ಉತ್ತರ ಪ್ರದೇಶ ಜನಸಂಖ್ಯೆಯ ದೃಷ್ಟಿಯಿಂದ ದೇಶದ ಅತಿದೊಡ್ಡ ರಾಜ್ಯ. ಆದರೆ, ವಿಸ್ತೀರ್ಣದ ದೃಷ್ಟಿಯಿಂದ ಮಧ್ಯಪ್ರದೇಶವೇ ಅತಿ ದೊಡ್ಡ ರಾಜ್ಯವಾಗಿತ್ತು. ಒಂದು ಕಾಲದಲ್ಲಿ ಮಧ್ಯಪ್ರದೇಶ ಬೀಡಿ ಉದ್ಯಮಕ್ಕೆ ಹೆಸರು ವಾಸಿ. ಅಲ್ಲಿ ಹೇರಳವಾಗಿ ಸಿಗುವ, ಕಾಡುಮೇಡುಗಳಲ್ಲಿ ದೊರೆಯುವ ಎಣ್ಣೆಯ ಬೀಜದಿಂದ ಇಂಧನದ ಶಕ್ತಿ ಪಡೆಯಬಹುದೆನ್ನುವ ವರದಿಗಳೂ ಪ್ರಕಟವಾಗಿದ್ದವು.
ಈಗಿನ ಛತ್ತೀಸಗಢ ರಾಜ್ಯ ಮಧ್ಯಪ್ರದೇಶದ ಒಂದು ಭಾಗ ಮಾತ್ರ. ಪ್ರಾಯಶಃ ಆ ಕಾರಣದಿಂದಲೇ ಛತ್ತೀಸಗಢ ರಾಜ್ಯವನ್ನು ಅನೇಕರು ಮಧ್ಯಪ್ರದೇಶದ ಕಂಕುಳ ಕೂಸು ಎನ್ನುತ್ತಾರೆ. ಇತ್ತೀಚಿನ ದಿನಗಳ ವರೆಗೂ, ಛತ್ತೀಸಗಢ ರಾಜ್ಯ ಸ್ಥಾಪನೆಯಾಗಿ ದಶಕವೇ ಕಳೆದಿದ್ದರೂ, ದೇಶದ ಆರ್ಥಿಕ, ರಾಜಕೀಯ, ಸಾಮಾಜಿಕ ಭೂಪಟದಲ್ಲಿ ಅದಕ್ಕೆ ಸಿಗಬೇಕಾಗಿದ್ದ ಸ್ಥಾನಮಾನ ಸಿಕ್ಕಿರಲಿಲ್ಲ.
ಆ ರಾಜ್ಯದ ಹೆಸರನ್ನು ಹೇಳಿದರೆ ಸಾಕು ನಕ್ಸಲೀಯರು, ದರೋಡೆಕೋರರು, ಸಶಸ್ತ್ರ ಡಕಾಯಿತ ಪಡೆಗಳು, ಗುಡ್ಡಗಾಡು ಸೀಮೆಯಲ್ಲಿನ ಅಲೆಮಾರಿ ಜನಾಂಗಗಳ ಪ್ರಸ್ತಾಪವೇ ಹೆಚ್ಚಾಗಿ ಕೇಳಿಬರುತ್ತಿದ್ದದ್ದು.
ಛತ್ತೀಸಗಢ ಸಣ್ಣ ರಾಜ್ಯವಲ್ಲ. ವಿಸ್ತೀರ್ಣದಲ್ಲಿ ತಮಿಳುನಾಡಿಗಿಂತ ದೊಡ್ಡದು. ಅಲ್ಲಿನ ಭೂಗರ್ಭದಲ್ಲಿ ಅಪಾರವಾದ ಖನಿಜ ಸಂಪತ್ತು ಅಡಗಿದೆ. ಜನಸಂಖ್ಯೆಯ ಒಂದು ದೊಡ್ಡ ಭಾಗ ಬುಡಕಟ್ಟಿನ ಜನಾಂಗಗಳಿಗೆ ಸೇರಿದ ಆದಿವಾಸಿಗಳು, ಪರಿಶಿಷ್ಟ ಜನಾಂಗದವರು.
