ಈಗೀಗ ಬರೆಯುವ ಸಂದರ್ಭಗಳು ಕಡಿಮೆ, ಕಂಪ್ಯೂಟರ್‌ನಲ್ಲಿ ಎಲ್ಲವೂ ನಡೆದುಹೋಗುತ್ತದೆ, ಕತೆ-ಕಾದಂಬರಿ ಓದಲು ಪುರುಸೊತ್ತಿಲ್ಲ... ಎಲ್ಲವನ್ನೂ ಹೌದು ಎಂದೇ ಒಪ್ಪಿಕೊಳ್ಳೋಣ. ಆದರೆ...
'ಅನೇಕ ಬಸ್‌ಗಳು ಹೋಗುತ್ತಿತ್ತು... ನಮ್ಮದು ಬಹುಬಾಷಾ ದೇಶ... ದೇಶದಲ್ಲಿ ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಿಲ್ಲ... ಅವರು ಶೃದ್ಧಾಂಜಲಿ ಸಲ್ಲಿಸಿದರು.... ಅವರು ಉಪವಾಸ ವೃತ ಕೈಗೊಂಡರು....'
ಈ ಮೇಲಿನ ವಾಕ್ಯಗಳನ್ನು ವೇಗವಾಗಿ ಓದಿಕೊಂಡು ಹೋಗುವಾಗ ಏನಾದರೂ ತಪ್ಪುಗಳು ಕಾಣಿಸುತ್ತಿವೆಯಾ? ಮೇಲ್ನೋಟಕ್ಕೆ ಇಲ್ಲವೆನಿಸಬಹುದು. ಆದರೆ, ಸೂಕ್ಷ್ಮವಾಗಿ ಗಮನಿಸಿ ಇನ್ನೊಮ್ಮೆ ಓದಿ, ಪ್ರತಿ ವಾಕ್ಯಾಂಶದಲ್ಲೂ ವ್ಯಾಕರಣ/ ಅಕ್ಷರ ತಪ್ಪುಗಳು ಹುದುಗಿವೆ.
ಪ್ರತಿದಿನ ಅಲ್ಲಲ್ಲಿ ಇಂತಹ ತಪ್ಪುಗಳನ್ನು ಓದುತ್ತೇವೆ, ನಮಗರಿವಿಲ್ಲದೆಯೇ ಸ್ವತಃ ಬರೆಯುತ್ತೇವೆ ಕೂಡಾ. ಮುಖ್ಯವಾಗಿ ಈಗಷ್ಟೇ ಕಾಲೇಜು ಮುಗಿಸಿ ಬಂದ ನವ ತರುಣ- ತರುಣಿಯರಿಗೆ ಈ ವಾಕ್ಯಗಳಲ್ಲಿ ತಪ್ಪೇನಿದೆ ಎಂದು ಕೇಳಿದರೆ ಉತ್ತರಿಸಲು ಕಷ್ಟವಾಗಬಹುದೋ ಏನೋ!
ಏಕೇ ಹೀಗಾಯ್ತೋ...?
ಕಾರಣ ಸರಳ. 'ಭಾಷೆ ಸಾಯುತ್ತಿದೆ, ಭಾಷೆ ಉಳಿಸಿ-ಬೆಳೆಸಿ, ಭಾಷೆಗಾಗಿ ಹೋರಾಡುತ್ತೇವೆ, ರಕ್ತ ಕೊಡುತ್ತೇವೆ ಎಂದು ಘೋಷಣೆ ಕೂಗುತ್ತೇವೆ. ಆದರೆ, ಈಗಷ್ಟೇ ಶಿಕ್ಷಿತರಾಗಿ ಶಾಲೆ- ಕಾಲೇಜುಗಳಿಂದ ಹೊರಬರುತ್ತಿರುವ ಭಾವಿ ಪ್ರಜೆಗಳು (ಹಾಲಿಯೂ ಹೌದು) ಯುವ ಪೀಳಿಗೆ ಭಾಷೆಯ ಕುರಿತು ಅದರಲ್ಲೂ ವ್ಯಾಕರಣ, ಬಹುವಚನ, ಏಕವಚನ, ಒತ್ತಕ್ಷರ ಇತ್ಯಾದಿಗಳ ಬಗ್ಗೆ ಎಷ್ಟು ತಿಳಿದುಕೊಂಡಿದ್ದಾರೆ ಎಂದು ಯೋಚಿಸುವ, ಗಂಭೀರವಾಗಿ ಚಿಂತಿಸುವ ಗೋಜಿಗೇ ಹೋಗುತ್ತಿಲ್ಲ.
