ದೊಡ್ಡ ಕಾಡು. ಒಂದು ಮರದ ಕೆಳಗೆ ಹುಲಿರಾಯ ವಿಶ್ರಮಿಸಿಕೊಳ್ಳುತ್ತಿದ್ದ. ಮಟಮಟ ಮಧ್ಯಾಹ್ನ. ಆ ಮರದ ಕೊಂಬೆಯೊಂದರ ಮೇಲೆ ಕುಳಿತಿದ್ದ ಕಾಗೆರಾಯ ಹುಲಿಯನ್ನು ಗಮನಿಸಿ ಗಾಬರಿಗೊಂಡ. ಇವೊತ್ತು ಹುಲಿಯೊಂದಿಗೆ ಆ ನಿಷ್ಠುರ ಸತ್ಯ ಹೇಳಿಯೆ ಬಿಡೋಣ. ಹೇಗೂ ತನಗೆ ರೆಕ್ಕೆಗಳಿವೆ ಅವನಿಂದ ಅಪಾಯ ಎದುರಾದರೆ ಥಟ್ಟನೆ ಹಾರಿ ಹೋದರಾಯಿತು ಎಂದು ನಿರ್ಧರಿಸಿತು ಕಾಗೆ.
"ಎಲವೋ ಹುಲಿರಾಯ, ಹೇಗಿದ್ದೀಯೆ? ಚೆನ್ನಾಗಿ ಭಕ್ಷಿಸಿ ಬಂದಂತಿದೆ. ನಾನು ಹಲವು ದಿನಗಳಿಂದ ನೋಡುತ್ತಿದ್ದೇನೆ. ನಿನ್ನ ಬಿಟ್ಟರೆ ಬಲಿಷ್ಠರಿಲ್ಲ, ನೀನೇ ಈ ಜಗತ್ತಿನಲ್ಲಿ ಅತ್ಯಂತ ಪರಾಕ್ರಮಿ, ಬಹು ಸಮರ್ಥ, ಧೀರ ಎಂದು ಕೊಂಡು ಮೆರೆಯುತ್ತಿದ್ದೀಯ. ಮನುಷ್ಯ ಎಂಬ ಪ್ರಾಣಿ ನಿನಗಿಂತಲೂ ಧೈರ್ಯಶಾಲಿ, ಅವನು ಮಹಾನ್ ಸಾಹಸಿ ಎನ್ನುವುದು ನಿನಗೆ ತಿಳಿದಿರಲಿ" ಎಂದಿತು ಕಾಗೆ.
"ಯಾರಪ್ಪ ಅದು ಮನುಷ್ಯ? ಇದುವರೆಗೂ ನಾನು ಕಂಡು ಕೇಳರಿಯದ ಜೀವಿ! ಪರಿಚಯಿಸು ನೋಡಿಯೇ ಬಿಡೋಣ".
"ಅಮ್ಮ ನನ್ನ ಕೆಲಸವಲ್ಲ ಹುಲಿರಾಯ. ಎಷ್ಟಾದರೂ ನೀನು ದಕ್ಷ ತಾನೆ! ಕಾಡು ಮೇಡೆಲ್ಲ ಸುತ್ತು. ಆ ಪ್ರಾಣಿಯನ್ನು ಕಂಡುಕೊ".
ಸರಿ. ಇದೋ ಹೊರಟೆ ಅಂತ ಹುಲಿರಾಯ ಮೇಲೆದ್ದು ಮನುಷ್ಯನನ್ನು ಹುಡುಕಲು ಕುತೂಹಲ ಮತ್ತು ಅಷ್ಟೇ ಆತಂಕದಿಂದ ಹೊರಟ. ಅರ್ಧ ಕಿಲೋಮೀಟರ್ ದೂರದಲ್ಲಿ ಆನೆ ಸಿಕ್ಕಿತು.
