ನವದೆಹಲಿ: ತಮ್ಮ ಶೈಕ್ಷಣಿಕ ಅರ್ಹತೆಯ ಬಗ್ಗೆ ನಿಜಾಂಶಗಳನ್ನು ತಿರುಚಿದ್ದಕ್ಕೆ ಕೇಂದ್ರ ಮಾನವ ಸಂಪನ್ಮೂಲಗಳ ಸಚಿವೆ ಸ್ಮೃತಿ ಇರಾನಿ ಕೂಡಲೆ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ.
"ರಾಷ್ಟ್ರದ ಶಿಕ್ಷಣ ಸಚಿವೆ ತಮ್ಮ ಸ್ವಂತ ಶೈಕ್ಷಣಿಕ ಅರ್ಹತೆಯ ಬಗ್ಗೆಯೇ ಸುಳ್ಳು ಹೇಳಿದ್ದಾರೆ. ರಾಷ್ಟ್ರದ ಲಕ್ಷ ಲಕ್ಷ ಮಕ್ಕಳ ಮುಂದಿನ ಗತಿಯೇನು? " ಎಂದು ಕಾಂಗ್ರೆಸ್ ವಕ್ತಾರ ಆರ್ ಎಸ್ ಸುರ್ಜೇವಾಲ ಪ್ರಶ್ನಿಸಿದ್ದಾರೆ.
"ಇರಾನಿ ಅವರಿಗೆ ನೈತಿವಾಗಿ ಅಥವಾ ಸಾಂವಿಧಾನಿಕವಾಗಿ ಅಥವಾ ಕಾನೂನಾತ್ಮಕವಾಗಿ ಸಚಿವೆಯ ಸ್ಥಾನದಲ್ಲಿ ಮುಂದುವರೆಯುವ ಅರ್ಹತೆಯಿಲ್ಲ. ಅವರೇ ರಾಜೀನಾಮೆ ನೀಡಬೇಕು ಅಥವಾ ಪ್ರಧಾನಿ ಅವರನ್ನು ಕಿತ್ತೊಗೆಯಬೇಕು" ಎಂದು ಅವರು ಹೇಳಿದ್ದಾರೆ.
ಸಚಿವೆ ತಮ್ಮ ಶೈಕ್ಷಣಿಕ ಅರ್ಹತೆಯ ಬಗ್ಗೆ ಸುಳ್ಳುಹೇಳಿರುವ ದೂರನ್ನು ದೆಹಲಿ ಹೈಕೋರ್ಟ್ ಗಮನಕ್ಕೆ ತಂದುಕೊಂಡಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ರಾಜೀನಾಮೆಗೆ ಆಗ್ರಹಿಸಿದೆ.
ನರೇಂದ್ರ ಮೋದಿ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ ಸುರ್ಜೇವಾಲ, ರಾಷ್ಟ್ರದ ಇಬ್ಬರೂ ಶಿಕ್ಷಣ ಮಂತ್ರಿಗಳು ತಮ್ಮ ಶೈಕ್ಷಣಿಕ ಅರ್ಹತೆಯ ಬಗ್ಗೆ ಸುಳ್ಳು ಮಾಹಿತಿ ಒದಗಿಸಿರುವುದು ದುರಂತ ಎಂದಿದ್ದಾರೆ.
ರಾಜ್ಯ ಸಚಿವ ರಾಮ್ ಶಂಕರ್ ಕಥೇರಿಯಾ ಕೂಡ ನಕಲಿ ಪದವಿಯ ಆರೋಪ ಎದುರಿಸುತ್ತಿದ್ದಾರೆ.