ಸಾಪ್ತಾಹಿಕಪ್ರಭ

ಆಮ್ ಆದ್ಮಿಯ ಪ್ರತಿನಿಧಿ ಅರಳಿದ ಅರವಿಂದ

ಎರಡು ವರ್ಷಗಳ ಹಿಂದೆ ದೇಶದ ಪ್ರಖ್ಯಾತ ನಿರಶನ ಸತ್ಯಾಗ್ರಹಿ, ಮಹಾರಾಷ್ಟ್ರದ ರಾಲೆಗಾಂವ್ ಸಿದ್ದಿಯ ಅಣ್ಣಾ ಹಜಾರೆ, ಭ್ರಷ್ಟಾಚಾರ ವಿರೋಧಿ ಜನ ಲೋಕಪಾಲ ಕಾಯಿದೆಗಾಗಿ ಹೋರಾಟ ಹೂಡಿದಾಗ, ಎರಡೇ ದಿನಗಳಲ್ಲಿ ಅದು ದೇಶದ ಮಧ್ಯಮ ವರ್ಗದ ಮನೆ ಮಾತಾಯಿತು.
ಆ ಸತ್ಯಾಗ್ರಹಕ್ಕೆ ಸಂಘಟನೆ ಇರಲಿಲ್ಲ. ಅದಕ್ಕೆ ಮೂಲತಃ ವೆಬ್‌ಸೈಟ್, ಸೆಲ್‌ಫೋನ್, ಮಾಧ್ಯಮ ಪ್ರಪಂಚದಿಂದಲೇ ಬೆಂಬಲ ಮೂಡಿ ಬಂದಿದ್ದು. ಆದರೂ ಅದು ಎಷ್ಟರ ಮಟ್ಟಿಗೆ ಪ್ರಭಾವಿಯಾಗಿ ಪ್ರಬಲವಾಯಿತೆಂದರೆ, ಒಂದು ಹಂತದಲ್ಲಿ ಕೇಂದ್ರ ಸರ್ಕಾರದ ಐವರು ಹಿರಿಯ ಮಂತ್ರಿಗಳು, ಹೇಳಲು ಹೆಸರೇ ಇಲ್ಲದಿದ್ದ ಈ ಆಂದೋಲನದ ಪ್ರತಿನಿಧಿಗಳ ಜತೆ ಭ್ರಷ್ಟಾಚಾರ ವಿರೋಧಿ ಕಾಯಿದೆಯ ವಿಧಿ-ನಿಯಮಗಳನ್ನು ಚರ್ಚಿಸಬೇಕಾದ ಪರಿಸ್ಥಿತಿ ಇತ್ತು.
ಆಂದೋಲನದ ಜನ ಸಂಪರ್ಕ ಸಾಧನೆಗೆ ನಿಜವಾದ ಕಾಣಿಕೆ ನೀಡಿದವರಲ್ಲಿ ಅರವಿಂದ ಕೇಜ್ರಿವಾಲ ಅವರ ಹೆಸರು ಈಗ ಚಿರಪರಿಚಿತ. ಅಣ್ಣಾ ಹಜಾರೆ ಸಂಘಟನೆಗೆ ಈಗ 'ಇಂಡಿಯಾ ಎಗೆನಸ್ಟ್ ಕರಕ್ಷನ್‌' ಎನ್ನುವ ನಾಮಕರಣವಾಗಿದೆ. ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ರಾಜಕೀಯ ಅಂಗಳಕ್ಕೂ ಕೊಂಡೊಯ್ಯುವ ಕಲ್ಪನೆಯನ್ನು ಅರವಿಂದ ಕೇಜ್ರಿವಾಲ, ಪ್ರಶಾಂತ ಭೂಷಣ, ಯೋಗೇಂದ್ರ ಯಾದವ್ ಮಂಡಿಸಿದಾಗ ಅಣ್ಣಾ ಸಂಗಾತಿಗಳು ಬೇಡ ಎಂದರು.
