ಸಾಪ್ತಾಹಿಕಪ್ರಭ

ಉತ್ತರ ಭೂಪ Bchi

ಬೆಂಗಳೂರಿನಲ್ಲಿ ಇತ್ತೀಚೆಗೆ ನಾಟಕ ಪ್ರದರ್ಶನಗಳು ಮತ್ತು ಅವುಗಳನ್ನು ನೋಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಗರದ ಹೃದಯ ಭಾಗದಲ್ಲಿರುವ ಕೆ.ಹೆಚ್. ಕಲಾಸೌಧದಲ್ಲಿ ಇತ್ತೀಚೆಗೆ 'ಉತ್ತರ ಭೂಪ  Bchi' ನಾಟಕವು ಕಿಕ್ಕಿರಿದ ಸಭಾಂಗಣದಲ್ಲಿ ಪ್ರದರ್ಶನಗೊಂಡಿತು. ಇಂತಹ ಪ್ರತಿಕ್ರಿಯೆ ನಾಟಕ ಲೋಕಕ್ಕೆ ಶುಭ ಸೂಚಕವೇ ಸರಿ. 'ನೀವು ಕೇಳಿದಿರಿ' ಅಂಕಣಕ್ಕೆ ಉತ್ತರಿಸುತ್ತಿದ್ದ ಬೀಚಿ ಅವರ ಪ್ರಶ್ನೋತ್ತರಗಳನ್ನು ಮೂಲವಾಗಿ ಇಟ್ಟುಕೊಂಡಿದ್ದಲ್ಲದೇ ಅವರ ಕವನ ಶೈಲಿಯ ಚುಟುಕಗಳನ್ನು ಅಳವಡಿಸಿಕೊಂಡು ತಮ್ಮದೇ ಆದ ಶೈಲಿಯಲ್ಲಿ ಕಥೆ ಹೆಣೆದು ಅದಕ್ಕೆ ನಾಟಕ ರೂಪವನ್ನು ಕೊಟ್ಟವರು ಎನ್.ಸಿ. ಮಹೇಶ್. ಈ ನಾಟಕವನ್ನು 'ಅಂತರಂಗ' ತಂಡಕ್ಕಾಗಿ ಅರ್ಚನಾ ಶ್ಯಾಂ ನಿರ್ದೇಶಿಸಿದ್ದಾರೆ.
ನಾಟಕದ ಆರಂಭವೇ ಬೀಚಿ ಅವರ ಪಾತ್ರಧಾರಿಯ ಪ್ರಶ್ನೋತ್ತರ. ಬೀಚಿಯಂತೆಯೇ ವೇಷ ಭೂಷಣಗಳಲ್ಲಿ ಕಾಣಿಸಿಕೊಳ್ಳವ ಈ ಪಾತ್ರ ಪ್ರತಿ ಪ್ರಶ್ನೆಗೂ ಉತ್ತರಿಸುತ್ತಾ ಹೋಗುತ್ತದೆ. ಆದರೆ ಪ್ರಶ್ನೆ ಯಾರು ಕೇಳುತ್ತಿದ್ದಾರೆ ಎಂಬ ಗೊಂದಲ ಪ್ರೇಕ್ಷಕರನ್ನು ಕಾಡಿ ಅದಕ್ಕೆ ಉತ್ತರ ಸಿಗುವ ಹೊತ್ತಿಗೆ ಬೀಚಿ ಪಾತ್ರಧಾರಿ ಕೊಟ್ಟ ಉತ್ತರ ಹಾರಿಹೋಗಿರುತ್ತೆ. ಉತ್ತರದ ಬಗ್ಗೆ ಸ್ವತಃ ಬೀಚಿಯವರೇ ಪ್ರಶ್ನೆ ಎತ್ತುವಂತಿಲ್ಲ. ಅದೇ ತಾನೇ ಬೀಚಿ ಅವರ ಸ್ಪೆಷಲ್! ಅಂದರೆ ಈ ದೃಶ್ಯವನ್ನು ಸಂಯೋಜಿಸುವಾಗ ರಂಗದ ಮೇಲೆ ಬೀಚಿಯನ್ನು ಹೊರತುಪಡಿಸಿ ಯಾರೂ ಅವಶ್ಯಕತೆ ಇರಲ್ಲ. ಪ್ರಶ್ನೆಗಳು ರಂಗದ ಬದಿಯಿಂದ ಬೇರೆ ಬೇರೆ ಧ್ವನಿಗಳಿಂದ ಬಂದರೆ ಪ್ರೇಕ್ಷಕರ ಗಮನ ಬೀಚಿಯ ಪಾತ್ರ ಮತ್ತು ಉತ್ತರದ ಬಗ್ಗೆ ಕೇಂದ್ರೀತವಾಗುವುದರಿಂದ ನಗೆಯ ಹೊನಲು ಹರಿಯಲು ಸಹಕಾರಿಯಾಗುತ್ತದೆ. ಬೀಚಿಯವರ ಜೀವನದ ಕುರಿತು ಅವರೊಂದಿಗೇ ಕೇಳಿ ತಿಳಿಯುವ ಸಂಯೋಜನೆ ಸಮಯೋಚಿತವಾಗಿದೆ.
