ಬೆಂಗಳೂರು: ಲೋಕಾಯುಕ್ತ ನ್ಯಾ. ವೈ.ಭಾಸ್ಕರ ರಾವ್ ಅವರೇ ಇನ್ನಾದರೂ ಹುದ್ದೆ ತ್ಯಜಿಸಿ ಮನೆಗೆ ಹೋಗಿ...!
ಕಳೆದೊಂದು ತಿಂಗಳಿಂದ ರಾಜ್ಯಾದ್ಯಂತ ಕೇಳಿ ಬರುತ್ತಿರುವ ಈ ಆಗ್ರಹಕ್ಕೆ ಲೋಕಾಯುಕ್ತರು ಈಗಲಾದರೂ ಮರ್ಯಾದೆಯಿಂದ ಮಣಿಯ ಬೇಕಿದೆ. ಲೋಕಾಯುಕ್ತ ಭ್ರಷ್ಟಾಚಾರ ಪ್ರಕರಣದ ರೂವಾರಿ ಮತ್ತು ಮೊದಲನೇ ಆರೋಪಿ (ಭಾಸ್ಕರ ರಾವ್ ಅವರ ಪುತ್ರ ರತ್ನ ) ಅಶ್ವಿನ್ ರಾವ್ ಅವರನ್ನು ಎಸ್‍ಐಟಿ ತಂಡ ಬಂಧಿಸಿದೆ. ಹೀಗಾಗಿ ತಮ್ಮಲ್ಲಿ ನೈತಿಕತೆಯ ಅಂಶ ಕಿಂಚಿತ್ತಾದರೂ ಇದೆ ಎಂಬುದನ್ನು ಸಾಬೀತುಪಡಿಸುವುದಕ್ಕೆ ಭಾಸ್ಕರ ರಾವ್ ಅವರಿಗೆ ಸಕಾಲವಾಗಿದ್ದು, ಹುದ್ದೆ ಬಿಟ್ಟು ಮನೆಗೆ ಹೋಗಿ ಎಂಬ ಹೋರಾಟವೂ ಬಲಗೊಳ್ಳುತ್ತಿದೆ.
ಲೋಕಾ ಭ್ರಷ್ಟಾಚಾರ ಪ್ರಕರಣದಲ್ಲಿ ಲೋಕಾಯುಕ್ತರ ಪುತ್ರನ ಪಾತ್ರ ಇದೆ ಎಂಬ ಆರೋಪ ಮಾಧ್ಯಮದಲ್ಲಿ ಪ್ರಕಟವಾಗುತ್ತಿದ್ದಂತೆ ಪದತ್ಯಾಗ ಮಾಡುವಂತೆ ಭಾಸ್ಕರ್ ರಾವ್ ಅವರ ಮೇಲೆ ಒತ್ತಡ ಹೆಚ್ಚಿತ್ತು. ನಿವೃತ್ತ ಲೋಕಾಯುಕ್ತರಾದ ಎನ್. ವೆಂಕಟಾಚಲ, ಎನ್. ಸಂತೋಷ್ ಹೆಗ್ಡೆ, ಶಿವರಾಜ್ ಪಾಟೀಲ್, ಭ್ರಷ್ಟಾಚಾರಿ ವಿರೋಧಿ ಅಭಿಯಾನದ ಮುಖ್ಯಸ್ಥ ಅಣ್ಣಾ ಹಜಾರೆ ಸೇರಿದಂತೆ ಹಲವರು ಭಾಸ್ಕರ್ ರಾವ್ ಅವರ ಪದತ್ಯಾಗಕ್ಕೆ ಆಗ್ರಹಿಸಿದ್ದರು. ಎಲ್ಲದಕ್ಕಿಂತ ಮುಖ್ಯವಾಗಿ ಲೋಕಾಯುಕ್ತದೊಳಗಿನ ಭ್ರಷ್ಟಾಚಾರಕ್ಕೆ ಲೋಕಾಯುಕ್ತರ ಮನೆಯಿಂದಲೇ ನೀರು-ಗೊಬ್ಬರ ಎರೆಯಲಾಗುತ್ತಿದೆ ಎಂಬ ವಿಚಾರ ತಿಳಿದಾಗ ರಾಜ್ಯದ ಜನತೆ ಕ್ರುದ್ಧಗೊಂಡಿತ್ತು. ಹೀಗಾಗಿ ಈ ಎಲ್ಲ ವಿವಾದದ ಕೇಂದ್ರ ಬಿಂದುವಾದ ಭಾಸ್ಕರ್ ರಾವ್ ರಾಜಿನಾಮೆ ನೀಡಲೇಬೇಕೆಂದು ಪಟ್ಟು ಹಿಡಿಯಲಾಗಿತ್ತು.