ಆ ಸಮಯದಲ್ಲೇ ಅರವಿಂದ ಕೇಜ್ರಿವಾಲ ಒಂದು ರಾಜಕೀಯ ಸಂಘಟನೆಯನ್ನು ರೂಪಿಸುವ ನಿರ್ಧಾರವನ್ನು ಪ್ರಕಟಿಸಿದ್ದು. ಅದು ಈಗ ಸ್ಥಾಪನೆಯಾಗಿದೆ. ಕೆಲವು ತಿಂಗಳಿಂದಲೂ ಒಂದು ರಾಜಕೀಯ ಪಕ್ಷದ ರೀತಿಯಲ್ಲೇ ಕೆಲಸ ಮಾಡುತ್ತಿದೆ. ದೆಹಲಿಯ ಜನಜೀವನ, ರಾಜಕೀಯ ಹಾಗೂ ಸಾಮಾಜಿಕ ಸ್ವರೂಪವನ್ನು ಚೆನ್ನಾಗಿ ಬಲ್ಲ ಅರವಿಂದ ಕೇಜ್ರಿವಾಲ ದೆಹಲಿಯನ್ನೇ ತಮ್ಮ ಆಮ್ ಆದ್ಮಿ ಪಾರ್ಟಿಯ ಪ್ರಯೋಗ ಶಾಲೆಯನ್ನಾಗಿ ಪರಿವರ್ತಿಸಲು ಮುಂದಾದರು.
ಮುಂದಿನ ತಿಂಗಳಲ್ಲೇ ಅಲ್ಲಿ ಚುನಾವಣೆ. ದೆಹಲಿಯ ರಾಜಕೀಯ ಭೂಪಟದಲ್ಲಿ ಪ್ರಧಾನವಾಗಿ ಕಂಡು ಬರುವುದು ಕಾಂಗ್ರೆಸ್ ಮತ್ತು ಬಿಜೆಪಿ ಮಾತ್ರ. ಅಲ್ಲಿ- ಇಲ್ಲಿ ಉತ್ತರ ಪ್ರದೇಶದಿಂದ ವಲಸೆ ಬಂದಿರುವವರು ಸಮಾಜವಾದಿ ಪಾರ್ಟಿಯ ಬಾವುಟ ಹಿಡಿಯುತ್ತಾರೆ. ಕೆಲವರು ಬಹುಜನ ಸಮಾಜ ಪಾರ್ಟಿಯ ಬೆಂಬಲಿಗರೂ ಇದ್ದಾರೆ. ಆದರೆ ಈಗ ದೆಹಲಿಯ ಟೆಲಿಫೋನ್ ಕಂಬಗಳಿಗೆ ಸುತ್ತಿಕೊಂಡಿರುವುದು ಆಮ್ ಆದ್ಮಿ ಪಾರ್ಟಿಯ ಪೊರಕೆಯ ಚಿಹ್ನೆ ಇರುವ ಪೋಸ್ಟರ್. ಬಹುತೇಕ ಆಟೋರಿಕ್ಷಾಗಳು ಈ ಪೋಸ್ಟರ್‌ಗಳನ್ನು ಅಂಟಿಸಿಕೊಂಡಿವೆ. ಇದ್ದಕ್ಕಿದ್ದಂತೆ ಇದೆಲ್ಲವನ್ನು ಮಾಡಿಸಿದವರು ಯಾರು ಎಂದು ಕೇಳಿದರೆ ಸಿಗುವ ಒಂದೇ ಉತ್ತರ ಅರವಿಂದ ಕೇಜ್ರಿವಾಲ.
ಯಾರು ಈ ಕೇಜ್ರಿವಾಲ? ಮೂಲತಃ ಹರ್ಯಾಣದ ಶ್ರೀಮಂತ ಮನೆತನದಲ್ಲಿ ಹುಟ್ಟಿ, ಉತ್ತರ ಭಾರತದ ಅನೇಕ ನಗರಗಳಲ್ಲಿ ವಿದ್ಯಾಭ್ಯಾಸ ಮಾಡಿ, ಕೊನೆಗೆ ಖರಗ್‌ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಟೆಕ್ನಾಲಜಿಯ ಪದವಿ ಪಡೆದ ವ್ಯಕ್ತಿ. ಕೆಲವು ಕಾಲ ಟಾಟಾ ಸ್ಟೀಲ್ ಸಂಸ್ಥೆಯಲ್ಲಿ ನೌಕರಿ.
