ಭಾರತೀಯ ಜನತಾ ಪಾರ್ಟಿ ದೇಶಕ್ಕೆ ದರ್ಶನ ಮಾಡಿಸಿರುವ ಮುಖ್ಯಮಂತ್ರಿಗಳಲ್ಲಿ ಮಧ್ಯಪ್ರದೇಶದ ಶಿವರಾಜ ಸಿಂಗ್ ಚೌಹಾಣ್, ಅತಿ ದಕ್ಷರು ಹಾಗೂ ಪ್ರಾಮಾಣಿಕರು. ಆಡಳಿತ ವ್ಯವಸ್ಥೆಯಲ್ಲಿ, ಸಾಮಾಜಿಕ ಕ್ರಾಂತಿಯ ಸಾಧನೆಯಲ್ಲಿ ಅವರ ಸಾಧನೆ ಬಲು ದೊಡ್ಡದು.
ಕಳೆದ ಹತ್ತು ವರ್ಷಗಳಿಂದಲೂ ಅವರೇ ಅಲ್ಲಿನ ಮುಖ್ಯಮಂತ್ರಿ. ನಿಜವಾಗಲೂ ಮಧ್ಯಪ್ರದೇಶ ಒಂದು ಬಡ ರಾಜ್ಯ. ಹಿಂದೆ ಇದ್ದ ಖನಿಜ ಸಂಪತ್ತು ಈಗ ಛತ್ತೀಸಗಡದಲ್ಲಿದೆ. ಹೇಳಿಕೊಳ್ಳುವ ನಿಸರ್ಗ ಸಂಪತ್ತಿಲ್ಲ. ಜನಸಾಮಾನ್ಯ ವರ್ಗಗಳಲ್ಲಿ ಇನ್ನೂ ಊಳಿಗಮಾನ್ಯ ಪದ್ಧತಿಯನ್ನು ಬೇರು ಸಹಿತ ಕಿತ್ತೆಸೆಯುವುದು ಸಾಧ್ಯವಾಗಿಲ್ಲ. ಆದರೂ ಕಳೆದ ದಶಕಗಳಲ್ಲಿ ಮಧ್ಯಪ್ರದೇಶ ಅಭಿವೃದ್ಧಿ ಕುರಿತ ಪ್ರಕಟಿತ ಅಂಕಿ-ಅಂಶಗಳನ್ನು ಮೆಚ್ಚಲೇಬೇಕು. ಅದು ಸರ್ಕಾರದ ಸಾಧನೆ.
ಆದರೂ ಇತ್ತೀಚಿನವರೆಗೆ ಅಲ್ಲಿನ ಸಮೃದ್ಧಿ, ಶಾಂತಿಯುತ ಬಾಳ್ವೆಯ ವಾತಾವರಣಕ್ಕೆ ಪ್ರಚಾರವೇ ಸಿಕ್ಕಿರಲಿಲ್ಲ. ದಿಲ್ಲಿಗೆ ಹತ್ತಿರವಿದ್ದರೂ ದಿಲ್ಲಿ ಜನರಲ್ಲಿ ಮಧ್ಯಪ್ರದೇಶವೂ ದೇಶದ ಒಂದು ರಾಜ್ಯ ಅಷ್ಟೇ. ಅಲ್ಲಿ ಅದಕ್ಕಿಂತ ಹೆಚ್ಚಿನದೇನೂ ಇಲ್ಲ ಎನ್ನುವ ಭಾವನೆ ಮೂಡಿತ್ತು.
ಉದಾಹರಣೆಗೆ ಗೋಧಿಯ ಬೆಳೆ, ಸೋಯಾ ಬೀನ್ ಉತ್ಪಾದನೆಯಲ್ಲಿ ಅಂಕಿ- ಅಂಶಗಳ ಚರ್ಚೆಯಲ್ಲಿ ಕೇಳಿ ಬರುತ್ತಿದ್ದ ಪ್ರದೇಶಗಳೆಂದರೆ ಹರ್ಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶದ ಪಶ್ಚಿಮ ಭಾಗದ ಜಿಲ್ಲೆಗಳು. ಈಗ ಭಾರತೀಯ ಕೃಷಿಯ ಭೂಪಟದಲ್ಲಿ ಮಧ್ಯಪ್ರದೇಶಕ್ಕೆ ಬಹು ದೊಡ್ಡ ಹೆಸರಿದೆ. ಅಲ್ಲಿ ಉದ್ಯಮ ವಲಯ ಬೆಳೆಯಬೇಕಾದಷ್ಟು ಬೆಳೆದಿಲ್ಲ. ವ್ಯಾಪಾರಿಗಳ ಚಟುವಟಿಕೆ ಕಡಿಮೆ. ಇದೆಲ್ಲ ಹಳೆಯ ಮಾತು.
