ಈ ಬಾರಿ ಲಾಂಗ್ ಡ್ರೈವ್ ಹೋಗ್ಬೇಕು, ರಾತ್ರಿ 1 ಗಂಟೆವರೆಗೆ ಗೆಳೆಯರ ಜತೆ ಪಾರ್ಟಿ ಮಾಡ್ಬೇಕು, ಆತ್ಮೀಯರ ಜತೆಗೆ ದಿನವಿಡೀ ಕಳೆಯಬೇಕು, ಒಂದು ಪೆಗ್ ಏರಿಸಬೇಕು...!
ಇವು ನ್ಯೂ ಇಯರ್ಗೂ ಮುನ್ನ ಯುವಜನರ ತಲೆಯಲ್ಲಿ ಓಡಾಡುವ ತರಹೇವಾರಿ ಯೋಚನೆ, ಯೋಜನೆಗಳು. ಕಾಲೇಜು ಹೈಕಳ ತಲೆಯಲ್ಲಂತೂ ಏನಾದ್ರೂ ಸರ್ಪ್ರೈಸ್ ಪ್ಲಾನ್ ಇದ್ದೇ ಇರುತ್ತದೆ. ಕಾಲೇಜ್ ಲೈಫಲ್ಲಿ ಹೊಸ ವರ್ಷಕ್ಕಿರುವ ಮಹತ್ವವೇ ಅಂಥದ್ದು. ಎರಡ್ಮೂರು ದಿನ ಮೊದಲೇ ಬಾಯ್ಸ್ ಹಾಸ್ಟೆಲ್ನಲ್ಲಿ ಫ್ರೆಂಡ್ಸ್ ಗ್ರೂಪ್ಗಳು ರಹಸ್ಯ ಸಭೆ ಸೇರಿ ಹೊಸ ವರ್ಷವನ್ನು ಹೇಗೆ ಸ್ವಾಗತಿಸಬೇಕೆನ್ನುವ ಯೋಜನೆ ಸಿದ್ಧಗೊಳಿಸುತ್ತವೆ. ಡಿ.31ರ ಮಧ್ಯರಾತ್ರಿ ಮಲಗಿರೋರನ್ನೆಲ್ಲ ತಣ್ಣೀರು ಸುರಿದಾದ್ರೂ ಎಬ್ಸಿಸ್ತಾರೆ... ರೂಂನಲ್ಲಿ ಭರ್ಜರಿ ಪಾರ್ಟಿ ಮಾಡ್ತಾರೆ. ರಾತ್ರಿಯಿಡೀ ಸುಸ್ತಾಗುವವರೆಗೂ ಕುಣಿಯುತ್ತಾರೆ, ಮೋಜು ಮಸ್ತಿ ಮಾಡ್ತಾರೆ...
ಇನ್ನು ಕೆಲವರಂತೂ ಕ್ಯಾಂಪಸ್ ಗ್ರೌಂಡ್ನಲ್ಲಿ ಕಾಲೇಜ್ ಲೈಫ್ನ ಕಹಿ ಘಟನೆ, ಕಹಿ ನೆನಪಿನ ವಸ್ತುಗಳನ್ನೆಲ್ಲ ಸುಟ್ಟು ಹಾಕುವ ಮೂಲಕ ಹೊಸ ವರ್ಷವನ್ನು ಹೊಸದಾಗಿ ಆರಂಭಿಸುವ ಪ್ರಯತ್ನ ಮಾಡ್ತಾರೆ. ಇದೆಲ್ಲ ಬಾಯ್ಸ್ ಹಾಸ್ಟೆಲ್ನಲ್ಲಿ ನಡೆಯೋ ಸಂಗತಿಯಾದ್ರೆ ಲೇಡಿಸ್ ಹಾಸ್ಟೆಲ್ನ ಕಥೆಯೇ ಬೇರೆ.
ರಾತ್ರಿ 12 ಗಂಟೆವರೆಗೆ ಅಂತ್ಯಾಕ್ಷರಿ, ಡ್ಯಾನ್ಸ್ನಲ್ಲಿ ಬ್ಯುಸಿಯಾಗೋ ಹುಡುಗಿಯರಲ್ಲಿ ಕೆಲವರು ಗುಟುಕು ವೈನ್, ಬಿಯರ್ ಹೀರುವುದುಂಟು. ಇನ್ನು ಕೆಲವರು ತಮ್ಮ ಪ್ರೇಮಿಗಳೊಂದಿಗೆ ಮಧ್ಯರಾತ್ರಿ ಲಾಂಗ್ ಡ್ರೈವ್ಗೆ ಹೋಗೋದೂ ಇದೆ. ಅದಕ್ಕಾಗಿ ವಾಚ್ಮ್ಯಾನ್, ವಾರ್ಡನ್ಗಳ ಕಣ್ಣು ತಪ್ಪಿಸಲು ಢಅವರು ಪಡುವ ಹರಸಾಹಸ ಇನ್ನೊಂದು ನ್ಯೂ ಇಯರ್ವರೆಗೆ ನೆನಪಲ್ಲಿ ಇರುವಷ್ಟು ತಾಜಾ ಆಗಿರುತ್ತದೆ.
ಇನ್ನು ಸೇವಾ ಮನೋಭಾವವುಳ್ಳ ಗೆಳೆಯರ ಗುಂಪು ಹೊಸ ವರ್ಷದ ದಿನ ಬಡವರಿಗೆ ಸಹಾಯ, ಪರಿಸರ ಸ್ವಚ್ಛತೆ, ಇನ್ನಿತರ ಸಮಾಜ ಸೇವಾ ಕಾರ್ಯಕ್ರಮಗಳನ್ನೂ ಮಾಡುವುದುಂಟು. ಇದೆಲ್ಲ ಅವರವರ ಭಾವಕ್ಕೆ ಬಿಟ್ಟ ವಿಚಾರ...
ಆದ್ರೆ ನ್ಯೂ ಇಯರ್ ಅಂದ ಮೇಲೆ ಏನಾದ್ರೂ ಒಂದು ಎಂಜಾಯ್ಮೆಂಟ್ ಅಂತೂ ಇದ್ದೇ ಇರುತ್ತದೆ. ಹಾಗಂತ ಪಾರ್ಟಿ, ಫನ್ಗಳ ನಡುವೆ ಯುವಜನರು ಅದರಲ್ಲೂ ಮುಖ್ಯವಾಗಿ ಯುವತಿಯರು ಸುರಕ್ಷತೆಯನ್ನು ಕಡೆಗಣಿಸುವುದು ಸರಿಯಲ್ಲ. ತಾವು ಹೋಗುತ್ತಿರುವ ಸ್ಥಳ, ಪಾರ್ಟಿಯ ಕುರಿತು ಮನೆಯವರಿಗೆ ಅಥವಾ ಆತ್ಮೀಯರಿಗೆ ಮೊದಲೇ ಮಾಹಿತಿ ನೀಡಿಟ್ಟಿರಿ. ಮೋಜು ಮಸ್ತಿಯ ಹೆಸರಿನಲ್ಲಿ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವ ಸಾಹಸಕ್ಕೆ ಕೈಹಾಕಬೇಡಿ. ನಶೆಯಲ್ಲಿ ವಾಹನ ಚಲಾಯಿಸಬೇಡಿ... ಟೇಕ್ ಕೇರ್... ಎಲ್ಲರಿಗೂ ಹ್ಯಾಪಿ ನ್ಯೂ ಇಯರ್...
- ವಿದ್ಯಾ ಇರ್ವತ್ತೂರು