ಆದರೆ, ಭಾಸ್ಕರ್ ರಾವ್ ಇದ್ಯಾವುದಕ್ಕೆ ಜಗ್ಗಿರಲಿಲ್ಲ. ಒಂದೆರಡು ದಿನ ರಜಾ ಹಾಕಿದ್ದನ್ನು ಬಿಟ್ಟರೆ, ಅವರು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಮೇಲಾಗಿ ಸರ್ಕಾರಕ್ಕೆ ಪತ್ರ ಬರೆದು ತಮ್ಮಿಷ್ಟಕ್ಕೆ ಅಗತ್ಯವಾದ ತನಿಖೆಗೆ ಕೋರಿದ್ದರು. ಆದರೆ, ಅವರ ಕೋರಿಕೆ ಮೇರೆಗೆ ಸರ್ಕಾರ ರಚಿಸಿದ ವಿಶೇಷ ತನಿಖಾ ದಳ(ಎಸ್‍ಐಟಿ)ವೇ ಅಶ್ವಿನ್ ರಾವ್ ಅವರನ್ನು ಬಂಧಿಸಿದೆ. ಹೀಗಾಗಿ ರಾಜಿನಾಮೆ ಬಿಟ್ಟರೆ ಭಾಸ್ಕರ್ ರಾವ್ ಅವರಿಗೆ ಅನ್ಯ ಮಾರ್ಗವೇ ಇಲ್ಲ.
ರಾಜಿನಾಮೆ ಅನಿವಾರ್ಯ
ಕಾನೂನು ಮತ್ತು ನೈತಿಕ ಕಾರಣಗಳಿಗಾಗಿ ಅವರು ರಾಜಿನಾಮೆ ನೀಡುವುದು ಅನಿವಾರ್ಯ. ಮೊದಲನೆಯದಾಗಿ ಲೋಕಾಯುಕ್ತ ಮತ್ತು ಜನರ ಮಧ್ಯೆ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡುತ್ತಿದ್ದ ಅವರ ಸಾರ್ವಜನಿಕ ಸಂಪರ್ಕಾಧಿಕಾರಿ ಸೈಯದ್ ರಿಯಾಜ್ ಈ ಪ್ರಕರಣದ ಆರೋಪಿ. ಇನ್ನು ಅವರ ಪುತ್ರ ಅಶ್ವಿನ್ ರಾವ್ ಪ್ರಕರಣದ ಮೊದಲ ಆರೋಪಿಯಾಗಿದ್ದರಿಂದ ಭಾಸ್ಕರ್ ರಾವ್ ಅವರ ಮನೆ ಮತ್ತು ಕಚೇರಿ ಈ ಹಗರಣದಲ್ಲಿ ಭಾಗಿಯಾಗಿರುವುದು ಸ್ಪಷ್ಟ. ಇವರಿಬ್ಬರೂ ನಾನೂ ಪ್ರತ್ಯೇಕ ಎಂದು ಭಾಸ್ಕರ್ ರಾವ್ ವಾದ ಮಾಡುವುದಕ್ಕೆ ಈಗ ಅವಕಾಶವೇ ಇಲ್ಲ. ಭ್ರಷ್ಟರಿಗೆ ಸಿಂಹಸ್ವಪ್ನವಾಗಬೇಕಿದ್ದ ಮನೆ ಹಾಗೂ ಕಚೇರಿಯೇ ಭ್ರಷ್ಟಾಚಾರದಲ್ಲಿ ಪಾಲು ಕೇಳಿರುವುದರಿಂದ ಭಾಸ್ಕರ್ ರಾವ್ ಅವರಿಗೆ ತಮ್ಮನ್ನು ತಾವು ಸಮರ್ಥನೆ ಮಾಡಿಕೊಳ್ಳುವ ನೈತಿಕತೆಯೇ ಈಗ ಉಳಿದಿಲ್ಲ.