ಭೂಮಿ ಮಧ್ಯಪ್ರದೇಶದ ಬಹು ದೊಡ್ಡ ಆಸ್ತಿ. ಉದ್ಯಮಗಳಿಗೆ ಭೂಮಿ ಕೊಡಲು ಸಿದ್ಧ. ವಿದ್ಯುತ್ ಸ್ಥಾವರಗಳೂ ಸಿದ್ಧವಾಗುತ್ತಿವೆ. ದಿಲ್ಲಿಗೆ ಸಮೀಪ. ಈಗಾಗಲೇ ಅನೇಕ ಉದ್ಯಮಪತಿಗಳು ಮಧ್ಯಪ್ರದೇಶದತ್ತ ಧಾವಿಸುತ್ತಿದ್ದಾರೆ. ಸದ್ಯದ ಭವಿಷ್ಯದಲ್ಲೇ ಆ ರಾಜ್ಯದ ಚಿತ್ರವೇ ಬದಲಾಗಬಹುದು.
ಈ ಪರಿವರ್ತನೆ, ಸದ್ದು ಗದ್ದಲವಿಲ್ಲದೆ, ರಾಜಕೀಯ ಸಂಘರ್ಷದಿಂದ ದೂರವಾಗಿ ನಡೆದಿರುವುದಕ್ಕೆ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ಅವರ ಸಂಯಮದ ನಡತೆ ಹಾಗೂ ಕಾರ್ಯಶೈಲಿಯೇ ಕಾರಣ. ಅದನ್ನು ಮೊದಲು ಗುರ್ತಿಸಿದವರು ಬಿಜೆಪಿಯ ಹಿರಿಯ ನಾಯಕ ಲಾಲ್‌ಕೃಷ್ಣ ಆಡ್ವಾಣಿ. ದೇಶದ ಎಲ್ಲ ಕಡೆ ಇರುವ ಬಿಜೆಪಿ ಕಾರ್ಯಕರ್ತರಿಗೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಿಗೆ ಶಿವರಾಜ್ ಸಿಂಗ್‌ರ ಹೆಸರು ಚಿರಪರಿಚಿತ. ಚೌಹಾಣ್ ಒಂದು ರಜಪೂತ ಕುಟುಂಬದ ಕುಡಿ. 1959 ಮಾರ್ಚ್‌ನಲ್ಲಿ ಜನನ. ಅವರ ಹದಿಮೂರನೆಯ ವಯಸ್ಸಿನಲ್ಲೇ ಸಂಘದ ಸಂಪರ್ಕ (1972). ತುರ್ತು ಪರಿಸ್ಥಿತಿಯಲ್ಲಿ ಜೈಲುವಾಸ. ಅವರ ಜಾತಿಯ ಹೆಸರು ಕಿರಣ್ ರಜಪೂತ. ಆಳುವ ಕುಲದವರಲ್ಲ. ತೀರಾ ಹಿಂದುಳಿದ ಜನಸಾಮಾನ್ಯ ವರ್ಗಕ್ಕೆ ಸೇರಿದವರು. ತತ್ವಶಾಸ್ತ್ರದ ಎಂ.ಎ. ಪದವೀಧರ.
