ಜಗತ್ತಿನ ಎಲ್ಲ ಭಾಗಗಳೂ ಪರಿಚಯವಾದ ಮೇಲೆ ಇನ್ನು ಮುಂದೆ ಮ್ಯಾಪು ಬರೆಯುವ ಕಾರ್ಟೋಗ್ರಾಫರುಗಳಿಗೆ ಕೆಲಸವಿಲ್ಲ ಎಂದೇ ಭಾವಿಸಲಾಗಿತ್ತು. ಆಗಲೇ ಸ್ಮಾರ್ಟ್ ಫೋನುಗಳ ಯುಗ ಆರಂಭವಾಗಿ, ಜಿಪಿಎಸ್ ತಂತ್ರಜ್ಞಾನ ಬಂದು ಮ್ಯಾಪುಗಳಿಗೆ ಮರುಜೀವ ಬಂತು.
ಅವರು ನಿಮ್ಮ ಏರಿಯಾದಲ್ಲೂ ಸುತ್ತಾಡುತ್ತಿರಬಹುದು. ನಿಮ್ಮ ಗಲ್ಲಿಗಳಲ್ಲಿ, ಸೈಕಲ್ ಕೂಡ ನುಗ್ಗಲಾಗದ ಓಣಿಗಳಲ್ಲಿ ಕೈಗೆ, ಕೋಲಿಗೆ, ಟೋಪಿಗೆ ಕ್ಯಾಮೆರಾ ಸಿಕ್ಕಿಸಿಕೊಂಡು ಓಡಾಡುತ್ತಿರಬಹುದು. ನೀರೊಳಗಿಳಿದು ಮೀನಿನ ಹೆಜ್ಜೆಯ ಜಾಡು ಹಿಡಿಯುತ್ತಿರಬಹುದು. ನಿಮ್ಮ ಮನೆಯ ಕಿಟಕಿ ಬಳಿಯೂ ಕ್ಯಾಮೆರಾ ಕಣ್ಣು ಹಾಯಿಸಿರಬಹುದು. ಹಾಗಂತ ಇವರು ದೇಶದ ಬುಡಕ್ಕೆ ಬತ್ತಿ ಇಟ್ಟು ಬಾಂಬು ಸಿಡಿಸುವ ಭಯೋತ್ಪಾದಕರಲ್ಲ. ಹಗಲು ಹೊತ್ತಲ್ಲಿ ಗುರುತು ಮಾಡಿಕೊಂಡು ಇರುಳಲ್ಲಿ ಕನ್ನ ಕೊರೆಯುವ ಕಳ್ಳಕಾಕರೂ ಅಲ್ಲ. ನಾಕು ಜನರಿಗೆ ಉಪಯೋಗವಾಗುವಂತಹ ಕೆಲಸ ಮಾಡಬೇಕು ಎಂದು ಎಡೆಬಿಡದೆ ಓಡಾಡುತ್ತಿರುವ ಪ್ರಾಮಾಣಿಕ ಸಮಾಜಸೇವಕರು ಇವರು. ಜಗತ್ತಿನಾದ್ಯಂತ ಇವರ ಹಾಗೆಯೇ ಒಳ್ಳೆಯ ಉದ್ದೇಶವಿಟ್ಟುಕೊಂಡು, ಬಗಲಲ್ಲಿ ಕ್ಯಾಮೆರಾ ಸಿಕ್ಕಿಸಿಕೊಂಡು ಗುಡ್ಡಬೆಟ್ಟಗಳನ್ನು ರಸ್ತೆಚರಂಡಿಗಳನ್ನು ಅಳತೆ ಮಾಡುತ್ತಿರುವ ಸೇವಾಪರ ಪಡೆಯ ಸಂಖ್ಯಾಬಲ ಬರೋಬ್ಬರಿ ಹತ್ತುಲಕ್ಷ!