ಇಂಥ ಸ್ವರೂಪದ ರಾಜ್ಯವನ್ನು ಜನ ಕಲ್ಯಾಣ, ಅದರಲ್ಲೂ ಆದಿವಾಸಿ, ಪರಿಶಿಷ್ಟ ಜನಾಂಗಗಳ ಕಲ್ಯಾಣ ಕಾರ್ಯಕ್ರಮಗಳ ಮೂಲಕ ವಿಶ್ವಸಂಸ್ಥೆಯ ಗಮನ ಸೆಳೆಯುವಂತೆ ಮಾಡಿದ್ದು ಕಳೆದ ಒಂದು ದಶಕದಿಂದಲೂ ಅಲ್ಲಿನ ಮುಖ್ಯಮಂತ್ರಿಯಾಗಿರುವ ರಜಪೂತ ನಾಯಕ ಡಾ. ರಮಣಸಿಂಗ್. ಅದೊಂದು ದೊಡ್ಡ ಸಾಧನೆ.
ಅಬ್ಬರದ ಪ್ರಚಾರವಿಲ್ಲದೆ, ಸದ್ದು-ಗದ್ದಲದಿಂದ ದೂರವಾಗಿದ್ದುಕೊಂಡೇ ಅವರು ಈ ಪರ್ವತ ಸೀಮೆಯ ರಾಜ್ಯವನ್ನು ಸ್ಪಷ್ಟವಾಗಿ ಪ್ರಗತಿಯತ್ತ ಕೊಂಡೊಯ್ದಿರುವುದು ಅಲ್ಲಿಗೆ ಭೇಟಿ ನೀಡಿದವರಿಗೆಲ್ಲ ಕಂಡುಬರುವ ವಿಚಾರ.
ನವೆಂಬರ್‌ನಲ್ಲಿ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಹ್ಯಾಟ್ರಿಕ್ ವಿಜಯದ ನಿರೀಕ್ಷೆಯಲ್ಲಿರುವ ಮುಖ್ಯಮಂತ್ರಿ ರಮಣಸಿಂಗ್ ಅವರಿಗೆ ಅಲ್ಲಿ ವಿರೋಧಿಗಳೇ ಇಲ್ಲ ಎಂದೇನೂ ಅಲ್ಲ. ಇತ್ತೀಚೆಗೆ ಆ ರಾಜ್ಯದಲ್ಲೂ ಜಾತಿ- ಜಾತಿಗಳ ನಡುವೆ, ಒಂದೇ ಜಾತಿಯ ಒಳಪಂಗಡಗಳ ನಡುವೆ ರಾಜಕೀಯ ಸಂಘರ್ಷ ಅಲ್ಲಲ್ಲಿ ಕಂಡುಬಂದಿದೆ.
ರಮಣಸಿಂಗ್ ಅವರು ಈ ಹೊಸ ಪಿಡುಗಿನ ವಿರುದ್ಧ ಹೋರಾಟಕ್ಕೆ ಸಜ್ಜಾಗಿದ್ದಾರೆ. ಅವರ ವೃತ್ತಿ ಆಯುರ್ವೇದ ವೈದ್ಯ. ಆದರೆ, ಪ್ರವೃತ್ತಿ ಸಮಾಜ ಕಲ್ಯಾಣ. ಏರು ಯವ್ವನದಲ್ಲೇ ಭಾರತೀಯ ಜನಸಂಘವನ್ನು ಸೇರಿ ಸಂಘಟನಾ ಶಕ್ತಿಯನ್ನು ಪ್ರದರ್ಶಿಸಿದ್ದರು. ಈಗ ಅವರಿಗೆ ಅರವತ್ತೊಂದು ವಯಸ್ಸು.
1990ರ ಚುನಾವಣೆಯಲ್ಲಿ ಮೊದಲ ಬಾರಿಗೆ ಮಧ್ಯಪ್ರದೇಶ ವಿಧಾನಸಭೆಗೆ ಆಯ್ಕೆ. ಆ ಸ್ಥಾನಕ್ಕೆ ಎರಡನೇ ಬಾರಿಯೂ ಆಯ್ಕೆಯಾದ ಅನಂತರ, 1999ರಲ್ಲಿ ಲೋಕಸಭೆಗೆ ಆಯ್ಕೆಯಾದವರು. ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ರಚಿಸಿದಾಗ ಡಾ. ರಮಣ ಸಿಂಗ್ ಸಹಾಯಕ ವಾಣಿಜ್ಯ ಮಂತ್ರಿ.