1990ರಲ್ಲೇ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆ. ಮರು ವರ್ಷವೇ ವಿದಿಶಾದಿಂದ ಲೋಕಸಭೆಯ ಪ್ರವೇಶ. ಐದು ಬಾರಿ ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದಾರೆ, ಮೂರು ಬಾರಿ ವಿಧಾನಸಭೆಗೆ ಆರಿಸಿ ಹೋಗಿದ್ದಾರೆ. 2003ರಲ್ಲಿನ ವಿಧಾನಸಭೆ ಚುನಾವಣೆಯಲ್ಲಿ ಶಿವರಾಜ ಚೌಹಾಣರನ್ನು ಕಾಂಗ್ರೆಸ್ಸಿನ ಹಿರಿಯ ರಜಪೂತ ನಾಯಕ ದಿಗ್ವಿಜಯ ಸಿಂಗ್ ಸೋಲಿಸಿದ್ದರು. ಆಗ ಶಿವರಾಜ್ ಸ್ಪರ್ಧಿಸಿದ್ದು ರಘೋಘರ ಕ್ಷೇತ್ರದಿಂದ. ಆ ಭಾಗ ಹಿಂದೆ ದಿಗ್ವಿಜಯ ಸಿಂಗ್ ಅವರ ಹಿರಿಯರ ಆಧಿಪತ್ಯಕ್ಕೇ ಸೇರಿತ್ತು. ಲೋಕಸಭೆಯ ಸದಸ್ಯರಾಗಿದ್ದಾಗ, ಶಿವರಾಜ್ ಸಿಂಗ್ ಹಲವಾರು ಸಂಸದೀಯ ಸಮಿತಿಗಳಲ್ಲಿ ಕೆಲಸ ಮಾಡಿದ್ದಾರೆ. ಸಮಿತಿಗಳ ಸಭೆಗಳಿಗೆ ಸಕಾಲದಲ್ಲಿ ಹಾಜರಾಗಿ, ಅಂದಿನ ಕಾರ್ಯಕಲಾಪದ ವಿಷಯಗಳ ಕುರಿತು ಅಧ್ಯಯನ ಆಧಾರಿತ ಪೂರ್ವಸಿದ್ಧತೆಯಿಂದ ವಿಷಯ ಪ್ರತಿಪಾದನೆ ಮಾಡುತ್ತಿದ್ದ ವೈಖರಿಯನ್ನು ಸಂಸದರು ಪಕ್ಷ ಭೇದವಿಲ್ಲದೆ ಮೆಚ್ಚಿದ್ದಾರೆ.
ತತ್ವಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದಿದ್ದರೂ, ಚೊಕ್ಕವಾಗಿ ಇಂಗ್ಲಿಷಿನಲ್ಲಿ ಬರೆಯಬಲ್ಲ ಶಕ್ತಿ-ಜ್ಞಾನ ಇದ್ದರೂ ಆಡುಮಾತಿನಲ್ಲಿ ಇಂಗ್ಲೀಷಿನ ಬಳಕೆ ಕಡಿಮೆ. ಆಗಾಗ ಸರಿಯಾದ ಪದಗಳಿಗೆ ಹುಡುಕಾಡುವುದು ಅವರ ಸಹಜ ಪ್ರವೃತ್ತಿ. ಆದ್ದರಿಂದಲೇ ಅವರು ಅಗತ್ಯಬಿದ್ದರೆ ಮಾತ್ರ ಸಂಭಾಷಣೆಗೆ, ಮಾತುಕತೆಗೆ, ವಿಚಾರದ ಪ್ರತಿಪಾದನೆಗೆ ಇಂಗ್ಲೀಷ್ ಬಳಸಲು ಹಿಂಜರಿಯುತ್ತಾರೆ. ಈ ಹಿಂಜರಿಕೆಯಿಂದಲೇ ಅವರ ಚಿಂತನೆ, ವಿಚಾರಧಾರೆ ದೇಶದ ಅತಿ ಪ್ರತಿಷ್ಠಿತ ಸಮಾಜಕ್ಕೆ ಪರಿಚಿತವಾಗಿಲ್ಲ.