ಭೂಮಿ ಚಪ್ಪಟೆಯಾಗಿದೆ ಎಂದು ಭಾವಿಸಿದ ಕಾಲವೊಂದಿತ್ತು. ಬಾರ್ತಲೋಮಿಯೋ ಡಯಾಜ್ ಆಫ್ರಿಕದ ತುದಿ ಕೇಪ್ ಆಫ್ ಗುಡ್‌ಹೋಪ್ ಅನ್ನು ಮುಟ್ಟಿ ಇತ್ತಾಕಡೆ ನಿರುಕಿಸುವವರೆಗೂ, ಯುರೋಪಿನಿಂದ ಆಫ್ರಿಕವನ್ನು ಬಳಸಿಕೊಂಡು ಜಲಮಾರ್ಗವಾಗಿ ಜಗತ್ತಿನ ಇತ್ತಕಡೆ (ಅಂದರೆ ಭಾರತಕ್ಕೆ) ಬರಬಹುದು ಅನ್ನುವುದೂ ಗೊತ್ತಿರಲಿಲ್ಲ! ಬ್ರಿಟಿಷರು, ಕ್ಯಾಂಬೆಲ್ ಮತ್ತು ಎವರೆಸ್ಟ್ ಅವರನ್ನು ಮುಂದಿಟ್ಟುಕೊಂಡು ಟ್ರಿಗೊನೊಮೆಟ್ರಿಕಲ್ ಸರ್ವೆ ಮಾಡುವವರೆಗೆ ಭಾರತದ ಉದ್ದಗಲ ಎಷ್ಟು ಎನ್ನುವುದು ಸ್ವತಃ ಬ್ರಿಟಿಷರಿಗೇ ತಿಳಿದಿರಲಿಲ್ಲ. ಬೆಂಗಳೂರಲ್ಲಿ ಐಟಿ ಮಂದಿ ಪಡೆದ ಗೌರವವನ್ನೇ ಒಂದಾನೊಂದು ಕಾಲದಲ್ಲಿ ಜಿಯೋಗ್ರಾಫಿಕ್ ಸೊಸೈಟಿಯಿಂದ ಕಾರ್ಟೊಗ್ರಾಫರ್‌ಗಳು ಅರ್ಥಾತ್ ಮ್ಯಾಪ್ ರಚನಕಾರರು ಪಡೆಯುತ್ತಿದ್ದರು. ಬ್ರಿಟನ್ನಿನ ರಾಯಲ್ ಜಿಯೋಗ್ರಾಫಿಕ್ ಸೊಸೈಟಿ, ಜಗತ್ತಿನ ಭೂಪಟ ಬರೆಯುವುದೇ ತನ್ನ ಪರಮಧ್ಯೇಯ ಎನ್ನುವಂತೆ ಕೆಲಸ ಮಾಡುತ್ತಿದ್ದ ಕಾಲವೂ ಒಂದಿತ್ತು. ಒಟ್ಟಿನಲ್ಲಿ ಹೇಳುವುದಾದರೆ, ಪ್ರಪಂಚದ ನಕ್ಷೆ ಬರೆಯುವ ಕೆಲಸಕ್ಕೆ ಕಡಿಮೆಯೆಂದರೂ ಆರುನೂರು ವರ್ಷಗಳ ರುದ್ರರಮ್ಯ ಇತಿಹಾಸವಿದೆ. ನಕ್ಷೆ ಬರೆಯಲೆಂದೇ ಗುಡ್ಡಗಳ ಮೇಲೆ ಹತ್ತಿ ಬೆನ್ನಿಗೆ ರೆಕ್ಕೆ ಕಟ್ಟಿಕೊಂಡು ಪಕ್ಷಿನೋಟ ಕಾಣಲು ಹೋಗಿ ಪ್ರಾಣಪಕ್ಷಿಯೇ ಹಾರಿಹೋದವರದ್ದು ಇನ್ನೊಂದು ದೊಡ್ಡ ರೋಮಾಂಚಕ ಇತಿಹಾಸ.