"ಏನಪ್ಪ ಆನೆಯಪ್ಪ... ಎಲ್ಲಿಯಾದರೂ ಮನುಷ್ಯನನ್ನು ಕಂಡಿದ್ದೀಯ. ಆತ ನನಗಿಂತಲೂ ಬಲು ಬಲವಂತನಂತೆ ನಿಜವೆ?" ಕೇಳಿತು ಹುಲಿ.
"ಅಯ್ಯೊ, ಬಹಳವೆ ನಾಜೂಕಿನ ಪ್ರಾಣಿ ಬಿಡು ಅವನು. ನಯಮಾತುಗಳಿಂದಲೇ ನನ್ನಂಥ ದೊಡ್ಡ ಪ್ರಾಣಿಯನ್ನೇ ಹಳ್ಳಕ್ಕೆ ಕೆಡವಬಲ್ಲ ಭೂಪ. ನನ್ನ ಕೈಯಲ್ಲಿ ಭಾರೀ ಕೆಲಸಗಳನ್ನು ಮಾಡಿಸಿಕೊಳ್ಳುತ್ತಾನೆ. ಹೊರಲಾಗದ ಹೊರೆ ಹೊರಿಸುತ್ತಾನೆ..." ಎಂದು ವಿವರಿಸಿತು ಆನೆ. ಹುಲಿಗೆ ಕಸಿವಿಸಿಯಾಯಿತಾದರೂ ಅದನ್ನು ತೋರಿಸಿಕೊಳ್ಳಲಿಲ್ಲ. ಹತಾಶೆಯೇಕೆ ಪ್ರತ್ಯಕ್ಷ ಕಂಡರಾಯಿತು ಎಂದುಕೊಂಡಿತು. ಅಲ್ಲಿಂದ ಸ್ವಲ್ಪವೆ ದೂರದಲ್ಲಿ ಒಂಟೆಯೊಂದು ಮರದ ಎಲೆಗಳನ್ನು ಮೇಯುತ್ತಿತ್ತು. ಹುಲಿಯನ್ನು ಕಾಣುತ್ತಲೆ "ಬಾ ಹುಲಿರಾಯ, ಏನು ಇಷ್ಟು ಅಪರೂಪ ಇತ್ತ ಕಡೆ ನೀನು?" ಅಂತ ಕುಶಲ ವಿಚಾರಿಸಿತು.
"ಅಲ್ಲಯ್ಯ ಒಂಟೆ, ಪ್ರಪಂಚದಲ್ಲಿ ಮನುಷ್ಯ ನನಗಿಂತಲೂ ದಕ್ಷ, ಸಮರ್ಥ ಅಂತಾರಲ್ಲ ಇದು ನಿಜವೆ? ನೀನೂ ನಂಬುತ್ತೀಯಾ ಹೇಳು".
"ಖಂಡಿತ ನಿಜ. ಮನುಷ್ಯ ನಿನಗಿಂತ ಸಾಹಸಿ, ಅನುಮಾನವಿಲ್ಲ ಬಿಡು. ಸುಮ್ಮನೆ ನಾನು ಜಿರಾಫೆ ಎತ್ತರೆತ್ತರಕ್ಕೆ ಬೆಳೆದುಕೊಂಡು ಹೋಗುತ್ತೇವೆ ಅಷ್ಟೆ. ಮನುಷ್ಯ ಚಂದ್ರನನ್ನು ಮೆಟ್ಟಿ ಬಂದಿದ್ದಾನೆ. ಇನ್ನೇನು ಅವನು ಮಂಗಳ ಗ್ರಹದ ಯಾತ್ರೆಗೂ ಹೊರಡುತ್ತಿದ್ದಾನೆ. ನೀನು ಇನ್ನಾದರೂ ಬಡಾಯಿ ಬಿಡು. ಅಹಂಗಿಂತ ಕಡುವೈರಿಯೆ ಇಲ್ಲ ತಿಳಿ ಹುಲಿರಾಯ" ಅಂತ ಒಂಟೆ ಬೋಧನೆಗಳಿಯಿತು. ಅಲ್ಲಿಂದ ಹುಲಿ ಹತ್ತು ಮಾರುಗಳು ಹೆಜ್ಜೆಯಿಡುವುದರೊಳಗೆ ನರಿ ಎದುರಾಯಿತು. ಹುಲಿ ಅದಕ್ಕೆ ತನ್ನ ಸಮೀಕ್ಷೆ, ತನಗಾಗುತ್ತಿರುವ ಅಳುಕು ಹೇಳಿಕೊಂಡಿತು.