ಮಧ್ಯಪ್ರದೇಶದಲ್ಲಿ ಅನೇಕ ಕಡೆಗಳಲ್ಲಿ ಮುಸ್ಲಿಮರ ಸಂಖ್ಯೆ ಗಮನಾರ್ಹ. 2002ರಲ್ಲಿ ಅಯೋಧ್ಯೆಯ ಬಾಬರಿ ಮಸೀದಿ ನೆಲಸಮವಾದ ಸಮಯದಲ್ಲಿ ನಡೆದ ಕೋಮು ಗಲಭೆಗಳಲ್ಲಿ ಸುಮಾರು 150 ಮಂದಿಯ ಹತ್ಯೆಯಾಗಿತ್ತು. ಅದಾದ ಅನಂತರ ಅಲ್ಲಿ ಕೋಮು ಗಲಭೆಗಳು ನಡೆದೇ ಇಲ್ಲ. ಶಿವರಾಜ ಸಿಂಗ್ ಚೌಹಾಣ್ ತಮ್ಮ ದೈನಂದಿನ ವ್ಯವಹಾರದಲ್ಲಿ 'ಸೆಕ್ಯುಲರ್' ಪದವನ್ನು ಬಳಸದೇ ಇದ್ದರೂ, ರಾಜ್ಯಾಡಳಿತದಲ್ಲಿ ಸೆಕ್ಯುಲರ್ ಚಿಂತನೆಯನ್ನು ಪ್ರದರ್ಶಿಸಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲ ಅವರು ಅಲ್ಪ ಸಂಖ್ಯಾತರು ಆಚರಿಸುವ ಹಬ್ಬಗಳಲ್ಲಿ ಸೂಕ್ತ ರೀತಿಯ ಗೌರವವನ್ನು ಪ್ರದರ್ಶಿಸುತ್ತಾರೆ.
ಮಧ್ಯಪ್ರದೇಶದಲ್ಲಿ ನಿಧಾನವಾಗಿ, ಆದರೆ ಸ್ಪಷ್ಟವಾಗಿ ಗುರ್ತಿಸಬಹುದಾದ ರೀತಿಯಲ್ಲಿ ಸಾಮಾಜಿಕ ಪರಿವರ್ತನೆಯ ಆಂದೋಲನ ನಡೆದಿದೆ. ಆ ರಾಜ್ಯದಲ್ಲಿ ಹಿಂದೆ ಮನೆ ಮಾಡಿದ್ದ ಊಳಿಗಮಾನ್ಯ ವ್ಯವಸ್ಥೆಯ ಬೇರುಗಳು ಇನ್ನೂ ಉಳಿದಿರುವ ಇಂದಿನ ಸ್ಥಿತಿಯಲ್ಲಿ ಇದೇನೂ ಸಾಮಾನ್ಯವಾದ ವಿಚಾರವಲ್ಲ. ಈಗಿನ ದಿನಗಳಲ್ಲಿ ಶಿವರಾಜ್ ಸಿಂಗ್ ಅವರನ್ನು ನರೇಂದ್ರ ಮೋದಿ ಅವರ ಜತೆ ಹೋಲಿಸುವ ಪ್ರಯತ್ನ ನಡೆದಿದೆ. ಅವರು 'ಇಲ್ಲ. ಮೋದಿ ನನಗಿಂತ ಸೀನಿಯರ್' ಎಂದು ಹೇಳಿ ಸುಮ್ಮನಾಗುತ್ತಾರೆ. ಮಧ್ಯಪ್ರದೇಶದಲ್ಲೇ ಉಮಾಭಾರತಿ ಕೆಲವು ಕಾಲ ರಾಜ್ಯ ಬಿಜೆಪಿಯ ಏಕೈಕ ನಾಯಕರಾಗುವ ಪ್ರಯತ್ನ ನಡೆಸಿದ್ದೂ ಆಯಿತು. ಅದು ವಿಫಲವೂ ಆಯಿತು. ಉಮಾಭಾರತಿ ಪ್ರತ್ಯೇಕ ರಾಜಕೀಯ ಪಕ್ಷದ ಸ್ಥಾಪನೆಯ ಪ್ರಯತ್ನದಲ್ಲಿ ಸೋತು ಬಿಜೆಪಿಗೆ ಹಿಂತಿರುಗಿದಾಗ, ಶಿವರಾಜ್ ಸಿಂಗ್ ಹೇಳಿದ್ದು: 'ಸಂತೋಷ. ಅವರು ರಾಷ್ಟ್ರೀಯ ನಾಯಕರಾಗಿಯೇ ಮುಂದುವರಿಯಲಿ. ಇಲ್ಲಿ ಮಧ್ಯಪ್ರದೇಶದ ಸಣ್ಣ ಪುಟ್ಟ ಸಮಸ್ಯೆಗಳನ್ನು ನಾವೇ ಬಗೆಹರಿಸಿಕೊಳ್ಳುತ್ತೀವಿ' ಇದುವರೆಗೂ ರಾಜಕೀಯವಾಗಿ ಶಿವರಾಜ ಸಿಂಗ್ ಎದುರಿಸಬೇಕಾದದ್ದು ಕಾಂಗ್ರೆಸ್‌ನ ಹಿರಿಯ ದಿಗ್ವಿಜಯ ಸಿಂಗ್ ಅವರನ್ನು. ದಿಗ್ವಿಜಯ ಸಿಂಗ್, ಈಗ ಹತ್ತು ವರ್ಷಗಳ ಚುನಾವಣೆ ರಾಜಕೀಯ ಸನ್ಯಾಸವೃತವನ್ನು ಮುಗಿಸಿ, ಮತ್ತೆ ವಿದಿಶಾ ಲೋಕಸಭೆ ಕ್ಷೇತ್ರದಲ್ಲಿ ಕಣಕ್ಕಿಳಿಯಲಿದ್ದಾರೆ. ವಿದಿಶಾದ ಈಗಿನ ಪ್ರತಿನಿಧಿ ಸುಷ್ಮಾ ಸ್ವರಾಜ್.
