ನವದೆಹಲಿ: ಬೇರೆ ಯಾವುದೇ ಪಕ್ಷಗಳನ್ನು ಗಣನೆಗೆ ತೆಗೆದುಕೊಳ್ಳಲೇ ಭೂ ಸ್ವಾಧೀನ ಸುಗ್ರೀವಾಜ್ಞೆ ಜಾರಿಗೆ ತರಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿರುವುದು ದುರದೃಷ್ಟಕರ. ಕೇಂದ್ರ ಸರ್ಕಾರ ಕಾರ್ಪೋರೆಟ್ ವಲಯವನ್ನು ಓಲೈಸಲು ಈ ನಿರ್ಧಾರ ಕೈಗೊಂಡಿದೆ ಎಂದು ಇದು ತೋರಿಸುತ್ತದೆ ಎಂದಿದ್ದಾರೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ.
ಈ ಭೂ ಸ್ವಾಧೀನ ಸುಗ್ರೀವಾಜ್ಞೆ ರೈತರ ಹಿತಾಸಕ್ತಿಗಳನ್ನು ಕಡೆಗಣಿಸಿದೆ ಎಂದಿರುವ ಖರ್ಗೆ "ಅವರು ಹೊರಡಿಸಿರುವ ಸುಗ್ರೀವಾಜ್ಞೆ ಸರಿಯಲ್ಲ. ಆದುದರಿಂದ ನಾವು ಒಮ್ಮತವಾಗಿ ಇದರ ವಿರುದ್ಧ ಹೊರಾಡುತ್ತಿದ್ದೇವೆ. ಆದುದರಿಂದ ಲೋಕಸಭೆಯಲ್ಲಿ ಈ ವಿಷಯವನ್ನು ಚರ್ಚೆಗೆ ಎತ್ತಿಕೊಳ್ಳುತ್ತೇವೆ" ಎಂದಿದ್ದಾರೆ. ಈ ಸುಗ್ರೀವಾಜ್ಞೆ ವಿರುದ್ಧ ಜಂತರ್ ಮಂತರ್ ನಲ್ಲಿ ಧರಣಿ ಕೂರಲಿರುವ ಅಣ್ಣಾ ಹಜಾರೆ ಅವರಿಗೆ ಕಾಂಗ್ರೆಸ್ ತನ್ನ ಬೆಂಬಲವನ್ನು ವಿಸ್ತರಿಸುವ ಬಗ್ಗೆ ಶೀಘ್ರದಲ್ಲೆ ನಿರ್ಧರಿಸಲಿದ್ದೇವೆ ಎಂದಿದ್ದಾರೆ ಖರ್ಗೆ.
ಇಂದು ಬಜೆಟ್ ಅಧಿವೇಶನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಭಾಷಣದೊಂದಿಗೆ ಪ್ರಾರಂಭವಾಗಿದ್ದು, ಈ ಅಧಿವೇಶನದಲ್ಲಿ ಭೂ ಸ್ವಾಧೀನ ಸುಗ್ರೀವಾಜ್ಞೆಯೂ ಸೇರಿದಂತೆ ಹಲವಾರು ಕಾಯ್ದೆಗಳನ್ನು ಮಂಡಿಸುವ ಇರಾದೆ ಹೊಂದಿದೆ ಕೇಂದ್ರ ಸರ್ಕಾರ.