ಪ್ರಧಾನ ಸುದ್ದಿ

ಪ್ರಜಾಪ್ರಭುತ್ವ ಹೋರಾಟಗಾರ್ತಿ ಆಂಗ್ ಸ್ಯಾನ್ ಸೂ ಕಿ ಭೇಟಿ ಮಾಡಿದ ಪ್ರಧಾನಿ ಮೋದಿ

Guruprasad Narayana

ನಾಯ್ ಪ್ಯಿ ತಾವ್: ಏಸಿಯಾನ್-ಭಾರತ ಶೃಂಗ ಸಭೆಗೆ ಮಯನ್ಮಾರಿಗೆ ತೆರಳಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿ, ಮಯನ್ಮಾರಿನ ವಿರೋಧ ಪಕ್ಷದ ನಾಯಕಿ, ಪ್ರಜಾಪ್ರಭುತ್ವಕ್ಕಾಗಿ ಹೋರಾಡಿದ ಧೀಮಂತ ಮಹಿಳೆ, ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಆಂಗ್ ಸ್ಯಾನ್ ಸೂ ಕಿ ಅವರನ್ನು ಮೊದಲ ಬಾರಿಗೆ ಭೇಟಿ ಮಾಡಿದರು.

೧೨ ನೇ ಭಾರತ-ಏಸಿಯಾನ್ ಶೃಂಗ ಸಭೆಯಲ್ಲಿ ವಿವಿಧ ವಿಶ್ವ ನಾಯಕರ ಜೊತೆ ಯಶಸ್ವಿ ದ್ವಿಪಕ್ಷೀಯ ಮಾತುಕತೆ ನಡೆಸಿದ ಪ್ರಧಾನಿ ಉಳಿದಿಕೊಂಡಿರುವ ಪಾರ್ಕ್ ರಾಯಲ್ ಹೋಟೆಲ್ ನಲ್ಲಿ ಈ ಭೇಟಿ ನಡೆದಿದೆ.

ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿಯ ಯ ಅಧ್ಯಕ್ಷೆ ಮತ್ತು ಕಾರ್ಯದರ್ಶಿ ಆಗಿರುವ ಸೂ ಕಿ ಅವರನ್ನು ೨೦೧೫ ರ ಲೋಕಸಭಾ ಚುನಾವಣೆ ಎದುರಿಸಲು ಅವಕಾಶ ನೀಡಬೇಕೋ ಬೇಡವೋ ಎಂಬ ಚರ್ಚೆಯ ಮಧ್ಯದಲ್ಲಿ ಮಯನ್ಮಾರ್ ಇದೆ. ಮಯನ್ಮಾರಿನ ಸಂವಿಧಾನ ನೀಡುವ ಏರ್ಪಾಟಿನಲ್ಲಿ ಸದ್ಯಕ್ಕೆ ಅವರನ್ನು ಚುನಾವಣೆಯಲ್ಲಿ ಭಾಗವಹಿಸದಂತೆ ತಡೆಯೊಡ್ಡಲಾಗಿದೆ. ಸೂ ಕಿ ಯವರು ನವೆಂಬರ್ ೨೦೧೨ ರಲ್ಲಿ ಭಾರತಕ್ಕೆ ಭೇಟಿ ಕೊಟ್ಟಿದ್ದರು.

ತಮ್ಮ ತಾಯಿ ಡಾವ್ ಖಿನ್ ಯಿ ಭಾರತದ ರಾಯಭಾರಿಯಾಗಿದ್ದಾಗ, ತಮ್ಮ ಬಾಲ್ಯದ ದಿನಗಳನ್ನು ಸೂ ಕಿ ಭಾರತದಲ್ಲಿ ಕಳೆದಿದ್ದರು. ದೆಹಲಿಯ ಮಹಿಳಾ ಶ್ರೀರಾಮ್ ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮಾಡಿದ್ದ ಅವರು, ೧೯೮೭ ಶಿಮ್ಲಾದ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸೆಡ್ ಸ್ಟಡಿ ಕಾಲೇಜಿನಲ್ಲಿ ಫೆಲೊ ಆಗಿ ಸ್ವಲ್ಪ ಸಮಯ ಕಳೆದಿದ್ದರು.

ಸೂ ಕಿ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ನಂತರ, ಭಾರತ ಅವರಿಗೆ ಎರಡನೇ ಮನೆಯಿದ್ದಂತೆ ಎಂದು ತಿಳಿಸದರು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಸಯ್ಯದ್ ಅಕ್ಬರುದ್ದೀನ್ ಟ್ವೀಟ್ ಮಾಡಿದ್ದಾರೆ.

SCROLL FOR NEXT