ಅವರೂ ಅಷ್ಟೇ ಎಸ್‌ಎಂಎಸ್, ವಾಟ್ಸ್‌ಆ್ಯಪ್, ಫೇಸ್‌ಬುಕ್, ಇಮೇಲ್... ಎಲ್ಲಾ ಕಡೆ ಇಂಗ್ಲಿಷ್‌ನಲ್ಲಿ (ತಪ್ಪು ತಪ್ಪಾಗಿಯಾದರೂ ಪರವಾಗಿಲ್ಲ) ಬರೆದು ಕೈತೊಳೆದುಕೊಳ್ಳುವ ಅವಕಾಶ ಇರುವಾಗ ಕನ್ನಡವನ್ನು ಶುದ್ಧವಾಗಿ ಬಳಸಬೇಕೆನ್ನುವ ತುಡಿತ ಹೊಂದಿರುವುದಿಲ್ಲ. ಮಾತ್ರವಲ್ಲ. ರಜೆ ಅರ್ಜಿ, ಕೆಲಸಕ್ಕೆ ಅರ್ಜಿ ಸಲ್ಲಿಸುವುದು, ಪತ್ರ ಬರೆಯುವುದು, ಕೊನೆಗೆ ರಾಜಿನಾಮೆ ಕೊಡುವುದು ಕೂಡಾ ಇಮೇಲ್‌ನಲ್ಲಿ ಕಂಪ್ಯೂಟರೀಕೃತವಾಗಿರುವಾಗ 'ಬರೆಯುವ' ಅಭ್ಯಾಸವೇ ಇರುವುದಿಲ್ಲ. ಎಲ್ಲೋ ಅನಿವಾರ್ಯವಾದಾಗ 'ಸಹಿ ಹಾಕುತ್ತಾರೆ' ಅಷ್ಟೆ. ಪತ್ರ ಬರೆಯುವುದು ಎಂದರೇನು? ಎಂದು ಇಂದು-ನಾಳೆ ಹುಟ್ಟಿದ ಮಕ್ಕಳು ಕೇಳಬಹುದೇನೋ!
ಇಂಗ್ಲಿಷೇ ಸಲೀಸು!
ಏಐ, ಓ, ಈ ್ಖ 2ಂಆಖಕ...ಹೀಗೆ ಇಂಥ ಮೊಬೈಲ್ ಮತ್ತು ಕಂಪ್ಯೂಟರ್‌ಗಳಲ್ಲಿ ಸುಲಭವಾಗಿ ಕೈಗೆಟಕುವ ಭಾಷೆ ಇಂಗ್ಲಿಷ್ ಆದ ಕಾರಣ ಇದರಲ್ಲೇ ಸುಲಭವಾಗಿ ಬರೆದು ಬಿಡುತ್ತೇವೆ. ಕನ್ನಡ ಭಾಷೆಯನ್ನು ಸಂಕ್ಷಿಪ್ತವಾಗಿ ಇಂಗ್ಲಿಷ್ ಅಕ್ಷರಗಳಲ್ಲೇ ಪದಗಳ ರೂಪಕ್ಕಿಳಿಸಿ ಫೇಸ್‌ಬುಕ್‌ನಲ್ಲಿ ಕಮೆಂಟ್ ಹಾಕುತ್ತೇವೆ... ಇನ್ನು ಕನ್ನಡದ ಬಗ್ಗೆ ಗಂಭೀರವಾಗಿ ಯೋಚಿಸುವ ಸಂದರ್ಭ ಹೇಗೆ ಬರಬೇಕು?
ಕನ್ನಡದ ಗತಿ
ಶಾಲೆಯಲ್ಲೂ ಅಷ್ಟೇ... ಆಂಗ್ಲ ಮಾಧ್ಯಮ ಹಾಗೂ ಸೆಂಟ್ರಲ್ ಸಿಲಬಸ್ ಶಾಲೆಗಳಲ್ಲಿ ಕನ್ನಡವನ್ನು ಕೇವಲ ಒಂದು ಭಾಷೆಯಾಗಿ ಕಲಿತು ಬರುವವರು ಹಾಗೂ ಕನ್ನಡ ಪತ್ರಿಕೆ, ಕತೆ, ಕಾದಂಬರಿ, ಪುಸ್ತಕಗಳನ್ನು ಓದುವ ಹವ್ಯಾಸವನ್ನೇ ರೂಢಿಸಿಕೊಳ್ಳದ ಯುವ ಪೀಳಿಗೆಯಿಂದ ವ್ಯಾಕರಣಬದ್ಧ ಭಾಷಾ ಪ್ರಯೋಗ ನಿರೀಕ್ಷಿಸುವುದು ಕಷ್ಟ.
