ಕೆಂದ್ರಪಾರ(ಒಡಿಸ್ಸಾ): 37 ವರ್ಷದ ಮಹಿಳೆ ಮೊಸಳೆಯೊಂದಿಗೆ ಕಾದಾಡಿ ತನ್ನ ಪ್ರಾಣ ಉಳಿಸಿಕೊಂಡು ಧೈರ್ಯ ಪ್ರದರ್ಶಿಸಿದ ಘಟನೆ ಒಡಿಸ್ಸಾದ ಸಿಂಗಿರಿ ಗ್ರಾಮದಲ್ಲಿ ನಡೆದಿದೆ. 37 ವರ್ಷದ ಸಬಿತ್ರಿ ಸಮಾಲ್ ಶುಕ್ರವಾರ ಮಧ್ಯಾಹ್ನ ತಮ್ಮ ಮನೆಯ ಪಕ್ಕದಲ್ಲಿರುವ ಹಳ್ಳದಲ್ಲಿ ಪಾತ್ರೆ ತೊಳೆಯಲು ಹೋಗಿದ್ದರು. ಈ ವೇಳೆ ಏಕಾಏಕಿ ಎಗರಿದ ಧೈತ್ಯಾಕಾರದ ಮೊಸಳೆಯೊಂದು ಸಬಿತ್ರಿ ಸಮಾಲ್ ಮೇಲೆ ದಾಳಿ ನಡೆಸಿದೆ.
ಆಕ್ರಮಣ ಮಾಡಿದ ಮೊಸಳೆ ತನ್ನನ್ನು ತಿನ್ನಲು ನೀರಿನೊಳಗೆ ಎಳೆದುಕೊಂಡು ಹೋಯಿತು. ಈ ವೇಳೆ ಧೈರ್ಯಗೆಡದ ಸಬಿತ್ರಿ ಸಮಾಲ್ ತೊಳೆಯಲು ತಂದಿದ್ದ ಅಲ್ಯುಮಿನಿಯಂ ಪಾತ್ರೆ ಹಾಗೂ ದೊಡ್ಡ ಚಮಚದಿಂದ ಮೊಸಳೆ ಹಣೆ ಹಾಗೂ ಕಣ್ಣಿಗೆ ಹೊಡೆದಿದ್ದಾಗಿ ತಿಳಿಸಿದ್ದಾರೆ.
ಪವಾಡ ಸದೃಶವಾಗಿ ಮೊಸಳೆ ಬಾಯಿಂದ ತಪ್ಪಿಸಿಕೊಂಡು ಬಂದಿದ್ದಾಗಿ ಒಡಿಸ್ಸಾದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಬಿತ್ರಿ ಸಮಾಲ್ ಹೇಳಿದ್ದಾರೆ.
ಆ ಹೊಂಡದಲ್ಲಿ ಈ ಮೊದಲು ಯಾವತ್ತೂ ಮೊಸಳೆ ಕಾಣಿಸಿಕೊಂಡ ಉದಾಹರಣೆಗಳಿಲ್ಲ. ಇದೇ ಮೊದಲ ಬಾರಿದೆ ಮೊಸಳೆ ದಾಳಿ ನಡೆದಿರುವುದಾಗಿ ತಿಳಿಸಿದ್ದಾರೆ. ಇನ್ನು ಗಾಯಗೊಂಡಿರುವ ಸಬಿತ್ರಿ ಸಮಾಲ್ ಚಿಕಿತ್ಸೆಗೆ ಧನ ಸಹಾಯ ನೀಡುವುದಾಗಿ ಒಡಿಸ್ಸಾ ಆರಣ್ಯ ಇಲಾಖೆ ತಿಳಿಸಿದೆ.