ಅವರ ಹೆಸರೇ ವಿನಾಯಕ. ಹವ್ಯಾಸ- ವಿನಾಯಕ ಮೂರ್ತಿಗಳ ಸಂಗ್ರಹ. ಹೊಸನಗರದ ವಿನಾಯಕ ಮತ್ತು ಗೀತಾ ದಂಪತಿಗಳ ವೃತ್ತಿ ಫ್ಯಾನ್ಸಿ ಸ್ಟೋರ್ ನಡೆಸುವಿಕೆ. ಅವರ ಸಂಗ್ರಹದಲ್ಲಿ ಮೂರುವರೆ ಸಾವಿರಕ್ಕೂ ಅಧಿಕ ಗಣಪತಿ ವಿಗ್ರಹಗಳಿವೆ ಎಂದರೆ ನಂಬಿ. ಪ್ರತಿಯೊಂದೂ ಭಿನ್ನವಾಗಿವೆ. ಅವರ ಸಂಗ್ರಹವೇ ಒಂದು ಅದ್ವಿತೀಯ ಲೋಕ. ಜೈವಿಕ ಗಣಪರು ಅಂದರೆ ಅಡಕೆ, ತೆಂಗು, ಬೇರು, ಎಲೆ, ಧಾನ್ಯ, ನವಧಾನ್ಯ, ತರಕಾರಿ, ಹುಣಸೆ, ಸೋರೆಕಾಯಿ, ಮರದಲ್ಲಿ ತಯಾರಿಸಿದ ಗಣಪರಿದ್ದಾರೆ. ಗಣಪರ ಸಕಲ ಸಂಗೀತ ವಾದ್ಯ ಗೋಷ್ಠಿಯಿದೆ. ಪಂಚಲೋಹ, ಟೆರ್ರಾಕೋಟ, ವೈಟ್‌ಮೆಟಲ್, ಪಂಚಮುಖಿ, ನೃತ್ಯಭಂಗಿ, ಎಡಮುರಿ, ಬಲಮುರಿ, ಸೋಪು ಗಣಪ ಕಣ್ಸೆಳೆಯುತ್ತಾರೆ. ಬಳಪ, ಪ್ಲಾಸ್ಟರ್ ಆಫ್ ಪ್ಯಾರಿಸ್, ಉಯ್ಯಾಲೆ ಗಣಪ, ಗಂಧರ್ವ, ಲಾವಂಚ, ಗಂಧಕ ಗಣಪ, ಸ್ಪಟಿಕ ಗಣಪರು ಅಪರೂಪದ ಮೂರ್ತಿಗಳೆನಿಸಿವೆ. ಕವಿಗಣಪ, ಫ್ಯಾಷನ್ ಗಣಪ, ರಂಗೋಲಿ ಗಣಪ, ಕೀಬಂಚ್, ಎಕ್ಕದ ಗಣಪ, ಕಪ್ಪೆಚಿಪ್ಪು, ರೇಡಿಯಂ, ಜೋಕಾಲಿ ಗಣಪರು ಇಲ್ಲಿದ್ದಾರೆ. ದೇಶದ ಪರಂಪರೆಯಲ್ಲಿ ಇಂತಹ ವೈವಿಧ್ಯತೆ ಗಣಪತಿಯಲ್ಲಿದೆ ಎಂಬುದು ಸಂಶೋಧನೆಗೆ ಗ್ರಾಸವಾಗುವ ಅಂಶ. ಗಣಪತಿ ಮೂರ್ತಿಗಳನ್ನು ಸಂಗ್ರಹಿಸುವುದರಲ್ಲಿಯೇ ಅಪಾರ ಆನಂದ ಶಾಂತಿ ಸಾಕ್ಷಾತ್ಕಾರ ಕಾಣುವ ಸ್ವಭಾವದ ಅವರ ಕುಟುಂಬದವರು ಚೌತಿ ಬಂದ ಕೂಡಲೆ ಒಟ್ಟಾಗಿ ಬಿಡುತ್ತಾರೆ. ದೂರದೂರದ ಬಂಧುಗಳು, ಸ್ನೇಹಿತರು ಬಂದು ಮೂರ್ತಿಗಳನ್ನು ಅಲಂಕರಿಸುವುದರಲ್ಲಿ ತಲ್ಲೀನರಾಗುತ್ತಾರೆ. ಅವರ ಮನೆಯೇ ಅಮೂಲ್ಯ ಗಣಪತಿ ವಿಗ್ರಹಗಳ ಸಂಗ್ರಹಾಲಯ. ವಿನಾಯಕ ದಂಪತಿಗಳನ್ನು ಸಂಗ್ರಹ ಕಲಾವಿದರೆಂದೇ ಪರಿಗಣಿಸಬಹುದು.
-ತಿರುಪತಿ ನಾಯಕ್