ಬೆಂಗಳೂರು: ಮತಗಟ್ಟೆ ಕುರಿತು ಮಾಹಿತಿ ಇಲ್ಲದ ಮತದಾರರು ತಮ್ಮ ಮೊಬೈಲ್ ನಿಂದ ಒಂದು ಎಸ್ ಎಂಎಸ್ ಸಂದೇಶ ರವಾನಿಸುವ ಮೂಲಕ ತಮ್ಮ ಮತಗಟ್ಟೆಯ ವಿವರವನ್ನು ಪಡೆಯಬಹುದಾಗಿದೆ.
ರಾಜ್ಯ ಚುನಾವಣಾ ಆಯೋಗ ಇದಕ್ಕೆ ವ್ಯವಸ್ಥೆ ಮಾಡಿದ್ದು, ಎಸ್‍ಎಂಎಸ್ ಮತದಾರರು ಮೊಬೈಲ್‍ನಲ್ಲಿ epic ಎಂದು ಟೈಪ್ ಮಾಡಿ, ನಂತರ ಸ್ಪೇಸ್ ನೀಡಿ ಗುರುತಿನ ಚೀಟಿಯ ಸಂಖ್ಯೆ ಬರೆದು 88618 66993 ಅಥವಾ 9444123456 ಶುಲ್ಕರಹಿತ ಸಂಖ್ಯೆಗೆ ಎಸ್‍ಎಂಎಸ್ ಕಳುಹಿಸಿದರೆ ಮತಗಟ್ಟೆಯ ವಿವರ ದೊರೆಯುತ್ತದೆ. ಉದಾಹರಣೆಗೆ Epic ಗುರುತಿನ ಚೀಟಿ ಸಂಖ್ಯೆಯನ್ನು 88618 66993 ಸಂಖ್ಯೆಗೆ ರವಾನಿಸಬೇಕಿದೆ.
ತಂತ್ರಜ್ಞಾನದ ಬಳಕೆ ಮೊಬೈಲ್ ಆ್ಯಪ್
ಮತದಾನದ ದಿನ ಮತಗಟ್ಟೆ ಸಿಬ್ಬಂದಿ ಮೊಬೈಲ್‍ನಲ್ಲಿನ ಆ್ಯಪ್ ಮೂಲಕ ಪ್ರತಿ ಗಂಟೆಗೆ ಮಾಹಿತಿ ರವಾನಿಸುತ್ತಾರೆ. ಪ್ರತಿ ಮತಗಟ್ಟೆಯ ಮಾಹಿತಿ ಗಂಟೆಗೊಮ್ಮೆ ವೆಬ್ ಸೈಟ್‍ನಲ್ಲಿ ದಾಖಲಾಗುತ್ತದೆ.
ತಂತ್ರಜ್ಞಾನದಲ್ಲೂ ಮುಂದು
ಈ ಬಾರಿ ಚುನಾವಣಾ ಆಯೋಗ ಮೊಬೈಲ್ ಅಪ್ಲಿಕೇಶನ್ ಮೂಲಕ ಗಂಟೆಗೊಮ್ಮೆ ಮಾಹಿತಿ ನೀಡಲಿದೆ. ಮತಗಟ್ಟೆಯ ಸಮಸ್ಯೆ, ಮಹಿಳಯರಿಗೆಗಾಗಿ ಶೌಚಾಲಯವಿಲ್ಲದಿರುವುದು, ಕುಡಿಯುವ ನೀರಿನ ಸಮಸ್ಯೆ, ಅಗತ್ಯ ಸಲಕರಣೆಗಳ ಕೊರತೆ ಸೇರಿದಂತೆ ಹಲವು ಸಮಸ್ಯೆಗಳನ್ನೂ ಸಿಬ್ಬಂದಿ ಇಲ್ಲಿ ನಿವೇದಿಸಿಕೊಳ್ಳಬಹುದು. ಜೊತೆಗೆ ಮತದಾನದ ದಿನ ಗಂಟೆಗೊಮ್ಮೆ ಮಾಹಿತಿ ರವಾನಿಸುವುದರಿಂದ ಸಾರ್ವಜನಿಕರಿಗೆ ಮತದಾನದ ತಾಜಾ ಮಾಹಿತಿ ವೆಬ್‍ಸೈಟ್‍ನಲ್ಲಿ ಲಭ್ಯವಾಗಲಿದೆ. ಶುಕ್ರವಾರ ಸಿಬ್ಬಂದಿ ಮತಗಟ್ಟೆಗೆ ತಲುಪಿದ ನಂತರ ಆ್ಯಪ್ ಮೂಲಕ ತಮ್ಮ ಹಿರಿಯ ಅಧಿಕಾರಿಗಳಿಗೆ ಸಂದೇಶ ಕಳುಹಿಸಿದ್ದಾರೆ.