"ಓಹೋ ಹೀಗೋ ವಿಷಯ. ಮನುಷ್ಯನನ್ನು ನೀನು ನೋಡಿಯೇ ಇಲ್ಲವಲ್ಲ ಅದೇ ನನಗೆ ಆಶ್ಚರ್ಯ. ನಿಸ್ಸಂದೇಹವಾಗಿ ನಾಜೂಕಿನ ಪ್ರಾಣಿ ಆತ. ನಾನೇ ಉಪಾಯಗಾರ ಎಂದರೆ ನನಗಿಂತಲೂ ಅದೆಷ್ಟೊ ಪಟ್ಟು ತಂತ್ರಗಾರ, ಚಾಣಾಕ್ಷ ಅವನು. ಹೇಳುತ್ತ ಹೋದರೆ ಗ್ರಂಥಗಳನ್ನೇ ಬರೆಯಬಹುದು. ಭೂಮಿಯೊಳಗಿದ್ದ ಖನಿಜ, ತೈಲ ಖಾಲಿ ಮಾಡಿ ಕಾರು, ಜಹಜು ವಿಮಾನಗಳಲ್ಲಿ ಓಡಾಡುವ ಚತುರ ಅವನು" ಅಂತ ನರಿ ಬಣ್ಣಿಸಿದ್ದೆ ಬಣ್ಣಿಸಿದ್ದು. ನರಿಯಿಂದ ಬೀಳ್ಕೊಂಡ ಹುಲಿ ತುಸು ವಿರಮಿಸೋಣ ಅಂತ ನೆರಳು ಹುಡುಕುತ್ತಿದ್ದಂತೆ ಒಂದು ಪಾಳುಮಂಟಪದ ಮುಂದೆ ಅಣ್ಣಯ್ಯ ಎಂಬ ಆಸಾಮಿ ಕುಳಿತಿದ್ದ. ಹುಲಿ ಆತನನ್ನೂ ಒಂದು ಪ್ರಾಣಿಯೆಂದೇ ಭಾವಿಸಿತ್ತು. ಅವನ ಹತ್ತಿರ ಬಂದು ತಾನು ಹುಡುಕುತ್ತಿರುವುದು ಯಾರನ್ನು, ಏತಕ್ಕಾಗಿ ಅಂತ ವಿಶದಪಡಿಸಿತು. ಅಣ್ಣಯ್ಯನ ಹತ್ತಿರ ಬಂದೂಕು ಇದ್ದುದರಿಂದ ಆತ ಸ್ವಲ್ಪವೂ ಗಾಬರಿಗೊಳ್ಳಲಿಲ್ಲ.
"ಅರ್ಥವಾಯಿತು ಹುಲಿರಾಯ. ನೀನು ಆ ಮನುಷ್ಯ ಎಂಬ ಪ್ರಾಣಿಯನ್ನು ನೋಡಬೇಕು. ಆ ಪ್ರಾಣಿಯ ಮುಂದೆ ಅವನಿಗಿಂತ ನೀನೇ ಸಮರ್ಥ, ಸಬಲ ಅಂತ ಬೀಗಬೇಕು ಅಷ್ಟೆ ತಾನೆ? ಖಂಡಿತ ಆ ಪ್ರಾಣಿಯನ್ನು ನೀನು ಕಾಣುವೆಯಂತೆ. ಆದರೆ ನಾನು ಹೇಳಿದಂತೆ ನೀನು ನಡೆದುಕೊಳ್ಳಬೇಕು" ಎಂದ ಅಣ್ಣಯ್ಯ ಹುಲಿರಾಯನಿಗೆ.
