ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ರಾಜಕೀಯ ಪಕ್ಷಗಳು ಸರ್ಕಾರ ರಚಿಸಲು ವಿಫಲವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಾಜ್ಯಪಾಲ ಆಡಳಿತ ಜಾರಿ ಮಾಡಿದೆ.
ವಿಧಾನಸಭಾ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಪರಾಭವಗೊಂಡ ನಂತರ ಪಕ್ಷದ ನಾಯಕ ಒಮರ್ ಅಬ್ದುಲ್ಲಾ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿ ಹೊರ ನಡೆದಿದ್ದರು. ಆದರೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಯಾವುದೇ ರಾಜಕೀಯ ಪಕ್ಷಗಳಿಗೆ ಬಹುಮತ ಸಿಕ್ಕಿರಲಿಲ್ಲ. ಇದರಿಂದಾಗಿ ಯಾವುದೇ ಪಕ್ಷಗಳಿಗೆ ಅಲ್ಲಿ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ. ಈ ನಿಟ್ಟಿನಲ್ಲಿ ಜಮ್ಮು ಕಾಶ್ಮೀರದಲ್ಲಿ ಗವರ್ನರ್ ಆಳ್ವಿಕೆ ಹೇರಬೇಕೆಂದು ಜಮ್ಮು ಕಾಶ್ಮೀರದ ರಾಜ್ಯಪಾಲ ಎನ್‌ಎನ್ ವೋರಾ ಅವರು ಕಳೆದ ರಾತ್ರಿ ರಾಷ್ಟ್ರಪತಿಯವರಿಗೆ ವರದಿ ಸಲ್ಲಿಸಿದ್ದರು.
ಈ ವರದಿಯನ್ನು ಸ್ವೀಕರಿಸಿದ ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ರಾಜ್ಯದಲ್ಲಿ ಕೇಂದ್ರ ಸರ್ಕಾರ ಆಳ್ವಿಕೆಗೆ ಶಿಫಾರಸು ಮಾಡುವಂತೆ ವರದಿಯನ್ನು ಪ್ರಧಾನ ಮಂತ್ರಿ ಕಚೇರಿಗೆ ಕಳುಹಿಸಿದ್ದರು.
ಜಮ್ಮು ಕಾಶ್ಮೀರದ ಸಂವಿಧಾನದ ಸೆಕ್ಷನ್ 92ರ ಪ್ರಕಾರ ರಾಜ್ಯದಲ್ಲಿ ಯಾವುದೇ ಪಕ್ಷಗಳು ಸರ್ಕಾರ ರೂಪಿಸಲು ವಿಫಲವಾದರೆ ಅಲ್ಲಿ ರಾಜ್ಯಪಾಲರ ಆಳ್ವಿಕೆ ಹೇರಲಾಗುವುದು. ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದಂತೆ 6 ತಿಂಗಳುಗಳ ಕಾಲ ಗವರ್ನರ್ ಆಡಳಿತ ನಡೆಸಿ ನಂತರ ಸಂವಿಧಾನದ ಪರಿಚ್ಛೇದ 356ರ ಪ್ರಕಾರ ಇಲ್ಲಿ ರಾಷ್ಟ್ರಪತಿ ಆಳ್ವಿಕೆ ನಡೆಸಲಾಗುವುದು.
ಕಾಶ್ಮೀರದಲ್ಲಿ 1977ರಿಂದ ಇದೀಗ 6 ನೇ ಬಾರಿ ಇಲ್ಲಿ ರಾಜ್ಯಪಾಲರ ಆಳ್ವಿಕೆ ನಡೆಸಲಾಗುತ್ತಿದೆ.
ಡಿಸೆಂಬರ್ 23ರಂದು ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಅಲ್ಲಿನ ಮುಖ್ಯಮಂತ್ರಿಯಾಗಿದ್ದ ಓಮರ್ ಅಬ್ದುಲ್ಲಾ ಅವರಿಗೆ ರಾಜ್ಯದ ಉಸ್ತುವಾರಿ ಮುಖ್ಯಮಂತ್ರಿ ಆಗುವಂತೆ ಮನವಿ ಮಾಡಲಾಗಿದ್ದು, ಇಲ್ಲಿಯವರೆಗೆ ಓಮರ್ ಅವರೇ ಉಸ್ತುವಾರಿ ಆಗಿ ರಾಜ್ಯ ನಿಭಾಯಿಸುತ್ತಿದ್ದರು.
ಆದರೆ ನಿನ್ನೆ ಓಮರ್, ರಾಜ್ಯಕ್ಕೆ ಸಂಪೂರ್ಣ ಸಮಯ ಮೀಸಲಿಡುವ ಆಡಳಿತಾಧಿಕಾರಿ ಬೇಕು ಆದ್ದರಿಂದ ನನ್ನನ್ನು ಉಸ್ತುವಾರಿ ಮುಖ್ಯಮಂತ್ರಿ ಜವಾಬ್ದಾರಿಯಿಂದ ಮುಕ್ತಗೊಳಿಸಬೇಕೆಂದು ಮನವಿ ಮಾಡಿಕೊಂಡಿದ್ದರು.