ಪ್ರಧಾನ ಸುದ್ದಿ

ಪಶ್ಚಿಮ ಬಂಗಾಳದಲ್ಲಿ ಆಲೂ ಬೆಳೆಗಾರನ ಆತ್ಮಹತ್ಯೆ; ಏಳಕ್ಕೆ ಏರಿದ ಸಾವಿನ ಸಂಖ್ಯೆ

Guruprasad Narayana

ಬುರ್ದ್ವಾನ್: ಬಂಪರ್ ಬೆಳೆಯ ಹೊರತಾಗಿಯೂ, ಕೃಷಿ ಸಾಲವನ್ನು ಹಿಂದಿರುಗಿಸಲಾಗದೆ ಪಶ್ಚಿಮ ಬಂಗಾಳದಲ್ಲಿ ಮತ್ತೊಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ರಾಜ್ಯದಲ್ಲಿ ರೈತರ ಸಾವಿನ ಸಂಖ್ಯೆ ಈಗ ಏಳಕ್ಕೆ ಏರಿಕೆಯಾಗಿದೆ.

ಬೀರ್ಭುಮ್ ಜಿಲ್ಲೆಯ ಪಕ್ಕದ ಗ್ರಾಮವಾದ ನಾನೂರಿನಲ್ಲಿ ತನ್ನ ಹೊಲದಲ್ಲಿ ಕೀಟನಾಶಕ ಸೇವಿಸಿ ೩೨ ವರ್ಷದ ಮ್ರಿನಾಲ್ ಕಾಂತಿ ಸರ್ಕಾರ್ ನೆನ್ನೆ ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಅವರನ್ನು ಕೂಡಲೆ ಹತ್ತಿರದ ಆಸ್ಪತ್ರೆಗೆ ಸೇರಿಸಿದ್ದು ನಂತರ ಬುರ್ಧ್ವಾನ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರಗೆ ದಾಖಲು ಮಾಡಿದ್ದರೂ ಅವರ ಆರೋಗ್ಯ ಸ್ಥಿತಿ ಹದಗೆಟ್ಟು ಇಂದು ಮೃತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ ಆಸ್ಪತ್ರೆ ಮೂಲಗಳ ಪ್ರಕಾರ ಈ ರೈತ ನೆನ್ನೆಯೇ ಮೃತಪಟ್ಟಿದ್ದಾರೆ. ಇವರ ಚಿಕ್ಕಪ್ಪ ಬಿಸ್ವಜಿತ್ ಸರ್ಕಾರ್ ಪ್ರಕಾರ ಈ ರೈತ ಬ್ಯಾಂಕ್ ಮತ್ತು ಖಾಸಗಿ ವ್ಯಕ್ತಿಗಳಿಂದ ೩ ಲಕ್ಷ ಸಾಲ ಪಡೆದಿದ್ದರು. ಆದರೆ ಆಲುಗಡ್ಡೆ ದರ ಚೀಲಕ್ಕೆ ೧೨೦ ರೂ ನಿಂದ ೧೦೦ ರೂಗೆ ಕುಸಿದಿರುವುದರಿಂದ ಈ ಸಾಲವನ್ನು ಹಿಂದಿರುಗಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಪ್ರತಿ ಚೀಲದಲ್ಲು ೫೦ ಕೆಜಿ ಆಲುಗಡ್ಡೆ ಇರುತ್ತದೆ.

ಕಳೆದ ೧೫ ದಿನಗಳಿಂದ ಬುರ್ಧ್ವಾನ್ ಜಿಲ್ಲೆಯಲ್ಲೇ ೬ ಸಾವು ವರದಿಯಾಗಿದೆ. ಒಳ್ಳೆಯ ಹವಾಮಾನ ಮತ್ತು ಹೆಚ್ಚಿನ ಬೆಳೆಗಾರರಿಂದ ಈ ವರ್ಷ ರಾಜ್ಯದ ಆಲುಗಡ್ಡೆ ಉತ್ಪಾದನೆಯಲ್ಲಿ ೧೫% ಏರಿಕೆ ಕಂಡಿದ್ದು, ೧೧೦ ಲಕ್ಷ ಟನ್ನುಗಳು ಹೆಚ್ಚುವರಿ ಉತ್ಪಾದನೆಯಾಗಿದೆ ಎಂದು ಪಶ್ಚಿಮಬಂಗಾಳ ಶೀತಲೀಕರಣ ದಾಸ್ತಾನು ಸಂಘದ ಮೂಲಗಳು ತಿಳಿಸಿವೆ.

SCROLL FOR NEXT