ವಿಮಾನಗಳ ಆವಿಷ್ಕಾರವಾಗಿ ಮನುಷ್ಯನೂ ಹಕ್ಕಿಯಂತೆ ಗಗನಕ್ಕೆ ಹಾರುವ ಕನಸು ನನಸಾದ ಮೇಲೆ ಮ್ಯಾಪ್ ಬರೆಯುವ ಕೆಲಸ ಸುಲಭವಾಯಿತೆಂದೇ ಹೇಳಬೇಕು. ಅದರಲ್ಲೂ ಕಳೆದ ಐವತ್ತು ವರ್ಷಗಳಲ್ಲಿ ಅಂತರಿಕ್ಷಕ್ಕೆ ಚಿಮ್ಮಿರುವ ಅಸಂಖ್ಯ ಉಪಗ್ರಹಗಳು ಈ ಜಗತ್ತಿನ ಮೂಲೆಮೂಲೆಗೂ ದುರ್ಬೀನು ಹಾಕಿ ಫೋಟೋ ಹಿಡಿದು ಕಳಿಸಿವೆ. ಜಗತ್ತು ಹೇಗಿದೆ, ಎಷ್ಟು ಭೂಪ್ರದೇಶ, ಎಷ್ಟು ಜಲಾವೃತ ಎನ್ನುವುದೆಲ್ಲ ಈಗ ನಮಗೆ ಸ್ಫಟಿಕದಷ್ಟು ಚೆನ್ನಾಗಿ ದೃಷ್ಟಿಗೋಚರವಾಗಿವೆ. ಇದೆಲ್ಲ ಸಂಗತಿಗಳು ನಡೆದ ಮೇಲೆ, ಮ್ಯಾಪಿನ ವಿಷಯದಲ್ಲಿ ಮನುಷ್ಯನಿಗಿದ್ದ ಸಹಸ್ರ ವರ್ಷಗಳ ಹಸಿವು ಕೊನೆಗೂ ಈಗ ಇಂಗಿದೆ. ಇನ್ನು ಮುಂದೆ ಕಾರ್ಟೋಗ್ರಾಫರುಗಳಿಗೆ ಕೆಲಸವಿಲ್ಲ ಎಂದೇ ಭಾವಿಸಲಾಗಿತ್ತು. ನ್ಯಾಷನಲ್ ಜಿಯೋಗ್ರಾಫಿಕ್ ಸೊಸೈಟಿ ಕೂಡ ಭೂಮಿಯ ಮೇಲಿನ ವ್ಯಾಮೋಹವನ್ನು ತ್ಯಜಿಸಿ ಮಂಗಳ, ಗುರುಗ್ರಹಗಳತ್ತ ತನ್ನ ದೂರದರ್ಶಕವನ್ನು ತಿರುಗಿಸಲಿತ್ತು. ಆಗಲೇ ಸ್ಮಾರ್ಟ್ ಫೋನುಗಳ ಯುಗ ಆರಂಭವಾಯಿತು. ಜಿಪಿಎಸ್ ತಂತ್ರಜ್ಞಾನ ಬಂದು ಮ್ಯಾಪುಗಳಿಗೆ ಮರುಜೀವ ತಂದಿತು. ಸಿಟಿಗೆ ಬಂದ ಹೊಸ ಹುಡುಗ ಬಸವನಗುಡಿಯಿಂದ ಹೆಬ್ಬಾಳಕ್ಕೆ ಹೋಗಬೇಕಾದರೆ ಮೊದಲು ಗೂಗಲ್ ಮ್ಯಾಪಿನಲ್ಲಿ ದಾರಿ ನೋಡಬೇಕು ಎನ್ನುವಷ್ಟರ ಮಟ್ಟಿಗೆ ತನ್ನ ಬುದ್ಧಿಯನ್ನು ಚುರುಕು ಮಾಡಿಕೊಂಡ. ಭೂಪಟಗಳಿಗೆ ಕಳೆದು ಹೋಗಲಿದ್ದ ಮಾನ ಮತ್ತು ಘನತೆ ಮೊಬೈಲುಗಳಿಂದ ಅಂತೂ ಮತ್ತೆ ವಾಪಸು ಬಂತು!
ಈಗ ಜಗತ್ತು ಮತ್ತೂ ಮುಂದೆ ಹೋಗಿದೆ. ಕೇವಲ ಮುಖ್ಯರಸ್ತೆಗಳ ವಿವರ ನೋಡಿ ತೃಪ್ತನಾಗುವವನಲ್ಲ ಆಧುನಿಕ ಯುಗದ ಇ-ಮಾನವ. ಅವನಿಗೆ ಮುಖ್ಯರಸ್ತೆಗೆ ಬಂದು ಸೇರುವ ಹಲವಾರು ಪುಟ್ಟ ಓಣಿಗಳಲ್ಲಿ ಅಡಗಿಕೂತ ಗೂಡಂಗಡಿಗಳ ಲೆಕ್ಕ ಕೂಡ ಬೇಕು. ನಗರಗಳ ತುಂಬ ಕ್ಯಾಮೆರಾ ಹಿಡಿದು ಓಡಾಡುತ್ತ ಇಂಚಿಂಚನ್ನೂ ದಾಖಲಿಸಿಕೊಳ್ಳುತ್ತಿರುವ, ನಾವು ಈ ಲೇಖನದ ಪ್ರಾರಂಭದಲ್ಲಿ ಉಲ್ಲೇಖಿಸಿದ 'ಓಪನ್ ಸ್ಟ್ರೀಟ್ ಮ್ಯಾಪ್ಸ್'ನ ಸ್ವಯಂಸೇವಾ ಕಾರ್ಯಕರ್ತರು ಮಾಡುತ್ತಿರುವುದು ಈ ಕೆಲಸವನ್ನೇ.
