೇ ಹಿರಿದು, ಶಿವ ಕಾರುಣ್ಯದ ಘನತೆಯೇ ಮಿಗಿಲು- ತಿಳಿದವರಾರಿದನು' ಬರೆದದ್ದು. 'ಬಡತನ ಸಿರಿತನ ಕಡೆತನಕ ಉಳಿದಾವೇನ' ಎನ್ನುತ್ತಾ ತಮ್ಮೆಲ್ಲ ದುಃಖ, ನೋವು, ಬಡತನವನ್ನೇ ಕಾವ್ಯದ ವಸ್ತುವಾಗಿ ಮಾಡಿಕೊಂಡರು.
ಶ್ರೋತೃಗಳನ್ನು ಮಂತ್ರಮುಗ್ಧರನ್ನಾಗಿಸುವ ಕಂಠಸಿರಿ ಬೇಂದ್ರೆಯವರಿಗೆ ತಾಯಿಯ ಬಳುವಳಿ. ಅವರು ಒಮ್ಮೆ ಪದ್ಯ ಓದಿದರೆ ಸಾಕು ಅದರ ಅರ್ಥದ ಪದರಗಳು ಗರಿಬಿಚ್ಚುತ್ತಾ ಹೋಗುತ್ತಿದ್ದವು. ಅದನ್ನೇ ಅವರು 'ಒಳಗಿನ ಬೇಂದ್ರೆ ಹಾಡ್ತಾನ ಅಂಬಿಕಾತನಯ ಕೇಳ್ತಾನ' ಎಂದು ಒಂದೆಡೆ ಹೇಳಿದ್ದಾರೆ. ನಿರಾಶಾವಾದಿಯನ್ನು ಆಶಾವಾದಿಯನ್ನಾಗಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಬತ್ತಿಹೋದ ಹೃದಯದಲ್ಲಿ ಪ್ರೀತಿ-ಪ್ರೇಮವನ್ನು ಅರಳಿಸಬಲ್ಲ ಪ್ರೇರಕ ಶಕ್ತಿ ಅವರ ಕವಿತೆಗಳಲ್ಲಿತ್ತು. ಪ್ರಕೃತಿಯ ಸೌಂದರ್ಯ, ಗಂಡು-ಹೆಣ್ಣಿನ ನಡುವಿನ ಮಾರ್ದವ ಘಳಿಗೆಗಳು, ಪ್ರೀತಿ, ಪ್ರೇಮ, ಅನುರಾಗ, ದೇಶಪ್ರೇಮ, ಜೀವನದ ಸುಖ-ದುಃಖ, ನೋವು-ನಲಿವು ಮತ್ತು ಅಂತರಂಗದ ಅನುಭವಗಳೇ ಬೇಂದ್ರೆ ಕಾವ್ಯದ ವಸ್ತುಗಳಾದವು. ಸ್ನೇಹ, ಚೆಲುವು, ಒಲವು, ಸಾಮರಸ್ಯ, ದೈವಿಕತೆ ಬೇಂದ್ರೆಯ ಮೂಲ ಸಿದ್ಧಾಂತಗಳಾಗಿದ್ದವು.


-ಎಸ್.ಉಮೇಶ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೋದಿ ವಿರೋಧಿ ಪ್ರತಿಭಟನೆಗಳಿಗೆ ಅಮೆರಿಕನ್ನರ ಆರ್ಥಿಕ ನೆರವು?'; Mary Millben ಸ್ಫೋಟಕ ಆರೋಪ!

‘ಮೋದಿಗೆ ಅಮೆರಿಕ ಬೇಕಿಲ್ಲ, ಆದರೆ ಅಮೆರಿಕಕ್ಕೆ ಮೋದಿ ಬೇಕು'.. 'ನಿಮ್ಮನ್ನು ಬಳಸಿಕೊಂಡು ಕೈ ಬಿಡುತ್ತಾರೆ': ಅಭಿಜಿತ್ ದೀಪ್ಕೆಗೆ ಹಾಲಿವುಡ್ ಗಾಯಕಿ ಎಚ್ಚರಿಕೆ

CJP ಪ್ರತಿಭಟನೆಯಲ್ಲಿ ಭಾಗಿ: ನಟ Imran Khanಗೆ ಮುಂಬೈ ಪೊಲೀಸರಿಂದ 'Leave India' ನೋಟಿಸ್, ಅ.28ರೊಳಗೆ ಭಾರತ ತೊರೆಯುವಂತೆ ಗಡುವು..!

ಜಿಯೋ - ಸ್ಟಾರ್‌ಲಿಂಕ್‌, ಸ್ಟಾರ್ ವಾರ್ ಹಿಂದಿನ ಆರ್ಥಿಕತೆ! (ಹಣಕ್ಲಾಸು)

ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡರೆ ಮೀಸಲಾತಿ ಸೌಲಭ್ಯ ಸಿಗಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!