ನವದೆಹಲಿ: ಕಾಂಗ್ರೆಸ್ ಲೋಕಸಭಾ ಸದಸ್ಯ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅವರ ಕೊಲೆ ಪ್ರಕರಣದಲ್ಲಿ ಪಾಕಿಸ್ತಾನಿ ಮೂಲದ ಪತ್ರಕರ್ತೆ ಮೆಹರ್ ತರಾರ್ ಅವರನ್ನು ಪ್ರಶ್ನಿಸಲಾಗುವುದು ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
"ಈ ಪ್ರಕರಣದಲ್ಲಿ ತರಾರ್ ಅವರು ಕೂಡ ಸಂಬಂಧಿಸಿದವರು... ಅವಶ್ಯಕತೆ ಬಿದ್ದರೆ ಅವರನ್ನು ವಿಚಾರಣೆ ಮಾಡಲಾಗುವುದು ಎಂದು ದೆಹಲಿ ಪೊಲೀಸ್ ಮಹಾನಿರ್ದೇಶಕ ಬಿ ಎಸ್ ಬಸ್ಸಿ ತಿಳಿಸಿದ್ದಾರೆ.
ತರೂರ್ ಜೊತೆಗಿನ ತರಾರ್ ಅವರ ಗೆಳೆತನ, ತರೂರ್ ಮತ್ತು ಪುಷ್ಕರ್ ನಡುವೆ ಭಿನ್ನಾಭಿಪ್ರಾಯ ಉಂಟುಮಾಡಿತ್ತು ಎಂದು ವರದಿಯಾಗಿತ್ತು.
ಜನವರಿ ೧ ರಂದು ಅಪರಿಚಿತ ವ್ಯಕ್ತಿಗಳ ಮೇಲೆ ಈ ಕೊಲೆ ಕೇಸನ್ನು ದಾಖಲಿಸಿದ ಮೇಲೆ ದೆಹಲಿ ಪೊಲೀಸರು ವಿಶೇಷ ತನಿಖಾ ದಳವನ್ನು ರಚಿಸಿದ್ದರು. ಪುಷ್ಕರ್ ಜನವರಿ ೧೭ ೨೦೧೪ ರಂದು ಬಹುತಾರ ಹೋಟೆಲ್ ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು.
ತರೂರ್, ಅವರ ಸಿಬ್ಬಂದಿ, ಗೆಳೆಯರು ಮತ್ತು ಲೀಲಾ ಪ್ಯಾಲೇಸ್ ನ ಹೋಟೆಲ್ ಸಿಬ್ಬಂದಿ ಒಳಗೊಂಡಂತೆ ವಿಶೇಷ ತನಿಖಾ ದಳ ಇಲ್ಲಿಯವರೆಗೂ ಸುಮಾರು ೧೫ ಜನರನ್ನು ಪ್ರಶ್ನಿಸಿದ್ದು ಇನ್ನು ಯಾವುದೇ ನಿಖರವಾದ ಮಾಹಿತಿ ಹೊರಬಿದ್ದಿಲ್ಲ.