1700 ಅತಿಸೂಕ್ಷ್ಮ: ಮುಕ್ತ ಹಾಗೂ ನ್ಯಾಯಸಮ್ಮತ ಮತದಾನಕ್ಕಾಗಿ ಒಟ್ಟು 6,759 ಮತಗಟ್ಟೆಗಳ ಪೈಕಿ 1,700 ಅತಿ ಸೂಕ್ಷ್ಮ, 1,990 ಸೂಕ್ಷ್ಮ ಹಾಗೂ 2,863 ಮತಗಟ್ಟೆಗಳು ಸಾಮಾನ್ಯ ಎಂದು ಆಯೋಗ ಗುರುತಿಸಿದೆ. ಭದ್ರತೆಗಾಗಿ ನಗರ ಪೊಲೀಸ್ ಆಯುಕ್ತರು ಒಟ್ಟು 32,176 ಸಿಬ್ಬಂದಿ ನೇಮಕ ಮಾಡಿದ್ದಾರೆ. ಇವರಲ್ಲಿ 19,859 ಪೊಲೀಸ್ ಸಿಬ್ಬಂದಿ ನಿಯೋಜನೆಯಾಗಿದ್ದು, ಹೆಚ್ಚುವರಿಯಾಗಿ ಶೇ.20ರಷ್ಟು ಸಿಬ್ಬಂದಿಯನ್ನೂ ಸಜ್ಜುಗೊಳಿಸಲಾಗಿದೆ.
ಮತದಾನದಲ್ಲಿ ಅಕ್ರಮಗಳು ನಡೆಯದಂತೆ ನೋಡಿಕೊಳ್ಳಲು ಕೆಲವು ಪೊಲೀಸ್ ವಾಹನಗಳಿಗೆ ಸಿಸಿ ಕ್ಯಾಮೆರಾಗಳನ್ನೂ ಅಳವಡಿಸಲಾಗಿದೆ. ಮತದಾನ ಸಂದರ್ಭದಲ್ಲಿ ಯಾವುದೇ ಅಹಿತರಕರ ಘಟನೆಗೆ ಅವಕಾಶವಾಗದಂತೆ ಶನಿವಾರ ಮಧ್ಯರಾತ್ರಿವರೆಗೂ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಮತಗಟ್ಟೆ ಕೇಂದ್ರದಿಂದ ತಕ್ಷಣ ಮಾಹಿತಿ ಮತ್ತು ಕಾಲಕಾಲದ ಸ್ಥಿತಿಗತಿ ಬಗ್ಗೆ ವರದಿ ಪಡೆಯಲು ಬಿಬಿಎಂಪಿ ಅಧಿಕಾರಿಗಳು ಸುಧಾರಿತ ತಂತ್ರಜ್ಞಾನ ವ್ಯವಸ್ಥೆ ಮಾಡಿದ್ದಾರೆ.
ಮಹದೇವಪುರ ವಿಧಾನಸಭಾ ಕ್ಷೇತ್ರದ ಆಯ್ದ 20 ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ಸ್ಮಾರ್ಟ್ ಟ್ಯಾಬ್ ಆಧಾರಿತ ಚುನಾವಣಾ ನಿರ್ವಹಣೆ ವ್ಯವಸ್ಥೆ ಮಾಡಲಾಗಿದ್ದು, ಇಲ್ಲಿ ಮತದಾನದ ಚಿತ್ರೀಕರಣ ನಡೆಯಲಿದೆ. ಈ ಬಾರಿ ಚುನಾವಣೆಗೆ ಒಟ್ಟು 7,442 ಮತಯಂತ್ರಗಳನ್ನು ನೀಡಲಾಗಿದೆ.
32,000 ಸಿಬ್ಬಂದಿ ಚುನಾವಣಾ ಕಾರ್ಯಕ್ಕೆ ನಿಯೋಜನೆ
ಬಿಬಿಎಂಪಿ ಚುನಾವಣೆಗೆ ಮತಗಟ್ಟೆಗಳಲ್ಲಿ ಶುಕ್ರವಾರದಿಂದಲೇ ಸಿದ್ಧತೆ ಆರಂಭಿಸಿದ್ದ ಸಿಬ್ಬಂದಿ, ಮಸ್ಟರಿಂಗ್ ಕೇಂದ್ರಗಳಲ್ಲಿ ಮತಯಂತ್ರಗಳನ್ನು ಪಡೆದು ಮತಗಟ್ಟೆಗೆ ತೆರಳಿದರು. ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ತಮ್ಮನ್ನು ಯಾವ ವಾರ್ಡ್‍ಗೆ ಹಾಗೂ ಯಾವ ಮತಗಟ್ಟೆಗೆ ನಿಯೋಜಿಸಲಾಗಿದೆ ಎಂದು ಸಿಬ್ಬಂದಿ ಮಸ್ಟರಿಂಗ್ ಕೇಂದ್ರಗಳಿಂದ ಮಾಹಿತಿ ಪಡೆದುಕೊಂಡರು.
ಬೆಳಗ್ಗೆ ಬೇಗನೆ ಮತಗಟ್ಟೆಗೆ ತೆರಳಬೇಕಿದ್ದರಿಂದ ಎಲ್ಲರೂ ಅವಸರದಲ್ಲೇ ಯಂತ್ರ ಪಡೆದು ಹಿಂದಿರುಗಿದರು. 32,000 ಸಿಬ್ಬಂದಿಯನ್ನು ಚುನಾವಣಾ ಕಾರ್ಯಕ್ಕೆ ನೇಮಿಸಿದ್ದು, ಮತಗಟ್ಟೆ ಸಿಬ್ಬಂದಿ ತಮ್ಮನ್ನು ನಿಯೋಜಿಸಿದ ಮತಗಟ್ಟೆಗೆ ತೆರಳುವ ಸಿದ್ಧತೆ ಶುಕ್ರವಾರವಿಡೀ ಕಂಡುಬಂದಿತು. ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಮಸ್ಟರಿಂಗ್ ಕೇಂದ್ರಗಳನ್ನು ಗುರುತಿಸಲಾಗಿದ್ದು, ಆಯಾ ವಿಧಾನಸಭಾ ಕೇತ್ರದ ಮತಗಟ್ಟೆ ಸಿಬ್ಬಂದಿ ಮತಯಂತ್ರಗಳನ್ನು ಅಲ್ಲಿಂದಲೇ ಪಡೆದುಕೊಂಡರು. ಶೀಘ್ರವಾಗಿ ಮತಯಂತ್ರ ಪಡೆದುಕೊಂಡು ಮತಗಟ್ಟೆಗೆ ತೆರಳಿ ಸಿದ್ಧತೆ ಮಾಡಬೇಕಿದ್ದರಿಂದ ಮಸ್ಟರಿಂಗ್ ಕೇಂದ್ರಗಳಲ್ಲಿ ನೂಕುನುಗ್ಗಲು ಕಂಡುಬಂದಿತು.