ಗೂಗಲ್ ಸಂಸ್ಥೆಗೆ ಪೈಪೋಟಿ ಕೊಡುವಂತೆ, (ಅದರೆ ತಾವು ಪರಮ ನಿಸ್ವಾರ್ಥಿಗಳು ಎನ್ನುತ್ತ) ಕೆಲಸ ಮಾಡುತ್ತಿರುವ ಹ್ಯೂಮಾನಿಟೇರಿಯಮ್ ಓಎಸ್‌ಎಂ ಟೀಮ್ (ಅಥವಾ ಸಂಕ್ಷಿಪ್ತವಾಗಿ- ಹಾಟ್, ಏಕಖಿ) ದೇಶದೇಶಗಳನ್ನು ಸುತ್ತಿ ಅಲ್ಲಿನ ಮ್ಯಾಪುಗಳನ್ನು ಬರೆದು ಅಂತರ್ಜಾಲಕ್ಕೆ ಹಾಕುತ್ತಿದೆ. ನೈರೋಬಿಯಲ್ಲಿ ಈ ವರ್ಷದ ಮಾರ್ಚ್ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದಾಗ, ಅಲ್ಲಿನ ಕಿಬೆರಾ ಎಂಬ ಸ್ಲಂ ಏರಿಯಾದಲ್ಲಿ ಜನರಿಗೆ ಓಟು ಹಾಕಲು ಎತ್ತ ಹೋಗಬೇಕು, ವಾರ್ಡು ಎಲ್ಲಿದೆ ಎನ್ನುವುದೇ ತಿಳಿದಿರಲಿಲ್ಲ. ಇಷ್ಟು ವರ್ಷವೂ ರಾಜಕೀಯ ಪಕ್ಷಗಳ ವ್ಯಾನುಗಳು ಬಂದು ಅವರೆಲ್ಲರನ್ನೂ ಕುರಿಗಳಂತೆ ತುಂಬಿಕೊಂಡು ಸಿಕ್ಕಸಿಕ್ಕ ವಾರ್ಡುಗಳಿಗೆ ಹಾಕಿ ಹೋಗಿಬಿಡುತ್ತಿದ್ದವು. ಆದರೆ, ಈ ಸಲ ಹಾಟ್ ಸೇವಕರು, ಕಿಬೆರಾದ ಎಲ್ಲ ಮೂಲೆಗಳನ್ನು ಜಾಲಾಡಿ ಮ್ಯಾಪುಗಳನ್ನು ತಯಾರಿಸಿ ಯಾವ ಮನೆಯವರು ಯಾವ ವಾರ್ಡ್‌ಗೆ ಹೋಗಬೇಕು ಎಂದು ತೋರಿಸುವ ವಿಸ್ತೃತವಾದ ದಾಖಲೆಗಳನ್ನು ಅಲ್ಲಲ್ಲಿ ಗೋಡೆಗಳಲ್ಲಿ ಅಂಟಿಸಿದರು.
