ನವದೆಹಲಿ: ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಸರ್ಕಾರ ಖಾಸಗಿ ಕ್ಯಾಬ್ ಸಂಸ್ಥೆ ಯೂಬರ್‌ನ ಪರವಾನಗಿ ರದ್ದು ಮಾಡಿರುವ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಂಗಳವಾರ ಪ್ರತಿಕ್ರಿಯಿಸಿದ್ದಾರೆ.
ಮಾಧ್ಯಮದವರೊಂಗಿಗೆ ಮಾತನಾಡಿದ ಗಡ್ಕರಿ, ಕ್ಯಾಬ್ ಸೇವೆಗಳ ನಿಯಮ ನಿಬಂಧನೆಗಳನ್ನು ಉತ್ತಮ ಪಡಿಸಬೇಕೇ ವಿನಾ ಕ್ಯಾಬ್ ಸೇವೆಗೆ ನಿಷೇಧ ಹೇರುವುದು ಸರಿಯಲ್ಲ ಎಂದಿದ್ದಾರೆ.
ಕ್ಯಾಬ್ ಸಂಸ್ಥೆಯ ಪರವಾನಗಿ ರದ್ದು ಮಾಡಿ, ನಿಷೇಧ ಹೇರುವುದು ಸರಿಯಲ್ಲ. ನಾಳೆ ಬಸ್ಸಿನಲ್ಲಿ ಇಂಥದ್ದೇ ಘಟನೆ ನಡೆದರೆ ಬಸ್ಸಿಗೆ ನಿಷೇಧ ಹೇರಲಾಗುತ್ತದೆಯೇ? ನಮ್ಮ ವ್ಯವಸ್ಥೆ ಬದಲಾಗಬೇಕು, ಚಾಲಕನಿಗೆ ಪರವಾನಗಿ ನೀಡುವಾಗ ಗಮನ ಹರಿಸಬೇಕು. ಅದೇ ವೇಳೆ ತಪ್ಪಿತಸ್ಥರನ್ನು ಬೇಗನೆ ಪತ್ತೆ ಹಚ್ಚುವಂತಹ ಡಿಜಿಟಲ್ ಸಿಸ್ಟಂನ್ನು ಅಳವಡಿಸಬೇಕು. ಇದಕ್ಕಾಗಿ
ಯಾವುದೇ ವ್ಯಕ್ತಿಯ ವಿವರ, ದಾಖಲೆಗಳನ್ನು ಬೇಗನೆ ಪಡೆಯುವಂತಹ ಡಿಜಿಟಲ್ ವ್ಯವಸ್ಥೆ ನಮ್ಮಲ್ಲಿರಬೇಕು ಎಂದು ಹೇಳಿದ್ದಾರೆ.
ಪರವಾನಗಿ ಇಲ್ಲದ ವೆಬ್ ಕಾರ್ಯಾಧಾರಿತ ಎಲ್ಲ ಕ್ಯಾಬ್‌ಗಳನ್ನು ನಿಷೇಧಿಸುವಂತೆ ಕೇಂದ್ರ ಗೃಹ ಸಚಿವಾಲಯ ಎಲ್ಲ ರಾಜ್ಯಗಳಿಗೂ ಪತ್ರ ಮೂಲಕ ಆದೇಶ ಹೊರಡಿಸಿತ್ತು.