ಇಷ್ಟು ದಿನದೊಳಗಾಗಿಯೇ ಅವರು ಹುದ್ದೆ ತ್ಯಜಿಸಿದ್ದರೆ `ಗಳಿಸಿದ್ದ' ಅಷ್ಟೋ ಇಷ್ಟೋ ಮರ್ಯಾದೆಯಾದರೂ ಉಳಿದುಕೊಳ್ಳುತ್ತಿತ್ತು. ಆದರೆ, ಸರಣಿ ಅಪರಾಧ ಕೃತ್ಯಗಳು ತಮ್ಮ ಕಣ್ಣೆದುರು ನಡೆಯುತ್ತಿದ್ದರೂ ಕಣ್ಣು ಮುಚ್ಚಿ ಕುಳಿತಿದ್ದ ಭಾಸ್ಕರ್ ರಾವ್ ಈಗ ಆ ಅವಕಾಶವನ್ನೂ ಕಳೆದುಕೊಂಡಿದ್ದಾರೆ. ಕಚೇರಿಯ ಸಿಬ್ಬಂದಿ, ಬೆಂಬಲಿಗರು ಹಾಗೂ ಪುತ್ರನ ಬಂಧನವಾಗಿದೆ. ಇನ್ನುಳಿದಿರುವುದು ಭ್ರಷ್ಟಾಚಾರ ಕ್ಕೆ ಇಂಬು ನೀಡಿದ ಲೋಕಾಯುಕ್ತರ ಬಂಧನ ಮಾತ್ರ. ದೇಶಕ್ಕೆ ಮಾದರಿಯಾದ ಲೋಕಾಯುಕ್ತ ಕಾಯ್ದೆ ಹೊಂದಿ ರುವ ರಾಜ್ಯ ಎಂಬ ಕೀರ್ತಿಗೆ ಕರ್ನಾಟಕ ಪಾತ್ರವಾಗಿತ್ತು. ಆದರೆ, ಆ ಸಂಸ್ಥೆಯ ಮರ್ಯಾದೆಯನ್ನು ಹರಾಜು ಹಾಕಿದ ಕೀರ್ತಿ ಭಾಸ್ಕರ್‍ರಾವ್‍ರಿಗೆ ಸಂದಿದೆ. ಮಹಾಭಿಯೋಗದ ಮೂಲಕ ಸರ್ಕಾರ ಅಧಿಕಾರದಿಂದ ಹೊರದಬ್ಬುವುದಕ್ಕೆ ಮುನ್ನ ಅವರೇ ಹುದ್ದೆ ತ್ಯಜಿಸುವುದು ಸೂಕ್ತ.
ಜಾಮೀನು ಕೋರಿ ಅಶ್ವಿನ್ ರಾವ್ ಅರ್ಜಿ
ಬೆಂಗಳೂರು: ಒಂದು ಕೋಟಿ ಲಂಚ ಹಗರಣದ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಅಶ್ವಿನ್‍ರಾವ್ ಪರ ವಕೀಲರು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಸೋಮವಾರ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಎಸ್‍ಐಟಿ ಅಧಿಕಾರಿಗಳಿಗೆ ಆಕ್ಷೇಪಣೆ ಸಲ್ಲಿಸಲು ಕೋರಿ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದೆ. ಹಗರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅಶ್ವಿನ್‍ರಾವ್ ಪರ ವಕೀಲ ಸಂದೀಪ್ ಪಾಟೀಲ್, ಅರ್ಜಿ ಸಲ್ಲಿಸಿದ್ದರು. ಲೋಕಾಯುಕ್ತರ ಮಗನ ಬಂಧನವಾಗಿದೆ. ಲಂಚ ಪ್ರಕರಣದಲ್ಲಿ ಭಾಸ್ಕರ್ ರಾವ್ ಅವರ ಪಾತ್ರ ಇದೆ ಎಂಬುದನ್ನು ಸಾಬೀತುಪಡಿಸುವುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೆ? ಇಡೀ ಲೋಕಾಯುಕ್ತ ಸಂಸ್ಥೆಯೇ ಕುಸಿಯುತ್ತಿದೆ. ಭಾಸ್ಕರ್ ರಾವ್ ಅವರ ಪದಚ್ಯುತಿಯೊಂದಿಗೆ ಅದರ ಶುದ್ಧಿ ಕಾರ್ಯ ಆರಂಭವಾಗಬೇಕು. ಲೋಕಾಯುಕ್ತರು ರಾಜಿನಾಮೆ ನೀಡಲೇಬೇಕು.
-ಎ.ಟಿ. ರಾಮಸ್ವಾಮಿ, ಮಾಜಿ ಶಾಸಕ