ರಾಜಕೀಯ ಅನಿವಾರ್ಯತೆಗಳಿಗೆ ಶರಣಾಗಿ, ರಮಣ ಸಿಂಗ್ ದೆಹಲಿ ಬಿಟ್ಟು ಛತ್ತೀಸಗಢಕ್ಕೆ ಹಿಂತಿರುಗಿ ಮುಖ್ಯಮಂತ್ರಿಯಾದರು. 2003ರ ವಿಧಾನಸಭೆ ಚುನಾವಣೆಯಲ್ಲಿ ಅವರ ನೇತೃತ್ವದಲ್ಲೇ ಅಲ್ಲಿ ಬಿಜೆಪಿ ವಿಜಯಲಕ್ಷ್ಮಿಯನ್ನು ಒಲಿಸಿಕೊಂಡಿದ್ದು.
ನೂತನ ರಾಜ್ಯದ ರಚನೆಯಾದ ಸಮಯದಲ್ಲೇ, ಹೆಚ್ಚು ವಿಳಂಬ ಮಾಡದೇ, ರಮಣ ಸಿಂಗ್ ತಮ್ಮೆಲ್ಲ ಸಮಯ, ಶಕ್ತಿಯನ್ನು ವನವಾಸಿಗಳು, ಆದಿವಾಸಿ ಸಮುದಾಯಗಳನ್ನು ರಾಷ್ಟ್ರೀಯ ಜೀವನ ವಾಹಿನಿಯಲ್ಲಿ ಸೇರಿಸಲು ನೆರವಾಗುವಂಥ ಕಾರ್ಯಕ್ರಮವನ್ನು ಜಾರಿಗೆ ತಂದರು.
ಈ ಕಾಲದಲ್ಲೇ ಅಲ್ಲಿ ನಕ್ಸಲೀಯರ ಹಿಂಸಾಚಾರದ ನಗ್ನ ನೃತ್ಯವೂ ನಡೆದಿದ್ದು. ಅದನ್ನು ಸದೆಬಡಿಯಲು ಶೋಷಿತ ಸಮುದಾಯಗಳಿಗೆ ನೆರವು ನೀಡುವ ಭರದಲ್ಲಿ ಖಾಸಗಿ ಸೇನೆಗಳಿಗೆ ಉತ್ತೇಜನ ನೀಡುತ್ತಿದ್ದಾರೆನ್ನುವ ದೂರನ್ನು ಎದುರಿಸಬೇಕಾಯಿತು. ಈಚಿನ ದಿನಗಳಲ್ಲಿ ಅಲ್ಲಿ ನಕ್ಸಲೀಯರ ಹಾವಳಿ ಕಡಿಮೆಯಾಗಿರುವಂತಿದೆ. ಚತ್ತೀಸಗಢ ರಾಜ್ಯ ಒಂದು ರೀತಿಯಲ್ಲಿ ಆದಿವಾಸಿಗಳ ಪ್ರಗತಿ ಯಾತ್ರೆಗೆ ಹೆಸರಾದಂತೆಯೇ, ಆರ್ಥಿಕ ಶಿಸ್ತು ಪಾಲನೆಗೂ ಹೆಸರಾಗಿದೆ. ಅದರ ಹಿಂದಿರುವುದು ರಮಣಸಿಂಗ್ ಅವರ ಸಂಘಟನಾ ಶಕ್ತಿ ಹಾಗೂ ಚಿಂತನ ಶೀಲತೆಯ ದುಡಿಮೆ.
