- ಅಧಿಕಾರಿಗಳ ಅಸಡ್ಡತನದಿಂದ ಬೊಕ್ಕಸಕ್ಕೆ ರು. 200 ಕೋಟಿ ಹಾನಿ
- ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ವಸೂಲಿಯಾಗದ ನೀರಿನ ಕಂದಾಯ
ಕ.ಪ್ರ.ವಾರ್ತೆ ಕೊಪ್ಪಳ ಜು. 8-
ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ಕರ ವಸೂಲಿಯಲ್ಲಿ ಕಂದಾಯ ಇಲಾಖೆ ಮತ್ತು ನೀರಾವರಿ ಇಲಾಖೆ ತೋರಿದ ತಾತ್ಸಾರದಿಂದ ಸರ್ಕಾರಕ್ಕೆ ಸುಮಾರು 200 ಕೋಟಿ ಖೋತಾ ಆಗಿದೆ!
ಅಧಿಕಾರಿಗಳು ತಮ್ಮ ಜವಾಬ್ದಾರಿ ಮರೆತಿದ್ದರಿಂದ ಸರ್ಕಾರದ ಬೊಕ್ಕಸಕ್ಕೆ ಬರಬೇಕಾದ ಕರ ಬಂದಿಲ್ಲ. ಆದರೆ, ಸರ್ಕಾರದಿಂದ ಮಾತ್ರ ಇಲಾಖೆಯ ನಿರ್ವಹಣೆ, ವೇತನಕ್ಕಾಗಿ ಲಕ್ಷ ಲಕ್ಷ ರುಪಾಯಿ ವೆಚ್ಚ ಮಾಡಲಾಗಿದೆ.
ಸತತ ಹಣಕಾಸಿನ ಸಮಸ್ಯೆಯನ್ನೇ ಎದುರಿಸುತ್ತಿರುವ ತುಂಗಭದ್ರಾ ಜಲಾಶಯದ ನೀರಾವರಿ ಇಲಾಖೆ, ಸಣ್ಣಪುಟ್ಟ ಕಾಲುವೆ ಒಡೆದರೂ ಸರ್ಕಾರವೇ ಹಣ ಬಿಡುಗಡೆ ಮಾಡಿದರೇ ಕಾಲುವೆ ದುರಸ್ತಿ ಮಾಡಿಸುತ್ತದೆ. ಆದರೆ, ತನ್ನ ಅಡಿಯಲ್ಲಿ ನೂರಾರು ಕೋಟಿ ರುಪಾಯಿ ಬರಬೇಕಾಗಿರುವುದನ್ನು ಪ್ರಾಮಾಣಿಕವಾಗಿ ವಸೂಲಿ ಮಾಡಿಲ್ಲ. ಪರಿಣಾಮ ಈಗ ಅದು ಅಂದಾಜು ರು. 200 ಕೋಟಿ ಹಾಗೆ ಉಳಿದುಕೊಂಡಿದೆ.
5 ವರ್ಷದಿಂದ ಬಾಕಿ: ನೀರಾವರಿ ಇಲಾಖೆ ಕಾಲಕಾಲಕ್ಕೆ ನೀರಿನ ಕರ ಪರಿಷ್ಕರಣೆ ಮಾಡಿ ಕಂದಾಯ ಇಲಾಖೆಗೆ ದರ ಪಟ್ಟಿ ಸಲ್ಲಿಸಬೇಕು. ಆದರೆ, ಐದು ವರ್ಷಗಳಿಂದ ನೀರಿನ ಕರ ಪರಿಷ್ಕರಣೆ ಮಾಡಿ ದರ ನಿಗದಿ ವರದಿ ನೀಡದ್ದರಿಂದ ನಮಗೆ ನೀರಿನ ಕರ ಸಂಗ್ರಹ ಮಾಡಲು ಆಗಿಲ್ಲ ಎನ್ನುವುದು ಕಂದಾಯ ಇಲಾಖೆ ಅಧಿಕಾರಿಗಳ ವಾದ. ನಾವು ಕಾಲಕಾಲಕ್ಕೆ ಕೊಡದಿದ್ದರೂ ತಡವಾಗಿಯಾದರೂ ನೀರಿನ ಕರ ಪರಿಷ್ಕರಣೆ ಮಾಡಿಕೊಟ್ಟಿದ್ದೇವೆ. ಆದರೆ, ಕಂದಾಯ ಇಲಾಖೆ ಅಧಿಕಾರಿಗಳು ವಸೂಲಿ ಮಾಡಿಲ್ಲ ಎನ್ನುವುದು ನೀರಾವರಿ ಇಲಾಖೆ ಆರೋಪ ಮಾಡುತ್ತಾರೆ.