ಇದೇ ವರ್ಷದ ಎಪ್ರಿಲ್‌ನಲ್ಲಿ ಗಾರ್ಮೆಂಟ್ ಫ್ಯಾಕ್ಟರಿಯೊಂದು ಕುಸಿದುಬಿದ್ದು ಬಾಂಗ್ಲಾದೇಶದ ಢಾಕಾದಲ್ಲಿ ಸಾವಿರ ಜನರನ್ನು ಬಲಿ ತೆಗೆದುಕೊಂಡಿತು. ಒಂದರ ಮೇಲೊಂದು ಪೇರಿಸಿಡುತ್ತಾ ಹೋದ ಬೆಂಕಿಪೊಟ್ಟಣಗಳಂತೆ, ಉಸಿರಾಡಲೂ ಅವಕಾಶವಿಲ್ಲದಂತೆ ಕಟ್ಟಿರುವ ಢಾಕಾದ ಬಿಲ್ಡಿಂಗುಗಳಲ್ಲಿ ಯಾವ ಮೂಲೆಯಲ್ಲಿ ಅನಾಹುತವಾದರೂ ಸಾವಿರ ಜನ ಸಾಯುವುದು ಗ್ಯಾರಂಟಿ. ಇನ್ನು ಕೈಗಾರಿಕಾ ವಲಯವೇ ಆಗಿರುವ ಚಿತ್ತಗಾಂಗ್ ಜಿಲ್ಲೆಯ ಕತೆ ಕೇಳುವುದೇ ಬೇಡ. ಕಡಿಮೆ ಕೂಲಿಗೆ ದುಡಿಯುವವರು ಸಿಗುತ್ತಾರೆ ಎಂಬ ಕಾರಣಕ್ಕೆ ಜಗತ್ತಿನ ಅಷ್ಟೂ ಕಾರ್ಖಾನೆಗಳ ಒಂದೊಂದು ಉತ್ಪಾದನಾ ಘಟಕಗಳು ಚಿತ್ತಗಾಂಗ್‌ನಲ್ಲಿ ಇವೆ. ಇಲ್ಲಿ ಮುಂದೊಂದು ದಿನ ಅಪ್ಪಿತಪ್ಪಿ ಅನಾಹುತಗಳಾದರೆ ಏನು ಗತಿ ಎಂದು ಮುಂದಾಲೋಚಿಸಿದ ಹಾಟ್ ತಂಡ, ಅಲ್ಲಿನ ಒಂದೊಂದು ಓಣಿಯ ಒಂದೊಂದು ಕಟ್ಟಡದ ನಕ್ಷೆಯನ್ನೂ ತಯಾರಿಸಿಟ್ಟಿದೆ. ಈ ಕಟ್ಟಡಗಳಲ್ಲಿ ಯಾವ್ಯಾವ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಕೂಡ ಗುರುತಿಸುವ ಕೆಲಸ ಆಗಬೇಕು. ಆಗ ದೂರದ ಹೆಡ್ಡಾಫೀಸುಗಳಲ್ಲಿ ಕೂತರೂ ಆ ಕಂಪನಿಗಳ ಮುಖ್ಯಸ್ಥರಿಗೆ ತಮ್ಮ ಕೆಲಸಗಾರರ ಯೋಗಕ್ಷೇವು ನೋಡಿಕೊಳ್ಳಲು ಸಾಧ್ಯ ಎನ್ನುವುದು ಹಾಟ್ ತಂಡದ ಕಳಕಳಿ. ಅಂದಹಾಗೆ, ಕಳೆದ ತಿಂಗಳು ನೂರಾರು ಹಾಟ್ ಕಾರ್ಯಕರ್ತರು ನಮ್ಮ ಉತ್ತರಾಖಂಡದಲ್ಲೂ ಕೇದಾರದಲ್ಲೂ ಸುರಿಯುವ ಜಡಿಮಳೆಯನ್ನೂ, ಮೇಘಸ್ಫೋಟವನ್ನೂ, ಭೂಕುಸಿತವನ್ನೂ ಲೆಕ್ಕಿಸದೆ ಕ್ಯಾಮೆರಾಗಳಲ್ಲಿ ಚಿತ್ರ ಸಂಗ್ರಹಿಸಿ ಮ್ಯಾಪು ಬರೆಯಲು ಹೆಣಗಿದರು. ಮುಂದಿನ ವರ್ಷ ಮತ್ತೆ ಮಳೆಗಾಲದಲ್ಲಿ ಉತ್ತರಾಂಚಲ ಜಲಾವೃತವಾದರೆ, ರಕ್ಷಣೆಗೆ ಧಾವಿಸಿ ಬರುವ ಮಿಲಿಟರಿಗೆ ಬೇಕಾದ ಎಲ್ಲ ಮಾಹಿತಿಯನ್ನೂ ಈಗಲೇ ತಯಾರಿಸಿ ಇಡುವುದು ಇದೆಲ್ಲ ಹೆಣಗಾಟದ ಉದ್ದೇಶ.