ಮುಂದೆ, ಅಖಿಲ ಭಾರತ ಸ್ಪರ್ಧಾ ಪರೀಕ್ಷೆಯಲ್ಲಿ ಸ್ಪರ್ಧಿಸಿ ಇಂಡಿಯನ್ ರೆವಿನ್ಯೂ ಸರ್ವಿಸ್ ಸೇರಿ, ಆದಾಯ ತೆರಿಗೆಯ ವಿಭಾಗದಲ್ಲಿ ಡೆಪ್ಯೂಟಿ ಕಮಿಷನರ್ ಆಗಿದ್ದವರು. ಆ ವೇಳೆಗಾಗಲೇ ವೈಯಕ್ತಿಕವಾಗಿ, ದೆಹಲಿಯಲ್ಲಿ ಸಾಮಾನ್ಯ ಜನರಿಗೆ ನಾಗರಿಕ ಸೌಲಭ್ಯಗಳ ವಿಚಾರದಲ್ಲಿ ನ್ಯಾಯ ದೊರಕಿಸಿಕೊಡುವ ಉದ್ದೇಶದ ಪರಿವರ್ತನ್ ಎನ್ನುವ ಸಂಸ್ಥೆಯನ್ನೂ ಕಟ್ಟಿದ್ದರು. ಪರಿವರ್ತನ್ ದೇಶದ ಅತಿ ದೊಡ್ಡ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಒಂದು. ಆ ಸಂಸ್ಥೆಯ ಮೂಲಕ ಮಾಡಿದ ಕೆಲಸಕ್ಕಾಗಿ ಅವರಿಗೆ ರಾಮನ್ ಮ್ಯಾಗ್ಸೇಸೆ ಪ್ರಶಸ್ತಿ ಲಭ್ಯವಾಯಿತು.
ಆ ಪ್ರಶಸ್ತಿಯ ಹಣದಿಂದ 'ಪಬ್ಲಿಕ್ ರಿಸರ್ಚ್ ಫೌಂಡೇಷನ್‌' ಸಂಸ್ಥೆಯ ನಿರ್ಮಾಣವಾಯಿತು. ಇವೆಲ್ಲದರ ನಡುವೆ ಮಾಹಿತಿ ಸ್ವಾತಂತ್ರ್ಯದ ಹಕ್ಕಿನ ಕಾಯಿದೆಯ ರಚನೆಗಾಗಿ ಹಲವಾರು ವೇದಿಕೆಗಳ ಮೂಲಕ ಹೋರಾಟ ನಡೆಸಿದರು.
ಆ ಕಾಯಿದೆ ಬಂದ ಅನಂತರ ಅವರು ಕೆಲಸಕ್ಕೆ ರಾಜಿನಾಮೆ ನೀಡಿ, ಭ್ರಷ್ಟಾಚಾರದ ಪ್ರಕರಣಗಳ ಬೆನ್ನಟ್ಟಿ ಹೋಗಲು ಆರಂಭಿಸಿದರು. ಆ ಕಾಯಿದೆಯ ಬಳಕೆಯ ತಂತ್ರಗಾರಿಕೆ, ವಿಧಾನ ಹಾಗೂ ಪರಿಣಾಮದ ಪರಿಚಯವನ್ನು ಆರಂಭದ ದಿನಗಳಲ್ಲಿ ಮಾಡಿಕೊಟ್ಟವರೇ ಅವರು. ಆ ವೇಳೆಗಾಗಲೇ ಸಾರ್ವಜನಿಕ ಹಿತರಕ್ಷಣಾ ಪ್ರಕರಣಗಳಲ್ಲಿ ಸಮುದಾಯದ ಪರವಾಗಿ ಹೋರಾಡುತ್ತಿದ್ದ ಪ್ರಶಾಂತ ಭೂಷಣ ಅವರ ಸಂಪರ್ಕ. ಭ್ರಷ್ಟಾಚಾರದ ವಿರುದ್ಧ ಪರಿಣಾಮಕಾರಿ ಶಾಸನ ರಚನೆಗೆ ಅಣ್ಣಾ ಹಜಾರೆ ನೇತೃತ್ವದಲ್ಲಿ ಹೋರಟವೂ ಆರಂಭವಾಯಿತು.
ಅಂತರ್ಜಾಲದ ಸಾಮಾಜಿಕ ತಾಣಗಳ ಬಳಕೆ, ಸೆಲ್‌ಫೋನ್ ಸಂಪರ್ಕ ಜಾಲದ ಸಾಮರ್ಥ್ಯವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸುವುದರ ಮೂಲಕ ರಾಷ್ಟ್ರವ್ಯಾಪೀ ಆಂದೋಲನ ನಡೆಸುವ ಸಾಧ್ಯತೆಯ ಪರಿಚಯ ಮಾಡಿಕೊಟ್ಟಿದ್ದೂ ಅರವಿಂದ ಕೇಜ್ರಿವಾಲ ಅವರೇ.