ಇನ್ನು ಕಥೆಯು ಸಾಮಾಜಿಕವಾದದ್ದು. ತಮ್ಮ ಮಗಳಿಗೆ ವರನನ್ನು ಪರೀಕ್ಷೆಗೆ ಒಡ್ಡಿ (ಪ್ರಶ್ನೋತ್ತರ) ಆಯ್ಕೆ ಮಾಡುವ ದೃಶ್ಯಗಳಲ್ಲಿ ನಾಟಕಕ್ಕೆ ಬೇಕಾದ ಆಯಾಮಗಳನ್ನು ನಿರ್ದೇಶಕಿ ಉಪಯೋಗಿಸಿಕೊಂಡು  ತರಹೇವಾರಿ ಪಾತ್ರಗಳನ್ನು ರಂಗಕ್ಕೆ ತಂದಿದ್ದಾರೆ. ಬೀಚಿಯವರ ಹಾಸ್ಯದೊಂದಿಗೆ ಮಹೇಶ್ ಅವರು ತಮ್ಮ ಹಾಸ್ಯ ಸಾಹಿತ್ಯವನ್ನು ತೂಗಿ ಬರೆದು ಹೊಂದಾಣಿಕೆ ಮಾಡಿದ್ದಾರೆ. ಮಧ್ಯೆಮಧ್ಯೆ ಬೀಚಿ ಅವರ ನುಡಿ ಮುತ್ತುಗಳನ್ನು ಪೋಣಿಸಿ ಸಂಭಾಷಣೆಯ ಅಂದ ಹೆಚ್ಚಿಸಿದ್ದಾರೆ.
 ಬೀಚಿ ಅವರ ಕಟ್ಟಾ ಅಭಿಮಾನಿಯು 'ಬೀಚಿ' ಎಂಬ ನಾಮಧೇಯದಿಂದಲೇ ಪ್ರವೇಶಿಸಿ ಮೂಲ ಬೀಚಿ ಅವರ ಹಾಸ್ಯವನ್ನೆಲ್ಲ ಪ್ರಚುರ ಪಡಿಸಿದ್ದಾರೆ. ಈ ಪಾತ್ರ ನಾಟಕಕ್ಕೆ ತೂಕ ತಂದಿದೆ. ತಂದೆಯ ಪಾತ್ರಧಾರಿಯಾಗಿ ರಾಂ ಮಂಜೋನಾಥ್ ಮತ್ತು ತಾಯಿ ಪಾತ್ರಧಾರಿಯಾಗಿ ಸೌಮ್ಯ ಮೂರ್ತಿ ಅವರ ಜೋಡಿ ಇಡೀ ನಾಟಕದ ಮೂಲ. ಪುರೋಹಿತನ ಪಾತ್ರವು ಪ್ರೇಕ್ಷಕನನ್ನು ನಗಿಸಿದೆ. ಮಗಳ ಪಾತ್ರಧಾರಿ ಹೈಟೆಕ್ ಹುಡುಗಿಯಾಗಿ ತಮ್ಮ ಪಾತ್ರ ನಿರ್ವಹಿಸಿದ್ದಾರೆ. ಚೆಲ್ಲು ಅಭಿನಯ ಕೂಡ ಸಮರ್ಥವಾಗಿದೆ.
ಹರಿಭಕ್ತ, ಸೈನಿಕ, ಹರಿಕಥಾ ವಿದ್ವಾನ್, ಹಿಪ್ಪಿಗಳೆಲ್ಲ ಜನರನ್ನು ರಂಜಿಸಿದರೂ ಅರ್ಧನಾರೀಶ್ವರ ಬಂದು ಅವರನ್ನೆಲ್ಲ ಹಿಂದಕ್ಕೆ ನೂಕುತ್ತಾ ಮುಂಚೂಣಿಗೆ ನುಗ್ಗುತ್ತದೆ! ಮದುವೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಾಗ ಹುಡುಗಿಯ ಹಿಂದೆ ಮುಂದೆ ಪತ್ರಕರ್ತ, ಟೀವಿ ಮಾಧ್ಯಮ ಮತ್ತು ಮಹಿಳಾ ಸಂಘಟನೆಗಳ ರೂಪಗಳ ಕಲ್ಪನೆ ಮತ್ತು ಬಳಕೆ ಕೂಡ ರಂಗ ಪ್ರಯೋಗಕ್ಕೆ ಹೊಸ ಆಯಾಮ ನೀಡಿವೆ.
ಬೀಚಿಯವರ ಇಂಗ್ಲೀಷ್ ಮೋಹವನ್ನು ತುಂಡರಿಸಿದ ಪ್ರಸಂಗ, ಅವರ ಪತ್ನಿಯವರು ಕೊಟ್ಟ ಅನಕೃ ಅವರ ಸಂಧ್ಯಾರಾಗದ ಬಗ್ಗೆ ಬೀಚಿ ಅಭಿಪ್ರಾಯ ಪ್ರೇಕ್ಷಕರಿಗೆ ದಾಖಲೆಯಾಗಿ ನಿಲ್ಲುತ್ತವೆ. ಡಿ.ವಿ. ಗುಂಡಪ್ಪನವರ ತಿಮ್ಮ ಸೂರ್ಯ ಆದ್ರೆ ಬೀಚಿಯವರ ತಿಂಮ ಬೆಡ್ ಲ್ಯಾಂಪ್ ಎಂಬ ನುಡಿಯಲ್ಲಿ ಬೀಚಿ ಅವರ ದೊಡ್ಡಸ್ತಿಕೆಯ ಮನ ತೋರ್ಪಡಿಸುತ್ತದೆ. ಬೀಚಿ ಅವರ ಹೆಸರೇ ಈ ನಾಟಕ ಬಲವಾದ್ದರಿಂದ ನಗಲು ಸಾಕಷ್ಟು ಅವಕಾಶಗಳು ಈ ನಾಟಕದಲ್ಲಿ ಸಿಗುತ್ತವೆ ಅನ್ನೋದು ನೋ ಡೌಟ್. ಇದೇ ನಾಟಕ ಜುಲೈ 14 ರಂದು ಮಲ್ಲೇಶ್ವರಂನ ಸೇವಾ ಸದನದಲ್ಲಿ ಇದೆ. ನಗಲು ಬಯಸುವವರು ಯೋಜನೆ ಮಾಡಿಕೊಳ್ಳಬಹುದು. ಮಾಹಿತಿಗೆ- 9880914509.