"ಅಗತ್ಯವಾಗಿ ನೀನು ಹೇಗೆ ಹೇಳುವಿಯೋ ನಾನು ಹಾಗೆ ಮಾಡುವೆ. ಮುಖ್ಯ ನಾನು ಆ ಪ್ರತಿಸ್ಪರ್ಧಿಯನ್ನು ಕಾಣಬೇಕು ಮಾತ್ರ" ಅಂತ ಸಮ್ಮತಿಸಿದ ಹುಲಿರಾಯ.
"ಸರಿ. ನಿನ್ನನ್ನು ನೀನೆ ಕಟ್ಟಿಹಾಕಿಕೋ. ಇದೋ ಹಗ್ಗ" ಎಂದು ಅಣ್ಣಯ್ಯ.
"ಅರೆ! ಅದು ಹೇಗೆ ಸಾಧ್ಯ. ನೀನೇ ಕಟ್ಟಿಹಾಕು. ಸಹಾಯ ಮಾಡು. ಈ ಜನ್ಮದಲ್ಲಿ ನಿನ್ನನ್ನು ನಾನು ಮರೆಯುವುದಿಲ್ಲ" ಎನ್ನಲು ಹುಲಿ ಅಣ್ಣಯ್ಯನೇ ಅದನ್ನು ಕಟ್ಟಿ ಹಾಕಿದ.
ಐದು ನಿಮಿಷ ಕಳೆಯಿತು. ಎಲ್ಲಿ ನಿನ್ನ ಮಾತಿನಂತೆ ನನಗೆ ಕಟ್ಟು ಬಿದ್ದಿಯೆಯಲ್ಲ. ತೋರಿಸು ಪ್ರಾಣಿಯೆ ಆ ಮನುಷ್ಯನನ್ನು ಅಂತ ಹುಲಿ ಹಾತೊರೆಯಿತು. ಅಣ್ಣಯ್ಯ ಮಾತೇ ಆಡಲಿಲ್ಲ. ಸಣ್ಣ ನಿದ್ದೆಗೆ ಜಾರಿದ್ದ! ಹುಲಿ ವಿಲ ವಿಲನೆ ಒದ್ದಾಡತೊಡಗಿತು. ಥಟ್ಟನೆ ಅದು "ಸರಿ ಸರಿ ಗೊತ್ತಾಯ್ತು ಬಿಡು... ನೀನೇ ಮನುಷ್ಯ! ನಾನು ಬೆಳಗ್ಗೆಯಿಂದಲೂ ಹುಡುಕುತ್ತಿರುವ ಮನುಷ್ಯ!!" ಎಂದು ಚೀರತೊಡಗಿತು.
"ಈಗ ಏನು ಹೇಳುತ್ತಿ? ಬಲಶಾಲಿ ನೀನೋ ಅಥವಾ ನಾನೋ?" ಎಂದು ಅಣ್ಣಯ್ಯ.
"ಅನುಮಾನವೇ ಇಲ್ಲ ನೀನೇ. ಮೊದಲು ಈ ಕಟ್ಟು ತೆಗಿ ಮನುಷ್ಯ".
ಅಣ್ಣಯ್ಯ ಹುಲಿಯನ್ನು ಬಿಡುಗಡೆಗೊಳಿಸಿದ. ಅದು ಕಾಡಿನೊಳಗೆ ಓಡಿತು.
ನೀತಿ: ದೇಹ ಬಲಕ್ಕಿಂತ ಬುದ್ಧಿ ಬಲ ಶ್ರೇಷ್ಠ.
- ಬಿಂಡಿಗನವಿಲೆ ಭಗವಾನ್