ಕನ್ನಡವನ್ನು ವ್ಯಾಕರಣ ಬದ್ಧವಾಗಿ ಬರೆದವನು ಮಾತ್ರ ಪಂಡಿತ, ಇತರರು ಕೆಲಸಕ್ಕೆ ಬಾರದವರು ಅಥವಾ ನಿಷ್ಪ್ರಯೋಜಕರೆಂಬ ವಾದ ಖಂಡಿತಾ ಅಲ್ಲ. ಆದರೆ, ನಮ್ಮ ಮಾತೃಭಾಷೆ ಉಳಿಸಬೇಕಾದರೆ ಅದನ್ನು 'ಮಾತೃ ' ಎಂದು ಪರಿಗಣಿಸಿದ ನಾವು ಹಾಗೂ ಮುಂದೆ ಬರುವ ಯುವಜನತೆ ರೂಢಿಸಿಕೊಳ್ಳಬೇಕು ಅಥವಾ ಚೆನ್ನಾಗಿ ಬಳಕೆ ಮಾಡಬೇಕು. ನಮ್ಮ ಹಿತ್ತಲಿನ ಗಿಡಕ್ಕೆ ನಾವೇ ನೀರು ಹಾಕದಿದ್ದರೆ ಅದು ಸಾಯದೇ ಇದ್ದೀತೇ? ಅಷ್ಟು ಮಾತ್ರವಲ್ಲ, ಭಾಷೆ ಉಳಿಸುವ, ಶುದ್ಧ ರೂಪದಲ್ಲಿ ಸಮಾಜಕ್ಕೆ ನೀಡುತ್ತಲೇ ಬರುವ ಗುರುತರ ಜವಾಬ್ದಾರಿ ಶಿಕ್ಷಕರು, ಸಾಹಿತಿಗಳು, ಪತ್ರಕರ್ತರ ಮೇಲೆ ಬಹಳಷ್ಟಿದೆ. ಈ ಕ್ಷೇತ್ರಗಳಿಗೆ ಹೊಸದಾಗಿ ಕಲಿತು ಬರುವವರು ಕೂಡಾ ಸ್ವತಃ ತಾವೇ ಭಾಷೆಯನ್ನು ಸರಿಯಾಗಿ ಬಳಸದಿದ್ದರೆ, ಇನ್ನು ಇತರರಿಗೆ ಯಾವ ರೀತಿಯ ವ್ಯಾಕರಣಬದ್ಧ ಬರಹ, ಸೇವೆ ಸಲ್ಲಿಸಲು ಸಾಧ್ಯ?
ಈಗೀಗ ಬರೆಯುವ ಸಂದರ್ಭಗಳು ಕಡಿಮೆ, ಕಂಪ್ಯೂಟರ್‌ನಲ್ಲಿ ಎಲ್ಲವೂ ನಡೆದುಹೋಗುತ್ತದೆ, ಕತೆ-ಕಾದಂಬರಿ ಓದಲು ಪುರುಸೊತ್ತಿಲ್ಲ... ಎಲ್ಲವನ್ನೂ ಹೌದು ಎಂದೇ ಒಪ್ಪಿಕೊಳ್ಳೋಣ. ಆದರೆ...
ಮನಸ್ಸಿದ್ದರೆ ಮಾರ್ಗ
ಫೇಸ್‌ಬುಕ್, ವಾಟ್ಸ್‌ಆ್ಯಪ್‌ನಂಥ ಸಾಮಾಜಿಕ ತಾಣಗಳಲ್ಲೂ 'ಜಸ್ಟ್ ಕನ್ನಡ'ದಂಥ ಅಪ್ಲಿಕೇಶನ್‌ಗಳ ಮೂಲಕ ಸುಂದರವಾಗಿ ಕನ್ನಡದಲ್ಲಿ ಬೆರಳಚ್ಚಿಸುವ ಅವಕಾಶವಿದೆ. ಕನ್ನಡ ಕಸ್ತೂರಿಯಂಥ ಉತ್ತಮ ವೆಬ್‌ತಾಣಗಳಲ್ಲಿ ಕನ್ನಡ ಪದಗಳ ಜ್ಞಾನ ಹೊಂದಲು ಸಾಧ್ಯವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಒಣಜಂಭ ಬಿಟ್ಟು, ಫ್ಯಾಶನ್ ಅನ್ನುವ ಭ್ರಮೆ ಬಿಟ್ಟು, ಸಾಧ್ಯವಾದಷ್ಟು ಮಟ್ಟಿಗೆ ಮಾತಿನಲ್ಲೂ, ಬರಹದಲ್ಲೂ ಕನ್ನಡ ಪದವನ್ನೇ ಬರೆದು, ಇತರರೂ ಅದನ್ನು ಓದಿಸುವಂತೆ ಮಾಡುವ ಸಾಮರ್ಥ್ಯ ಇನ್ನೂ ನಮಗಿದೆ... ಮತ್ತೂ ಯಾಕೆ ಕನ್ನಡದ ಬಗ್ಗೆ ಅಸ್ಪೃಶ್ಯತೆ...
- ಕೃಷ್ಣಮೋಹನ ತಲೆಂಗಳ
kmohant@gmail.com