ಪ್ರಧಾನ ಸುದ್ದಿ

ತೆಲಂಗಾಣ ಸಿಎಂ ಚಂಡಿಕಾ ಯಾಗಕ್ಕೆ ಸಿಎಂ ಸಿದ್ದರಾಮಯ್ಯ ವಿರೋಧ

Lingaraj Badiger
ಬೆಂಗಳೂರು: ರಾಜ್ಯದ ಅಭಿವೃದ್ಧಿಗಾಗಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಆಯೋಜಿಸಿದ್ದ ಚಂಡಿಕಾ ಯಾಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ರಾಜ್ಯದ ಅಭಿವೃದ್ಧಿಗಾಗಿ ತೆಲಂಗಾಣ ಸಿಎಂ ಹೋಮಹವನ ಮಾಡಿಸಿದ್ದಾರೆ. ವೈಚಾರಿಕತೆ ಎಂದರೆ ಇದೇನಾ? ಹೋಮ ಮಾಡುವುದರಿಂದ ರಾಜ್ಯದ ಅಭಿವೃದ್ಧಿಯಾಗುತ್ತಾ? ಎಂದು ತೆಲಂಗಾಣ ಸಿಎಂ ಅವರನ್ನು ಪ್ರಶ್ನಿಸಿದ್ದಾರೆ. 
ಮಕ್ಕಳಲ್ಲಿ ಕಂದಾಚಾರ ದೂರ ಮಾಡುವ ಶಿಕ್ಷಣ ನೀಡಬೇಕು. ಜಪ ತಪಗಳಿಂದ ಎಲ್ಲವೂ ಆಗುತ್ತಿದ್ದರೆ ನಮ್ಮ ಮರಭೂಮಿಗಳನ್ನು ಫಲವತ್ತಾಗಿಸಬಹುದಿತ್ತಲ್ಲವೇ? ಎಂದರು.
ಮನುಷ್ಯನ ವಿಕಾಸಕ್ಕೆ ಪೂರಕ ನಂಬಿಕೆ ಇರಬೇಕು. ಆದರೆ ದಾಸ್ಯ ಇರುವ ಕಡೆ ಮೌಢ್ಯ ಇರುತ್ತದೆ. ಮೌಢ್ಯತೆಯನ್ನು ನೂರಾರು ವಿದ್ಯಾವಂತರು ಕೂಡ ಆಚರಿಸುತ್ತಿದ್ದಾರೆ. ಈಗಲೂ ಕೆಲವು ರಾಜಕಾರಣಿಗಳು ರಾಹುಕಾಲ ನೋಡಿಕೊಂಡು ವಿಧಾನಸೌಧಕ್ಕೆ ಬರುತ್ತಾರೆ. ಇಲ್ಲದಿದ್ದರೆ ವಿಧಾನಸಭೆಯಲ್ಲಿ ಗಲಾಟೆಯಾಗುತ್ತೆ ಎನ್ನುತ್ತಾರೆ. ಅದನ್ನೆಲ್ಲಾ ನಂಬಲು ಸಾಧ್ಯವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
SCROLL FOR NEXT