= ಸಂಕೇತ್ ಗುರುದತ್ತ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CJP ಪ್ರತಿಭಟನೆಯಲ್ಲಿ ಭಾಗಿ: ನಟ Imran Khanಗೆ ಮುಂಬೈ ಪೊಲೀಸರಿಂದ 'Leave India' ನೋಟಿಸ್, ಅ.28ರೊಳಗೆ ಭಾರತ ತೊರೆಯುವಂತೆ ಗಡುವು..!

ಭಾರತೀಯರ ಸಾಮೂಹಿಕೆ ಹತ್ಯೆಗೆ ಸಂಚು: ರೈಫಲ್ ಹಿಡಿದು ಅಮೆರಿಕದ ಹಿಂದೂ ದೇವಸ್ಥಾನಕ್ಕೆ ನುಗ್ಗಿದ್ದ ಶೂಟರ್; ಕೊನೆ ಕ್ಷಣದಲ್ಲಿ ಗನ್ ಜಾಮ್, ಆರೋಪಿ ಬಂಧನ..!

ಶೃಂಗೇರಿ ಮತ ಎಣಿಕೆ Video ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ..!

ಕೇರಳಂ: ಮಿನಿ ಕೂಪರ್ ಕಾರು ಅಪಘಾತದಲ್ಲಿ ಮೂವರ ಸಾವು, ತಡರಾತ್ರಿಯಲ್ಲಿ ಹಿಂದೂ ಯುವತಿಯರು ಹೊರಗೆ ಹೋಗಿದ್ಯಾಕೆ? ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ

ಸ್ಥಳೀಯ ಸಂಸ್ಥೆಗಳಿಗೂ ಜಿಎಸ್‌ಟಿ ಆದಾಯ ಹಂಚಿಕೆ: GST ಮಂಡಳಿಗೆ ರಾಜ್ಯ ಸರ್ಕಾರ ಪ್ರಸ್ತಾವನೆ