ಈಗ ಆಮ್ ಆದ್ಮಿ ಪಾರ್ಟಿಯ ಹೆಸರು ಹಾಗೂ ಅದರ ಚುನಾವಣೆ ಸಂಕೇತವಾದ ಪೊರಕೆ ದೆಹಲಿಯ ನಿವಾಸಿಗಳಿಗೆ ಚಿರಪರಿಚಿತವಾಗುವಂತೆ ಮಾಡಿದ್ದಾರೆ. ಸ್ವತಃ ಅರವಿಂದ ಕೇಜ್ರಿವಾಲ ಅವರೇ ಕಾಂಗ್ರೆಸ್ಸಿನ ಹ್ಯಾಟ್ರಿಕ್ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ವಿರುದ್ಧ ಸ್ಪರ್ಧಿಸಲಿದ್ದಾರೆ. 'ಈ ಬಾರಿ ಜಾದೂ' ಈಗ ದೆಹಲಿಯ ಎಲ್ಲಾ ಕಡೆ ಕಂಡು ಬರುವ ಘೋಷಣೆ. ಆಶ್ಚರ್ಯಕರ ಸಂಗತಿ ಎಂದರೆ, ಚುನಾವಣೆ ಪೂರ್ವ ಸಮೀಕ್ಷೆಗಳನ್ನು ನಡೆಸುವ ಯಾವ ಸಂಸ್ಥೆಯೂ ಆಮ್ ಆದ್ಮಿ ಪಾರ್ಟಿಯನ್ನು 'ಇತರರು' ಎನ್ನುವ ವರ್ಗೀಕರಣಕ್ಕೆ ಸೇರಿಸದೇ ಇರುವುದು.
ಎರಡು ಸಮೀಕ್ಷೆಗಳ ಪ್ರಕಾರ ದೆಹಲಿಯ ಎಪ್ಪತ್ತು ವಿಧಾನ ಸಭೆ ಸ್ಥಾನಗಳಲ್ಲಿ ಆಮ್ ಆದ್ಮಿ ಪಾರ್ಟಿ ಏಳೆಂಟು ಸ್ಥಾನಗಳನ್ನು ಪಡೆದರೂ ಪಡೆಯಬಹುದು. ಆಮ್ ಆದ್ಮಿ ಪಾರ್ಟಿಯ ಸಂಕೇತ ಪೊರಕೆ. ಪಕ್ಷದ ಕಾರ್ಯಕರ್ತರ ತಲೆಯ ಮೇಲೆ ಆಮ್ ಆದ್ಮಿ ಬರೆಹ ಹೊತ್ತ ಗಾಂಧಿ ಟೋಪಿ, ಇನ್ನೊಂದು ಗುರ್ತು. ಅರವಿಂದ ಆ ಟೋಪಿಯನ್ನು ಸೊಟ್ಟಗೆ ಧರಿಸುತ್ತಾರೆ.
ಇಂತಹ ಹೊಚ್ಚ ಹೊಸ ಪಾರ್ಟಿ ಕಾಂಗ್ರೆಸ್- ಬಿಜೆಪಿಗಳಂತಹ ಶ್ರೀಮಂತ ಪಕ್ಷಗಳ ವಿರುದ್ಧ ಹೋರಾಡಲು ಹಣ ಎಲ್ಲಿಂದ ಬರುತ್ತದೆ? ಪ್ರತಿ ಕ್ಷೇತ್ರಕ್ಕೆ ಕೋಟಿ ಕೋಟಿ ಖರ್ಚು ಮಾಡುವ ಶಕ್ತಿ ಕಾಂಗ್ರೆಸ್- ಬಿಜೆಪಿಗಳಿಗಿದೆ. ಅಥವಾ ಆ ಪಕ್ಷಗಳ ಅಭ್ಯರ್ಥಿಗಳಿಗೆ ಇರಬಹುದು. ಆಮ್ ಆದ್ಮಿ ಪಾರ್ಟಿಗೆ ಆ ಅನುಕೂಲವಿಲ್ಲ.
ಆಮ್ ಆದ್ಮಿ (ಜನಸಾಮಾನ್ಯ) ಪಕ್ಷದ ಕೈ ಹಿಡಿಯಬೇಕು. ಅದಕ್ಕಾಗಿ ಮನವಿಯೂ ಹೊರಬಿದ್ದಿದೆ. ಅರವಿಂದ ಕೇಜ್ರಿವಾಲ ಅವರ ಸದ್ಯದ ಗುರಿ ಇಪ್ಪತ್ತು ಕೋಟಿ ರುಪಾಯಿಗಳ ನಿಧಿ ಸಂಗ್ರಹ. ಅದರಲ್ಲಿ ಈಗಾಗಲೇ ಹನ್ನೊಂದು ಕೋಟಿ ಸಂಗ್ರಹವಾಗಿದೆಯಂತೆ. ಈಗಿನ ಲೆಕ್ಕದಲ್ಲಿ ಪ್ರತಿನಿತ್ಯ ಏಳು ಲಕ್ಷ ರುಪಾಯಿಗಳ ಕಾಣಿಕೆ ಬರುತ್ತಿದೆಯಂತೆ.