ಹಾಟ್ ತಂಡ ಇಂತಹ ಅಗ್ನಿಆಕಸ್ಮಿಕ, ನೆರೆ, ಭೂಕಂಪಗಳಂತಹ ದುರಂತ ಸಂದರ್ಭಗಳಲ್ಲಿ ಮಾತ್ರ ಚುರುಕಾಗುವುದಲ್ಲ. ಶಾಂತಿಯ ಸಂದರ್ಭದಲ್ಲೂ ಅವರಿಗೆ ಕೈತುಂಬಾ ಕೆಲಸ ಇದ್ದೇ ಇದೆ. ಕೊಲಂಬಿಯದ ಒಂದು ದೊಡ್ಡ ಕೆರೆಯೊಳಗೂ ಕ್ಯಾಮೆರಾ ಕಟ್ಟಿಕೊಂಡು ಇಳಿದ ಈ ತಂಡ, ಅಲ್ಲಿ ಮೀನುಗಳ ಓಡಾಟದ ರೂಟ್‌ಮ್ಯಾಪ್ ಕೂಡ ದಾಖಲಿಸಿದೆ. ಇದರಿಂದ ಮೀನುಗಾರರಿಗಾದರೂ ಉಪಯೋಗವಾಗಲಿ ಎಂಬ ಸದಾಶಯ ಹಾಟ್ ಯುವಕರದ್ದಂತೆ.
ಇದೆಲ್ಲ ಸರಿ, ಆದರೆ, ಈ ಒಳ್ಳೆಯ ಕೆಲಸವನ್ನು ಕೂಡ ಪ್ರಶ್ನಿಸದೆ ಒಪ್ಪಿಕೊಳ್ಳಲು ಬರುವುದಿಲ್ಲ. ಇತ್ತೀಚೆಗಂತೂ ಒಳ್ಳೆಯದರ ಮುಖವಾಡ ತೊಟ್ಟುಕೊಂಡು, ಜಗತ್ತಿಗೆ ಉಪಕಾರ ಮಾಡುವ ಸೋಗು ಹಾಕಿಕೊಂಡು ಬಂದು ಅದರಿಂದ ಸಾಕಷ್ಟು ದುಡ್ಡು ಮಾಡಿಕೊಳ್ಳುವ ನಯವಂಚಕತನ ಹೆಚ್ಚಾಗಿದೆ ಎನ್ನುವ ಮಾತು ಕೂಡ ನಿಜ. ಜಗತ್ತನ್ನೇ ಒಂದು ಹಳ್ಳಿಯ ಸ್ವರೂಪಕ್ಕೆ ತರಬೇಕು ಎಂದು ಹೆಣಗುತ್ತಿರುವ ಬಹುರಾಷ್ಟ್ರೀಯ ಕಂಪನಿಗಳಿಗಂತೂ ಇಂತಹ ನಯವಂಚಕತನ ರಕ್ತದಲ್ಲೇ ಬೆರೆತಿದೆ. ಹಾಟ್ ಇಂತಹ ಗೋಸುಂಬೆತನ ತೋರಿಸುತ್ತಿಲ್ಲ ಎನ್ನುವುದಕ್ಕೆ ಪುರಾವೆ ಏನು ಎಂದು ಕೆಲವರು ಈಗಾಗಲೇ ಪ್ರಶ್ನಿಸತೊಡಗಿದ್ದಾರೆ. ಗೂಗಲ್ ಆದರೂ ತನ್ನ ಮ್ಯಾಪುಗಳನ್ನು ಜನರು ಬಳಸುವಾಗ ಅದರ ಮೇಲೆ ಇನ್ನೂ ತನ್ನ ಹಿಡಿತ ಇಟ್ಟಿರುತ್ತದೆ. ಉದಾಹರಣೆಗೆ, ಅಮೆರಿಕದ ರಾಷ್ಟ್ರಾಧ್ಯಕ್ಷರ ಭವನವನ್ನಾಗಲೀ, ದೇಶದ ರಕ್ಷಣಾ ಸಂಸ್ಥೆಯಾದ ಪೆಂಟಗಾನ್ ಅನ್ನಾಗಲೀ ಅದು ಸ್ಪಷ್ಟವಾಗಿ ತನ್ನ ನಕ್ಷೆಗಳಲ್ಲಿ ತೋರಿಸುವುದಿಲ್ಲ. ಅಷ್ಟರಮಟ್ಟಿಗಿನ ಪ್ರಜ್ಞಾವಂತಿಕೆಯನ್ನು ಅದು ಮೆರೆಯುತ್ತದೆ. ಆದರೆ, ಹಾಟ್ ಹೇಳಿಕೇಳಿ ಜನತೆಯ ಪಾದಸೇವೆ ಮಾಡುವುದನ್ನೇ ನಿರಂತರ ಭಜಿಸುವ ಸ್ವಯಂಸೇವಕರ ತಂಡವಾಗಿರುವುದರಿಂದ, ಅಲ್ಲಿ ಇಂತಹ ನಿರ್ಬಂಧಗಳೇನೂ ಇಲ್ಲ. ಅವರು ತಾವು ಕ್ಲಿಕ್ಕಿಸಿ ಅಪ್ಲೋಡ್ ಮಾಡಿದ ಎಲ್ಲಾ ಚಿತ್ರಗಳನ್ನೂ ಜನತೆಗೆ ಮುಕ್ತವಾಗಿ ತೆರೆದಿಟ್ಟಿದ್ದಾರೆ. ಅದರಲ್ಲಿ ಅಮೆರಿಕದ ಶ್ವೇತಭವನವನ್ನೂ ಗಾಂಧೀಬಜಾರಿನ ವಿದ್ಯಾರ್ಥಿಭವನವನ್ನೂ ಒಂದೇ ಬಗೆಯ ಸ್ಪಷ್ಟತೆಯಿಂದ ಗುರುತಿಸಬಹುದು. ಉಪಯೋಗವಾಗಲಿ, ಉಪಕಾರವಾಗಲಿ ಎಂದು ತೆರೆದಿಟ್ಟ ಈ ಸೇವೆ, ನಾಳೆ ವಿಧ್ವಂಸಕರ ಕೈಗೆ ಸಿಕ್ಕರೆ ಏನು ಮಾಡುವುದು ಎಂಬ ಚಿಂತೆ ಭದ್ರತಾ ಇಲಾಖೆಗಳದ್ದು. ಅಲ್ಲದೆ, ಇದೊಂದು ರೀತಿಯಲ್ಲಿ, ಜನರ ಖಾಸಗಿ ಬದುಕಿಗೆ ಹಾಕಿದ ಲಗ್ಗೆಯೂ ಹೌದು. ಎಷ್ಟೇ ಸ್ವಾತಂತ್ರ್ಯಪ್ರಿಯರಾದರೂ ನಮ್ಮ ಕಿಟಕಿ ಹತ್ತಿ ಯಾರೋ ಒಬ್ಬ ಕ್ಯಾಮೆರಾ ಚಾಲೂ ಮಾಡಿ ನಿಲ್ಲುವುದನ್ನು ನಾವು ಸಹಿಸುವುದಿಲ್ಲ, ಅಲ್ಲವೇ?
ಮಣ್ಣು ತಿಂದೆಯೇನೋ ಎಂದು ಗದರಿಸಿ ಬಾಯಿ ತೆರೆಯಲು ಹೇಳಿದ ಯಶೋದೆಗೆ ಕೂಲ್ ಆಗಿ ಕೃಷ್ಣ ಮೂರುಲೋಕಗಳನ್ನೇ ತೋರಿಸಿದನಂತೆ. ಅಂತಹುದೇ ಬ್ರಹ್ಮಾಂಡವನ್ನು ಇಂಚಿಂಚಿನ ಸ್ಪಷ್ಟತೆಯೊಂದಿಗೆ ತೋರಿಸಹೊರಟಿರುವ ಹಾಟ್ ಹುಡುಗರ ಪ್ರಾಮಾಣಿಕತೆ ಮತ್ತು ನಿಸ್ವಾರ್ಥ ಸೇವೆಯಿಂದ ಭದ್ರತಾ ಇಲಾಖೆಗಳು ಮಣ್ಣು ಮುಕ್ಕುವಂತಹ ಕೆಲಸ ಆಗದಿದ್ದರೆ ಸಾಕು!
- ರೋಹಿತ್ ಚಕ್ರತೀರ್ಥ
rohithmath@gmail.com