ಇಬ್ಬರ ಜಗಳದಲ್ಲಿ ಉಂಡವನೇ ಜಾಣ ಎನ್ನುವಂತೆ ನೀರು ಹರಿಸಿಕೊಂಡಿದ್ದರೂ ರೈತರು ಕರ ಪಾವತಿ ಮಾಡದೆ ಆರಾಮವಾಗಿದ್ದಾರೆ. ಇದರಲ್ಲಿ ನಮ್ಮ ತಪ್ಪು ಏನು ಇಲ್ಲ. ವಸೂಲಿಗೆ ಬರದೇ ಹೇಗೆ ತಾನೆ ಪಾವತಿ ಮಾಡಲು ಸಾಧ್ಯ ಎಂದು ರೈತರು ಪ್ರಶ್ನಿಸುತ್ತಾರೆ. ಅಧಿಕಾರಗಳು ಕಾಲಕಾಲಕ್ಕೆ ಬಂದು ವಸೂಲಿ ಮಾಡದಿದ್ದರೇ ಈ ಸಮಸ್ಯೆಯೇ ಆಗುತ್ತಿರಲಿಲ್ಲ. ಆದರೆ, ವಸೂಲಿಗೆ ಸರಿಯಾಗಿ ಬರದೇ ಯಾವಾಗಲೋ ನೆನಪಾದಾಗ ಒಮ್ಮೆ ಬಂದರೇ ಎಲ್ಲಿಂದ ರೈತರು ಪಾವತಿ ಮಾಡಲು ಸಾಧ್ಯ ಎಂದು ರೈತರು ಮರು ಪ್ರಶ್ನೆ ಮಾಡುತ್ತಾರೆ.
ಎಲ್ಲೆಲ್ಲಿ? ಎಷ್ಟು?: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಎಡದಂಡೆ ವ್ಯಾಪ್ತಿಯಲ್ಲಿ 2,45,255 ಹೆಕ್ಟೇರ್ ನೀರಾವರಿಯಾಗಬೇಕು. ಆದರೆ, ಇಲ್ಲಿ 2,09,922 ಹೆಕ್ಟೇರ್ ಅನಧಿಕೃತವಾಗಿಯೂ ನೀರಾವರಿ ಸೇರಿ 4,54,757 ಹೆಕ್ಟೇರ್ ನೀರಾವರಿ ಪ್ರದೇಶವಾಗಿದೆ. ಇಲ್ಲಿ ಅನಧಿಕೃತವಾಗಿ ನೀರಾವರಿ ಪ್ರದೇಶದಲ್ಲಿ ನೀರಾವರಿ ಮಾಡುವುದಕ್ಕೆ ದಂಡ ಸಮೇತ ನೀರಿನ ಕರ ವಸೂಲಿ ಮಾಡುವ ನಿಯಮ ಇದೆ. ಅನಧಿಕೃತ ಪ್ರದೇಶದಲ್ಲಿ ನೀರಾವರಿಯಾಗುತ್ತಿರುವುದಕ್ಕೆ 241.96 ಕೋಟಿ ವಸೂಲಿಯಾಗಬೇಕಾಗಿದ್ದರೂ ಈಗ 166.83 ಕೋಟಿ ಮಾತ್ರ ವಸೂಲಿ ಮಾಡಲಾಗಿದೆ. ಹೀಗಾಗಿ, ಇಲ್ಲಿ ಇನ್ನು 79.12 ಕೋಟಿ ನೀರಿನ ಕರ ಬಾಕಿ ಇದೆ.
ಇನ್ನು ಅಧಿಕೃತವಾಗಿ ನೀರಾವರಿಯಾಗುವ ಪ್ರದೇಶದಲ್ಲಿ 108 ಕೋಟಿ ನೀರಿನ ಕರ ವಸೂಲಿಯಾಗಬೇಕು. ಆದರೆ, ಇಲ್ಲಿ ಒಂದು ಪೈಸೆಯನ್ನು ವಸೂಲಿ ಮಾಡಿಲ್ಲ ಎಂದೇ ಹೇಳಲಾಗುತ್ತದೆ. ಕಾರಣ ನೀರಿನ ಕರ ಪರಿಷ್ಕರಣೆಯಾಗದೇ ಇರುವುದರಿಂದ ವಸೂಲಿ ಮಾಡಿಲ್ಲ. ಏನೇ ಆಗಲಿ ಅಧಿಕೃತ ಮತ್ತು ಅನಧಿಕೃತ ಸೇರಿ ಸುಮಾರು ರು. 200 ಕೋಟಿ ಆದಾಯ ಬರುವುದು ಖೋತಾ ಆಗಿರುವುದಂತು ದಿಟ.
ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ನೀರಿನ ಕರ ಬಾಕಿ ಇದೆ. ಆದರೂ ವಸೂಲಿ ಪ್ರಕ್ರಿಯೆ ನಡೆಯುತ್ತಿದ್ದು, ಪರಿಷ್ಕರಣೆ ಮಾಡಿಕೊಟ್ಟಿದ್ದೇವೆ. ಕಂದಾಯ ಇಲಾಖೆಯ ಸಿಬ್ಬಂದಿ ವಸೂಲಿ ಮಾಡಬೇಕು. ಇದು ನಮ್ಮ ಜಲಾಶಯದ್ದೊಂದೆ ಸಮಸ್ಯೆಯಲ್ಲ. ರಾಜ್ಯದ ಎಲ್ಲ ಜಲಾಶಯದ್ದು ಸಮಸ್ಯೆ ಅದೆ. ಬೆಳೆ ಬೆಳೆಯುವ ಪದ್ಧತಿಯಲ್ಲಿ ಬದಲಾವಣೆ ಮಾಡಿದವರು ಸೇರಿದಂತೆ ನಾನಾ ರೀತಿ ಕಾರಣಗಳಿಂದ ಸಮಸ್ಯೆಯಾಗಿದೆ.
- ಮಂಜಪ್ಪ, ಅಧೀಕ್ಷಕ ಅಭಿಯಂತರ ತುಂಗಭದ್ರಾ ಜಲಾಶಯ ಮುನಿರಾಬಾದ್
- ಸೋಮರಡ್ಡಿ ಅಳವಂಡಿ