ಕಾಂಗ್ರೆಸ್, ಮಧ್ಯಪ್ರದೇಶದಲ್ಲಿನ ಕ್ಷೇತ್ರಗಳ ವ್ಯವಹಾರವನ್ನು ನಿರ್ವಹಿಸುವ ಹೊಣೆಗಾರಿಕೆಯನ್ನು ಗ್ವಾಲಿಯರ್ ರಾಜಮನೆತನದ ಜ್ಯೋತಿರಾದಿತ್ಯ ಸಿಂಧ್ಯಾ ಅವರಿಗೇ ಒಪ್ಪಿಸಿರುವಂತಿದೆ. ಆದರೆ ಅದಕ್ಕೆ ಮುಂಚೆಯೇ ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದೆ. ಅದನ್ನು ಜ್ಯೋತಿರಾದಿತ್ಯ ಸಿಂಧ್ಯಾ ಅವರೇ ಕಾಂಗ್ರೆಸ್ ಪರವಾಗಿ ನಿರ್ವಹಿಸುವುದೂ ಖಚಿತವಾಗಿದೆ. ಅವರು ಈಗಾಗಲೇ ತಮ್ಮ ಪ್ರವಾಸವನ್ನು ಆರಂಭಿಸಿದ್ದಾರೆ. ವಿಧಾನಸಭೆ ಚುನಾವಣೆಯನ್ನು ಮಧ್ಯಪ್ರದೇಶದ ಮಟ್ಟಿಗೆ ಶಿವರಾಜ್ ಸಿಂಗ್ ಚೌಹಾಣ್- ಜ್ಯೋತಿರಾದಿತ್ಯ ಸಿಂಧ್ಯಾ ಅವರ ನಡುವಣ ಪ್ರತಿಷ್ಠೆಯ ಸಂಘರ್ಷವೆಂದು ಹೇಳಬಹುದು.
ಮಧ್ಯಪ್ರದೇಶದಲ್ಲಿ ಕೆಲವು ಕಡೆಗಳಲ್ಲಿ, ಮುಲಾಯಂ ಸಿಂಗ್ ಯಾದವ್ ನೇತೃತ್ವದ ಸಮಾಜವಾದಿ ಪಾರ್ಟಿ ಹಾಗೂ ಮಾಯಾವತಿ ಅವರ ಬಹುಜನ ಸಮಾಜ ಪಾರ್ಟಿಗಳ ಧ್ವಜ ಹಾರಾಡಬಹುದು. ಆದರೆ ನಿಜವಾದ ಚುನಾವಣೆ ನಡೆಯುತ್ತಿರುವುದು ಬಿಜೆಪಿ- ಕಾಂಗ್ರೆಸ್ ನಡುವೆಯೇ. ಶಿವರಾಜ್ ಸಿಂಗ್ ಮತ್ತೆ ಗೆದ್ದರೆ, ನರೇಂದ್ರ ಮೋದಿ ಶೀಲಾ ದೀಕ್ಷಿತ್ ಅವರಂತೆಯೇ 'ಹ್ಯಾಟ್ರಿಕ್ ವೀರ' ಪ್ರಶಸ್ತಿಗೆ ಅರ್ಹರಾಗುತ್ತಾರೆ.
- ಸತ್ಯ