ಸೆಪ್ಟೆಂಬರ್‌ನ ಮೊದಲ ಮೂರು ವಾರದಲ್ಲೇ ಎರಡೂವರೆ ಕೋಟಿ ಸಂಗ್ರಹವಾಯಿತು. ವಿದೇಶಗಳಿಂದಲೂ ಕಾಣಿಕೆ ಬರುತ್ತಿದೆ. ಆದರೆ ಭಾರತೀಯ ಪ್ರಜೆಗಳಿಂದ ಮಾತ್ರ ಹಣ ಸ್ವೀಕರಿಸಲು ಪಕ್ಷ ನಿರ್ಧರಿಸಿದೆ. ಪ್ರಜ್ಞಾಪೂರ್ವಕವಾಗಿ ಆಸಕ್ತ ಹಿತಗಳನ್ನು ಹೊರಗಿಡುವ ಪ್ರಯತ್ನವೂ ನಡೆದಿದೆ.
ನಿಜ. ಇಂತಹ ಹಲವು ಪ್ರಯತ್ನಗಳು ದೇಶದ ಅನೇಕ ಕಡೆಗಳಲ್ಲಿ ನಡೆದಿದ್ದವು. ಆ ಪ್ರಯತ್ನಗಳು ಯಶಸ್ವಿಯಾಗಲಿಲ್ಲ ಎಂದ ಮಾತ್ರಕ್ಕೇ ಆಮ್ ಆದ್ಮಿ ಪಾರ್ಟಿಯೂ ನೆಲಕಚ್ಚುವುದೆಂದು ಹೇಳಲಿಕ್ಕಾಗದು. ಇಂತಹ ಜನಪರ ಆಂದೋಲನಗಳಿಗೆ ಶಾಶ್ವತವಾದ ಸೋಲು ಎನ್ನುವುದೇ ಇಲ್ಲ. ಒಂದಲ್ಲದಿದ್ದರೆ, ಇನ್ನೊಂದು ಸಂಘಟನೆ ಎದ್ದು ನಿಲ್ಲುತ್ತದೆ, ಅದು ನಿಸರ್ಗದ ಧರ್ಮ.

- ಸತ್ಯ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Vice President Election 2025: ನೂತನ ಉಪ ರಾಷ್ಟ್ರಪತಿಯಾಗಿ ಸಿ ಪಿ ರಾಧಾಕೃಷ್ಣನ್ ಆಯ್ಕೆ

ಮದ್ದೂರಿನಲ್ಲಿ ಕಲ್ಲು ತೂರಾಟ: ಶಾಂತಿ ಕದಡುವುದೇ ಬಿಜೆಪಿ ಉದ್ದೇಶ; ಜಾತಿ, ಧರ್ಮ, ಪಕ್ಷ ಲೆಕ್ಕಿಸದೆ ಕ್ರಮ; Video

ಆಜ್ ತಕ್ ನಿರೂಪಕನ ವಿರುದ್ಧ ದ್ವೇಷ ಭಾಷಣ ಆರೋಪ: ಎಫ್‌ಐಆರ್ ದಾಖಲಿಸಲು UP ನ್ಯಾಯಾಲಯ ಆದೇಶ

Amruta Fadnavis: 'ನೀತಿ ಪಾಠ ಹೇಳುವವರೆ ಈ ರೀತಿಯ ಬಟ್ಟೆ ಧರಿಸಿದರೆ ಹೇಗೆ? ಮಹಾ ಸಿಎಂ 'ಫಡ್ನವೀಸ್ ಪತ್ನಿ' ವಿರುದ್ಧ ನೆಟ್ಟಿಗರ ಆಕ್ರೋಶ, Video ವೈರಲ್

ಅಕ್ರಮ ಬೆಟ್ಟಿಂಗ್ ಪ್ರಕರಣ: ವೀರೇಂದ್ರ ಪಪ್ಪಿ ಚಿನ್ನದ ಖಜಾನೆ ಕಂಡು ED ಶಾಕ್; 21 ಕೆಜಿ ಗೋಲ್ಡ್ ಬಿಸ್ಕೇಟ್ ಜಪ್ತಿ

SCROLL FOR NEXT