ಪ್ರಧಾನ ಸುದ್ದಿ

ಗುಜರಾತ್ ಗಲಭೆ: ಮೋದಿ ವಿರುದ್ಧ ಕ್ರಮಕ್ಕೆ ಕೆನಾಡದಲ್ಲಿ ಸಿಖ್ ಸಂಘಟನೆ ಆಗ್ರಹ

Guruprasad Narayana

ಟೊರಂಟೊ: ಮುಂದಿನ ವಾರ ಭಾರತದ ಪ್ರಧಾನಿ ನರೇಂದ್ರ ಮೋದಿ ಕೆನಡಾ ಪ್ರವಾಸ ಕೈಗೊಳ್ಳುತ್ತಿರುವ ಹಿನ್ನಲೆಯಲ್ಲಿ ಸಿಖ್ ಹಕ್ಕುದಾರ ಸಂಘಟನೆಯೊಂದು ಕೆನಡಾದ ಅಟಾರ್ನಿ ಜನರಲ್ ಬಳಿ ೨೦೦೨ರ ಗುಜರಾತಿನ ಮುಸ್ಲಿಂ ವಿರೋಧಿ ಗಲಭೆಗಳಿಗಾಗಿ ಮೋದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಮನವಿ ಮಾಡಿದೆ.

ಸಿಖ್ಸ್ ಫಾರ್ ಜಸ್ಟಿಸ್ (ಎಸ್ ಎಫ್ ಜೆ - ನ್ಯಾಕ್ಕಾಗಿ ಸಿಖ್ಖರು) ಸಂಘಟನೆ ಕೆನಡಾದ ಅಟಾರ್ನಿ ಜನರಲ್ ಮತ್ತು ನ್ಯಾಯ ಮಂತ್ರಿ ಪೀಟರ್ ಮ್ಯಾಕೆ ಅವರಿಗೆ ೧೬ ಪುಟಗಳ ದೂರು ಸಲ್ಲಿಸಿದ್ದು ನರೇಂದ್ರ ಮೋದಿ ಗುಜರಾತಿನ ಮುಖ್ಯಮಂತ್ರಿ ಆಗಿದ್ದಾಗ ೨೦೦೨ ರಲ್ಲಿ ಮುಸ್ಲಿಮರ ವಿರುದ್ಧ ನಡೆದ ದಂಗೆಗೆ ನೆರವು ನೀಡಿದ ಆರೋಪದ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದೆ.

ಇದೇ ಸಂಘಟನೆ ಕಳೆದ ವರ್ಷ ಸೆಪ್ಟಂಬರ್ ನಲ್ಲಿ ಅಮೆರಿಕಾದಲ್ಲೂ ಮೋದಿ ವಿರುದ್ಧ ಅರ್ಜಿ ಸಲ್ಲಿಸಿತ್ತು. ವಿದೇಶಿ ಸರ್ಕಾರದ ಮುಖ್ಯಸ್ಥನಾಗಿರುವುದರಿಂದ ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪಗಳಿಂದ ರಕ್ಷಣೆ ಪಡೆದಿರುತ್ತಾರೆ ಎಂದು ಅಮೆರಿಕ ಸರ್ಕಾರ ಕ್ರಮ ಕೈಗೊಳ್ಳಲು ನಿರಾಕರಿಸಿತ್ತು.

ಕೆನಡಾದ ಕಾನೂನಿನ ಪ್ರಕಾರ ದೇಶದ ಹೊರಗೆ ಮಾನವ ಹಕ್ಕುಗಳನ್ನು ಉಲ್ಲಂಘಿಸಿದರೂ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಎಸ್ ಎಫ್ ಜೆ ತಿಳಿಸಿದೆ.

ಮುಂದಿನ ವಾರ ನರೇಂದ್ರ ಮೋದಿ ಕೆನಡಾ ಪ್ರವಾಸ ಕೈಗೊಳ್ಳುತ್ತಿದ್ದಾರೆ. ೪೨ ವರ್ಷಗಳ ನಂತರ ಪ್ರಧಾನಿಯೊಬ್ಬರೇ ಕೆನಡಾ ಪ್ರವಾಸ ಕೈಗೊಳ್ಳುತ್ತಿರುವುದು ಈಗಷ್ಟೇ. ಈ ಹಿಂದಿನ ಕೊನೆಯ ಭೇಟಿ ೧೯೭೩ರಲ್ಲಾಗಿತ್ತು.

SCROLL FOR NEXT