ಅಲ್ಲಿ ಬಿಜೆಪಿಗೆ ಸ್ಪರ್ಧೆ ನೀಡಬಲ್ಲ ಏಕೈಕ ಪಕ್ಷ ಎಂದರೆ ಕಾಂಗ್ರೆಸ್. ಮಾಜಿ ಐಎಎಸ್ ಅಧಿಕಾರಿ, ಅಜಿತ್ ಜೋಗಿ ಅವರು ಹಿಂದೆ ಹಲವಾರು ಹಗರಣಗಳಲ್ಲಿ ಪಾಲುಗೊಂಡಿದ್ದ ಆರೋಪಗಳಿದ್ದರೂ, ಕಾಂಗ್ರೆಸ್ ಮತ್ತೆ ಅವರನ್ನೇ ರಾಜ್ಯದಲ್ಲಿ ತನ್ನ ನಾಯಕ ಎಂದು ಘೋಷಿಸಲೇ ಬೇಕಾದ ಅನಿವಾರ್ಯತೆ ಇದೆ. ಕಾಂಗ್ರೆಸ್ಸಿನಲ್ಲಿರುವ ಏಕಮಾತ್ರ ಆದಿವಾಸಿ ನಾಯಕ ಜೋಗಿ.
ಬಿಜೆಪಿಗೆ, ಛತ್ತೀಸಗಢ, ರಾಜಕೀಯವಾಗಿ ಒಂದು ಪ್ರಮುಖ ರಾಜ್ಯ. ಉತ್ತರ ಭಾರತದಲ್ಲಿ ಪಕ್ಷಕ್ಕೆ ಅಂಟಿರುವ ಅನೇಕ ಕಳಂಕಗಳಲ್ಲಿ (ಅದು ನಿಜವೋ, ಅಲ್ಲವೋ ಗೊತ್ತಿಲ್ಲ) ಮೇಲ್ವರ್ಗ- ಮೇಲ್ಜಾತಿಗಳ ಪಕ್ಷ ಅದು ಎನ್ನುವುದೂ ಒಂದು. ಆ ಕಳಂಕವನ್ನು ಅಳಿಸಿಹಾಕುವ ಶಕ್ತಿ ಬಿಜೆಪಿಯ ಛತ್ತೀಸಗಢ ಘಟಕಕ್ಕೆ, ರಮಣ ಸಿಂಗ್ ನೇತೃತ್ವದಲ್ಲಿ ಇದೆ ಎನ್ನುವುದನ್ನು ಪ್ರದರ್ಶಿಸಬೇಕಾದ ಅವಶ್ಯಕತೆ ಕಂಡುಬಂದಿದೆ.
ಡಾ. ರಮಣ ಸಿಂಗ್ ಅವರೂ ಇತರ ಹಲವು ಆದಿವಾಸಿ ನಾಯಕರಂತೆ, ಅಖಿಲ ಭಾರತ ಮಟ್ಟದ ಆದಿವಾಸಿ, ವನವಾಸಿ ನಿವಾಸಿಗಳ ನಾಯಕತ್ವ ಪಟ್ಟಕ್ಕೆ ಪ್ರಯತ್ನಿಸಬಹುದಾಗಿತ್ತು. ಅದಕ್ಕೆ ಬೇಕಾದ ಸಂಪರ್ಕಗಳು ಹಾಗೂ ಅರ್ಹತೆ ಅವರಿಗೆ ಇದೆ. (ಆದರೆ ಅವರು ಆದಿವಾಸಿ ಅಲ್ಲ).
ಆದರೆ ಅವರು ಅಖಿಲ ಭಾರತ ಖ್ಯಾತಿ ಎನ್ನುವ ಕೀರ್ತಿಶನಿಯನ್ನು ಹೆಗಲಿಗೇರಿಸಿಕೊಳ್ಳುವ ಪ್ರಲೋಭನೆಗೆ ಒಳಗಾಗದೇ, ತಮಗೆ ಚಿರಪರಿಚಿತವಾದ ಕಾಡು- ಮೇಡುಗಳಲ್ಲೇ ಕ್ರಾಂತಿಯನ್ನು ತರುವ ಹೊಣೆಗಾರಿಕೆಯನ್ನು ಹೊತ್ತಿದ್ದಾರೆ. ಅಂಥ ನಾಯಕರು ನಮ್ಮ ದೇಶದಲ್ಲಿ ಅಪರೂಪ.
- ಸತ್ಯ